ಸಾರಾಂಶ
ಗದಗ: ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಬೆಳೆಸುವುದು ಹಾಗೂ ಕಲಿಕೆಯಲ್ಲಿ ಸಂತೋಷವನ್ನುಂಟು ಮಾಡುವುದು ಶಿಕ್ಷಕರ ಕರ್ತವ್ಯವಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನೇತಾರರಾಗಿದ್ದಾರೆ ಎಂದು ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.
ಅವರು ಇತ್ತೀಚೆಗೆ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಶಹರ ವಲಯದ ಸರ್ಕಾರಿ-ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಒಂದು ದಿನದ ಪ್ರೇರಣಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳನ್ನು ನಿರ್ದಿಷ್ಟ ಜ್ಞಾನ ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ಸಜ್ಜುಗೊಳಿಸುವುದು, ಅವರಲ್ಲಿ ಸಾಮಾಜಿಕ ಕಾಳಜಿ ಮೂಡಿಸುವುದು ಹಾಗೂ ಅವರು ನಿರ್ವಹಿಸುವ ಕಾರ್ಯದಲ್ಲಿ ಶ್ರೇಷ್ಠತೆ ಸೇರಿಸುವುದು ಶಿಕ್ಷಣದ ರಾಜ್ಯ ನೀತಿಯಾಗಿದೆ ಎಂದರು.
ಪ್ರತಿ ಶಿಕ್ಷಣ ಸಂಸ್ಥೆ ಅಥವಾ ಶಿಕ್ಷಕರು ಮುಂದಾಲೋಚನೆಯ ಕಾರ್ಯಸಾದುವಾದ ಯೋಜನೆ ಹೊಂದಿರಬೇಕಾಗುತ್ತದೆ, ಮಾಸಿಕ ಕಾರ್ಯಕ್ರಮ ಮುಂತಾದವುಗಳ ಕುರಿತು ಸಮಗ್ರ ಯೋಜನೆ ರೂಪಿಸಿಕೊಂಡು ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಈ ಉದ್ದೇಶ ಸಾಕಾರಗೊಳಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ 2024-25ನೇ ಶೈಕ್ಷಣಿಕ ವರ್ಷವನ್ನು ಮಕ್ಕಳ ಶೈಕ್ಷಣಿಕ ಬಲವರ್ಧನೆ ವರ್ಷವೆಂದು ಘೋಷಿಸಿದೆ, ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದೆ.
ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ತಂಡವಾಗಿ ಕಾರ್ಯ ನಿರ್ವಹಿಸುವಂತೆ ಇನ್ನಷ್ಟು ಪ್ರೇರಿಸುವ ದೃಷ್ಟಿಯಿಂದ ಈ ಪ್ರೇರಣಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಪ್ರತಿ ಶಿಕ್ಷಕರು ತಮ್ಮ ತರಗತಿ ವಿಷಯದ ಪಠ್ಯಪುಸ್ತಕವನ್ನು ಕನಿಷ್ಠ ಎರಡು ಬಾರಿಯಾದರೂ ಅಧ್ಯಯನ ಮಾಡಬೇಕು. ಶಿಕ್ಷಕರು ಪ್ರತಿ ತರಗತಿಯಲ್ಲಿ ಅರ್ಥಪೂರ್ಣ ಕಲಿಕೆ ಆಗುವ ನಿಟ್ಟಿನಲ್ಲಿ ಪಾಠ ಯೋಜನೆ ತಯಾರಿಸಿಕೊಂಡು ಅದಕ್ಕೆ ಅನುಗುಣವಾಗಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಪಾಠಬೋಧನೆ ಮಾಡಬೇಕು, ಅಲ್ಲದೇ ಮೌಲ್ಯ ಬೆಳೆಸುವಲ್ಲಿ ಮಕ್ಕಳಿಗೆ ಮೌಲ್ಯಯುತ ನೀತಿ-ಕಥೆ ಹೇಳಬೇಕು. ಪ್ರಾರ್ಥನಾ ಅವಧಿಯಲ್ಲಿ ಶಿಕ್ಷಕರು ತಮ್ಮ ಮಕ್ಕಳು ಸ್ಪಷ್ಟವಾಗಿ ರಾಷ್ಟ್ರಗೀತೆ ಹೇಳುವಂತೆ ತರಬೇತಿ ನೀಡಬೇಕು. ಮಕ್ಕಳಿಗೆ ಅಕ್ಷರ ಕಲಿಕೆ, ಶುದ್ಧ ಬರಹ, ಸ್ಪಷ್ಟ ಓದು ಬರುವ ಹಾಗೆ ಶಿಕ್ಷಕರು ಅವರಿಗೆ ತರಬೇತಿ ನೀಡಿ ಸಿದ್ಧಗೊಳಿಸಬೇಕು ಎಂದರು.
ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎಸ್.ಡಿ. ಕನವಳ್ಳಿ ಮಾತನಾಡಿ, ಪ್ರತಿ ಶಿಕ್ಷಕರು ಆಂತರಿಕ ಪ್ರೇರಣೆ ಹೊಂದಬೇಕು. ಎಲ್ಲರ ಉದ್ದೇಶ ತರಗತಿ ಕೋಣೆಯಲ್ಲಿ ಶಿಕ್ಷಣ ಕೊಡುವುದಾಗಿದೆ ಆದರೆ ಯಾವ ಶಿಕ್ಷಕ ತರಗತಿ ಕೊಠಡಿಯೊಳಗೆ ಹೋದಾಗ ಮಕ್ಕಳ ಮುಖ ಅರಳುತ್ತದೆಯೋ ಯಾವ ಶಿಕ್ಷಕರು ತರಗತಿಯಿಂದ ಹೊರಗೆ ಹೋದಾಗ ಮಕ್ಕಳಿಗೆ ಬೇಸರವಾಗುತ್ತದೆಯೋ ಅವರೇ ನಿಜವಾದ ಉತ್ತಮ ಶಿಕ್ಷಕರು. ಆ ರೀತಿ ನೀವೆಲ್ಲರೂ ಕಾರ್ಯ ನಿರ್ವಹಿಸಬೇಕು ಎಂದರು.
ಈ ವೇಳೆ ಜ.ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿದರು.
ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶರಣಪ್ಪ ನಾಗರಳ್ಳಿ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ.ಎಚ್. ಕಡಿವಾಲ ಹಾಗೂ ಇತರರು ಇದ್ದರು. ಬಿ.ಆರ್.ಪಿ. ಶಾಮ ಲಾಂಡೆ ಸ್ವಾಗತಿಸಿದರು. ಬಿ.ಆರ್.ಪಿ ಪ್ರಕಾಶ ಮಂಗಳೂರ ನಿರೂಪಿಸಿದರು. ಸಿ.ಆರ್.ಪಿ ರವಿ ಹೆಬ್ಬಳ್ಳಿ ವಂದಿಸಿದರು.