ಶಿಕ್ಷಕರೇ ನಿಜವಾದ ರಾಷ್ಟ್ರ ನಿರ್ಮಾಪಕರು

| Published : Dec 30 2024, 01:00 AM IST

ಸಾರಾಂಶ

ಮಾನವ ಇತಿಹಾಸದಲ್ಲಿ ಭಾರತ ಅದ್ಭುತ ಪ್ರಾಜ್ಞರು ಹಾಗೂ ಮೇಧಾವಿಗಳನ್ನು ನಿರ್ಮಿಸಿದೆ. ದೂರದೃಷ್ಟಿಯುಳ್ಳ ಮೇಧಾವಿಗಳು ಕಟ್ಟಿದ ರಾಷ್ಟ್ರ ನಮ್ಮದು. ರಾಷ್ಟ್ರದ ಭವಿಷ್ಯ ಶಿಕ್ಷಕರ ಕೈಯಲ್ಲೇ ಇರುವುದರಿಂದ ನಿಸ್ಸಂದೇಹವಾಗಿ .ಶಿಕ್ಷಕರೇ ರಾಷ್ಟ್ರನಿರ್ಮಾಪಕರು ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತೀ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಮಾನವ ಇತಿಹಾಸದಲ್ಲಿ ಭಾರತ ಅದ್ಭುತ ಪ್ರಾಜ್ಞರು ಹಾಗೂ ಮೇಧಾವಿಗಳನ್ನು ನಿರ್ಮಿಸಿದೆ. ದೂರದೃಷ್ಟಿಯುಳ್ಳ ಮೇಧಾವಿಗಳು ಕಟ್ಟಿದ ರಾಷ್ಟ್ರ ನಮ್ಮದು. ರಾಷ್ಟ್ರದ ಭವಿಷ್ಯ ಶಿಕ್ಷಕರ ಕೈಯಲ್ಲೇ ಇರುವುದರಿಂದ ನಿಸ್ಸಂದೇಹವಾಗಿ .ಶಿಕ್ಷಕರೇ ರಾಷ್ಟ್ರನಿರ್ಮಾಪಕರು ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತೀ ಅಭಿಪ್ರಾಯಪಟ್ಟರು.ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ, ಕರ್ನಾಟಕದ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನದ ಶಮಾನೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀರಾಮಕೃಷ್ಣ ಶಿಕ್ಷಕರ ಸಮ್ಮೇಳನದ ನೇತೃತ್ವ ವಹಿಸಿ ಮಾತನಾಡಿದರು.ನಮ್ಮ ಶಿಕ್ಷಕರು ಆಸಕ್ತಿಯಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಕಟಿಬದ್ಧತೆ, ದಕ್ಷತೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಮಾತೃಭೂಮಿಯ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು. ಪ್ರಾಚೀನ ಭಾರತ ನಿರ್ಮಾಣಗೊಂಡದ್ದು ಬಲಿಷ್ಠ, ಆರೋಗ್ಯವಂತ ಮನಸ್ಸುಗಳನ್ನು ಕಟ್ಟುವುದರ ಮೂಲಕ.ಮನಸ್ಸೇಶಕ್ತಿಯ ಆಗರ ಎಂದರು. ಮನಸ್ಸುಜಾಗೃತವಾದರೆ ಏಕಾಗ್ರತೆ, ಗ್ರಹಣ ಸಾಮರ್ಥ್ಯ ತಾನಾಗಿಯೇ ಸಿದ್ಧಿಸುತ್ತದೆ. ಮನಸ್ಸನ್ನು ಗೆದ್ದವರು ಜಗತ್ತನ್ನೇ ಗೆಲ್ಲಬಲ್ಲರು.ಶಕ್ತಿವಂತ, ಶ್ರದ್ಧಾವಂತ ಹಾಗೂ ನೀತಿವಂತರಾದ ಯುವಕ ಯುವತಿಯರು ಶಿಕ್ಷಕರಾದರೆ ಭಾರತವನ್ನು ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದರು. ಶಿಕ್ಷಣ ವೃತ್ತಿಯ ಪಾವಿತ್ರ್ಯತೆ ಸವಾಲುಗಳು ಸರಿಯುತ್ತರ ಎಂಬ ವಿಚಾರವಾಗಿ ಉಪನ್ಯಾಸ ನೀಡಿದ ಮೈಸೂರಿನ ಶ್ರೀರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜೀರವರು, ಶಿಕ್ಷಕರು ನಿರಂತರ ಕಲಿಯುವ ಪ್ರಕ್ರಿಯೆಯಲ್ಲಿ ತೊಡಗಿರಬೇಕು. ಜ್ಞಾನಕ್ಕೆ ಸಮಾನವಾದುದು ಮತ್ತೊಂದಿಲ್ಲ. ಮನಸ್ಸನ್ನು ಕಟ್ಟುವ, ಉನ್ನತ ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಜವಾಬ್ದಾರಿ ಹೊಂದಿರಬೇಕು. ಹೊಸ ವಿಚಾರ, ತತ್ತ್ವ ಸಂಶೋಧನೆಗಳ ಬಗ್ಗೆ ಸದಾ ತಿಳಿಯುತ್ತಿರಬೇಕು. ಆಗಷ್ಟೇ ಶಿಕ್ಷಕರು ರಾಷ್ಟ್ರರಕ್ಷಕರಾಗಬಲ್ಲರು ಎಂದು ನುಡಿದರು.ಆಂಧ್ರ ಪ್ರದೇಶ, ಕಡಪರಾಮಕೃಷ್ಣ ಮಿಷನ್‌ನ ಮುಖ್ಯಸ್ಥ ಸ್ವಾಮಿ ಅನುಪಮಾನಂದಜೀ ರವರು, ಆದರ್ಶಗುರು ಶ್ರೀರಾಮಕೃಷ್ಣ ಎಂಬ ವಿಚಾರವಾಗಿ ಮಾತನಾಡಿ ಶಿಕ್ಷಕ ತನ್ನ ಜವಾಬ್ದಾರಿಯರಿತು ಮಕ್ಕಳ ಮಟ್ಟಕ್ಕೆ ಇಳಿದು ಅರ್ಥವಾಗುವಂತೆ ಕಲಿಸಬೇಕು. ವಿಷಯ ಸಂಗ್ರಹದೊಂದಿಗೆ ಶಿಕ್ಷಕನು ಜ್ಞಾನದ ಹಂಬಲವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಹೇಗೆ ಕಲಿಯಬೇಕು ಎಂಬುದನ್ನು ಕಲಿಸಬೇಕು ಎಂದರು. ಕಲಿಯಲು ಆಸಕ್ತಿ ಉಳ್ಳವರೇ ಕಲಿಸಲು ಯೋಗ್ಯರು ಎಂಬ ವಿಚಾರವಾಗಿ ಮಾತನಾಡಿದ ರಾಣೇಬೆನ್ನೂರಿನರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀರವರು, ವಿಷಯಗಳ ವ್ಯಾಪ್ತಿ, ಸಿದ್ಧಾಂತಗಳು ಹಾಗೂ ಉಪಯುಕ್ತತೆ ನಿರಂತರ ಬದಲಾವಣೆಯಾಗುತ್ತಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮಜೀವಿತಾವಧಿಯ ಕೊನೆವರೆಗೂ ಕಲಿಯುತ್ತಿರಬೇಕು. ಕಲಿಯುವವರು ಹಾಗೂ ಕಲಿಸುವವರಿಬ್ಬರೂ ವಿನಯ ಭಾವನೆ ಹೊಂದಿರಬೇಕು.ಶಿಕ್ಷಕರಾದವರು ತಮ್ಮ ವೃತ್ತಿ, ವಿಷಯ ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಬೋಧನಾಸಕ್ತಿ ಹಾಗೂ ಜ್ಞಾನದ ಹಸಿವು ಇರಬೇಕು. ಇದು ಕಲಿಯುಗವಾಗದೆ ಕಲಿಯುವ ಯುಗವಾಗಬೇಕು ಎಂದು ನುಡಿದರು.ತುಮಕೂರು ಡಯಟ್‌ನ ಉಪನಿರ್ದೇಶಕ ಕೆ. ಮಂಜುನಾಥ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪನವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲಾದ ಮುಖ್ಯಸ್ಥ ಸ್ವಾಮಿಯುಕ್ತೇಶಾನಂದಜೀ ಹಾಗೂ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಕೆ.ವಿ.ಅನಸೂಯ ಸಂವಾದ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಬೆಂಗಳೂರಿನ ಶ್ರೀರಾಮಕೃಷ್ಣ ವಿದ್ಯಾರ್ಥಿ ಮಂದಿರಮ್‌ನ ಮುಖ್ಯಸ್ಥ ಸ್ವಾಮಿತದ್ಯುಕ್ತಾನಂದಜೀರವರು ಮತ್ತು ಕೋಲ್ಕತಾ ಬೇಲೂರು ಮಠದ ರಾಮಕೃಷ್ಣ ಮಿಷನ್ ವಿವೇಕಾನಂದ ವಿಶ್ವವಿದ್ಯಾಲಯದ ಪೂಜ್ಯ ಸ್ವಾಮಿ ಶಿವಪೂರ್ಣಾನಂದಜೀ ಮಹಾರಾಜ್‌ರವರು ಭಗವನ್ನಾಮ ಸಂಕೀರ್ತನೆಯನ್ನು ನೆರವೇರಿಸಿಕೊಟ್ಟರು.ಬೆಂಗಳೂರು ಬಸವನಗುಡಿ ರಾಮಕೃಷ್ಣ ಮಠದ ಪೂಜ್ಯ ಸ್ವಾಮಿ ವೀರೇಶಾನಂದಜೀರವರು ಆಧ್ಯಾತ್ಮಿಕಜೀವನದ ಮೂರು ಸ್ತಂಭಗಳು: ಪ್ರಾರ್ಥನೆ, ಜಪ ಮತ್ತು ಧ್ಯಾನ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು. ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀರವರು ಸ್ವಾಗತಿಸಿ, ವಂದಿಸಿ, ಪೂಜ್ಯ ಸ್ವಾಮಿ ಪ್ರಕಾಶಾನಂದಜೀರವರು ನಿರೂಪಿಸಿದರು.ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ಸುಮಾರು ಆರು ನೂರು ಶಿಕ್ಷಕರು ಹಾಗೂ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು ಒಂದು ಸಾವಿರ ಭಕ್ತರು ಭಾಗವಹಿಸಿದ್ದರು.