ಇಂದಿನ ನಮ್ಮ ಬೆಳವಣಿಗೆಗೆ ಶಿಕ್ಷಕರೇ ಕಾರಣ: ಶಾಸಕಿ ಅನ್ನಪೂರ್ಣ ತುಕಾರಾಂ

| Published : Mar 24 2025, 12:35 AM IST

ಇಂದಿನ ನಮ್ಮ ಬೆಳವಣಿಗೆಗೆ ಶಿಕ್ಷಕರೇ ಕಾರಣ: ಶಾಸಕಿ ಅನ್ನಪೂರ್ಣ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂದಿನ ನಮ್ಮ ಬೆಳವಣಿಗೆಗೆ ಶಿಕ್ಷಕರೇ ಕಾರಣ.

ವಿಜಯನಗರ ಕಾಲೇಜಿನಲ್ಲಿ ಗುರುವಂದನಾ, ಸ್ನೇಹ ಸಮ್ಮೇಳನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂದಿನ ನಮ್ಮ ಬೆಳವಣಿಗೆಗೆ ಶಿಕ್ಷಕರೇ ಕಾರಣ ಎಂದು ವಿಜಯನಗರ ಕಾಲೇಜಿನ ಹಳೇ ವಿದ್ಯಾರ್ಥಿ ಮತ್ತು ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಹೇಳಿದರು.

ನಗರದ ವಿಜಯನಗರ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ, ಸ್ನೇಹ ಸಮ್ಮೇಳನ ಮತ್ತು ಸಾಧನೆಗೈದ ಹಳೇ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯನಗರ ಕಾಲೇಜು ನಮ್ಮ ವ್ಯಕ್ತಿತ್ವ ರೂಪಿಸಿ ಜೀವನದ ಬೆಳವಣಿಗೆಗೆ ದಾರಿಯಾಗಿದೆ. ಇವತ್ತು ವಿಧಾನಸೌಧದಲ್ಲಿ ಮಾತನಾಡುತ್ತೇನೆ ಅಂದರೆ ಇಲ್ಲಿನ ಮಣ್ಣಿನ ಸಂಸ್ಕೃತಿಯೇ ಕಾರಣ. ಇದಕ್ಕೆ ನಾನು ಚಿರುಋಣಿ ಆಗಿರುತ್ತೇನೆ. ಕಾಲೇಜಿನಲ್ಲಿ ಸಾಹಿತ್ಯದ ಅಭಿರುಚಿ, ಮೌಲ್ಯಾಧರಿತ ಶಿಕ್ಷಣ ಕಲಿಸಿಕೊಟ್ಟಿರುವುದರಿಂದ ಈಗ ನಮ್ಮ ಬದುಕು ಉತ್ತಮವಾಗಿದೆ ಎಂದರು.

ವಿದ್ಯಾರ್ಥಿಗಳ ಬಾಳಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಸಮಾಜದಲ್ಲಿ ಬೆಳೆದು ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ. ಇತಿಹಾಸ, ಸಾಹಿತ್ಯದ ಬಗ್ಗೆ ಏನೂ ಗೊತ್ತಿಲ್ಲ. ಶಿಕ್ಷಕರೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ದಾರಿ ದೀಪವಾಗಬೇಕು ಎಂದರು.

ವಿಜಯನಗರ ಮಹಾವಿದ್ಯಾಲಯ ನಿತ್ಯ ಶಿಕ್ಷಣ ದಾಸೋಹ ಮಾಡುತ್ತಿದೆ. ಇದಕ್ಕೆ ಕಾಲೇಜಿನ ಆಡಳಿತ ಮಂಡಳಿಯೇ ಕಾರಣ. ಇಲ್ಲಿ ಕಲಿತು ಹಲವು ಕ್ಷೇತ್ರದಲ್ಲಿ ಸಾಧಕ ಪರಿಣಿತರಿದ್ದಾರೆ. ಕಾಲೇಜಿಗೆ ಬಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ ಮಾತನಾಡಿ, ಶ್ರಮಪಟ್ಟರೆ ಎಲ್ಲವೂ ಸಾಧ್ಯ. ವಿಜಯನಗರ ಮಹಾವಿದ್ಯಾಲಯ ಬಡ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ. ಈ ಕಾಲೇಜಿನಲ್ಲಿ ಕಲಿತು ಈಗ ಎರಡು ಬಾರಿ ಶಾಸಕನಾಗಿರುವೆ. ವಿದ್ಯಾರ್ಥಿ ಜೀವನದಲ್ಲಿ ಓದು, ಆಟದ ಕಡೆಗೆ ಗಮನ ಹರಿಸಬೇಕು ಎಂದರು.

ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜ.ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎಂ. ಪ್ರಭುಗೌಡ ಸ್ವಾಗತಿಸಿದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪತ್ತಿಕೊಂಡ ಶ್ರೀಪಾದ ಪ್ರಾಸ್ತಾವಿಕವಾಗಿ ಮಾತನಾಡಿದರು.

ನ್ಯಾಯಾಧೀಶರಾಗಿರುವ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಸಂದೀಪ್ ಪಾಟೀಲ್, ಹುಲುಗಪ್ಪ ದೇವರಮನೆ, ಬಸವರಾಜ್, ಕೆ. ಅಂಬಣ್ಣ ಸೇರಿದಂತೆ ಸಾಧನೆಗೈದ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ಮೆಟ್ರಿ, ನಿವೃತ್ತ ಪ್ರಾಚಾರ್ಯ ಚನ್ನಬಸವ, ಕಾಲೇಜಿನ ಹಳೇ ವಿದ್ಯಾರ್ಥಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ವೈದ್ಯರು, ವಕೀಲರು, ಉಪನ್ಯಾಸಕರು, ಪೋಲೀಸರು ಹಾಗೂ ವೀ.ವಿ. ಸಂಘದ ಕಾರ್ಯಕಾರಿ ಸಮಿತಿಯ ಸದ್ಯಸ್ಯರು, ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.