ಸಾರಾಂಶ
ಇಂದಿನ ಶಿಕ್ಷಕರು ಸಕ್ರಿಯವಾಗಿ ಓದಿನಲ್ಲಿ ತೊಡಗಿಕೊಳ್ಳಬೇಕು. ಈಗಿನ ವಿದ್ಯರ್ಥಿಗಳು ತುಂಬಾನೇ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಿದ್ದರೆ ಶಿಕ್ಷಕರು ಅಷ್ಟೇ ತಯಾರಿ ಮಾಡಿಕೊಳ್ಳಬೇಕು.
ಹಾವೇರಿ: ಶಿಕ್ಷಣವು ಮನುಷ್ಯನಿಗೆ ಉತ್ತಮ ಮೌಲ್ಯಗಳನ್ನು ಕೌಶಲ್ಯಗಳೊಂದಿಗೆ ಮತ್ತು ಅನುಭವಗಳೊಂದಿಗೆ ನೀಡುತ್ತದೆ. ಬದುಕಿನಲ್ಲಿ ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುವವರೇ ಶಿಕ್ಷಕರು ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ತಿಳಿಸಿದರು.ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಾವೇರಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮದಿನೋತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಕರು ಸಕ್ರಿಯವಾಗಿ ಓದಿನಲ್ಲಿ ತೊಡಗಿಕೊಳ್ಳಬೇಕು. ಈಗಿನ ವಿದ್ಯರ್ಥಿಗಳು ತುಂಬಾನೇ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಿದ್ದರೆ ಶಿಕ್ಷಕರು ಅಷ್ಟೇ ತಯಾರಿ ಮಾಡಿಕೊಳ್ಳಬೇಕು. ಶಾಲೆಗಳಲ್ಲಿ ಶಿಕ್ಷಕರು ಕೊರತೆ ಇದೆ. ಇದರ ನಡುವೆಯೇ ಸರ್ಕಾರದ ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿ ಶಿಕ್ಷಕರನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಶಿಕ್ಷಕರಿಗೆ ಅವರ ಕೆಲಸದ ಜತೆಗೆ ಇತರೆ ಕೆಲಸಗಳು ಹೆಚ್ಚಾಗಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಣವು ಕುಂಠಿತಗೊಳ್ಳುತ್ತಿದೆ ಎಂದರು. ಇಂದಿನ ಶಿಕ್ಷಕರು ಪ್ರಶಸ್ತಿಗಾಗಿ ಮುಗಿಬಿದ್ದಿದ್ದಾರೆ. ಪ್ರಶಸ್ತಿಯು ತಾನಾಗಿಯೇ ಬರಬೇಕೆ ಹೊರತು ಅರ್ಜಿ ಸಲ್ಲಿಸಿ ಪಡೆದುಕೊಳ್ಳುವುದಲ್ಲ. ಶಿಕ್ಷಕರಾದವರು ತಮ್ಮ ಸಾಮರ್ಥ್ಯದ ಮೂಲಕ ಪ್ರಶಸ್ತಿ ಪಡೆದುಕೊಳ್ಳಬೇಕು. ಎಷ್ಟೋ ಶಿಕ್ಷಕರು ಇಂದು ಸಾಮರ್ಥ್ಯ ಹೊಂದಿದರೂ ಪ್ರಶಸ್ತಿಯಿಂದ ವಂಚಿರಾಗುತ್ತಿದ್ದಾರೆ. ಸಾಮರ್ಥ್ಯ ಹೊಂದಿದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಪದ್ಧತಿ ಅಳವಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿ, ನಿಜವಾದ ಸಮಾನತೆಯನ್ನು ಶಾಲಾ ಶಿಕ್ಷಕರಲ್ಲಿ ಕಾಣುತ್ತಿದ್ದೇವೆ. ಜೀವನದಲ್ಲಿ ತಂದೆ- ತಾಯಿಗಳಂತೆ ಶಿಕ್ಷಕರ ಪಾತ್ರವು ಬಹಳ ಮಹತ್ವದಾಗಿದೆ. ಬದುಕಿನ ಕೌಶಲಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ನಮ್ಮ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು. ಜಿಪಂ ಮುಖ್ಯ ಕಾರ್ಯದರ್ಶಿ ಪುನೀತ್ ಮಾತನಾಡಿ, ಇಡೀ ಜಗತ್ತಿನಲ್ಲೇ ಶ್ರೇಷ್ಠವಾದ ಎರಡು ವೃತ್ತಿಗಳಲ್ಲಿ ರೈತ ಮತ್ತು ಶಿಕ್ಷಣ ವೃತ್ತಿ ಅತೀ ಮುಖ್ಯವಾಗಿವೆ. ನಾವು ದೇವರನ್ನು ಕಂಡಿಲ್ಲ. ಆ ದೇವರನ್ನು ನಾವು ನಮ್ಮ ತಂದೆ -ತಾಯಿ, ಶಿಕ್ಷಕರು ಹಾಗೂ ವೈದ್ಯರ ರೂಪದಲ್ಲಿ ಕಾಣುತ್ತಿದ್ದೇವೆ. ಶಿಕ್ಷಕರು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರು ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದರು. ಇದೇ ಸಂದರ್ಭದಲ್ಲಿ 23 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು. ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಯಟ್ ಉಪನಿರ್ದೇಶಕ ಹಾಗೂ ಪ್ರಾಚಾರ್ಯ ಝೆಡ್.ಎಂ. ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ್ ದಂಡಿನ ಸ್ವಾಗತಿಸಿದರು.