18ರಿಂದ ಶಿಕ್ಷಕರ ವರ್ಗ: ಆನ್ಲೈನಲ್ಲಿ ಅರ್ಜಿ

| Published : Mar 16 2024, 01:50 AM IST

ಸಾರಾಂಶ

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ 2024-25ನೇ ಸಾಲಿನ ವರ್ಗಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ವರ್ಗಾವಣೆ ಬಯಸುವ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ 2024-25ನೇ ಸಾಲಿನ ವರ್ಗಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ವರ್ಗಾವಣೆ ಬಯಸುವ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೌನ್ಸೆಲಿಂಗ್‌ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿದೆ.ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಅಧಿಕಾರಿಗಳು (ಸಕ್ಷಮ ಪ್ರಾಧಿಕಾರ) ಮಾ.18ರಿಂದ ಶಾಲೆಗಳ ವಲಯ ನಮೂದಿಸುವುದು ಸೇರಿದಂತೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಸೂಚಿಸಿದ್ದಾರೆ.

ಶಿಕ್ಷಕರ ವರ್ಗಾವಣೆಯಲ್ಲಿ ಕೆಲ ಸಮಸ್ಯೆಗಳನ್ನು ಸರಿಪಡಿಸಲು ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ಶಿಕ್ಷಕರ ಸಂಘ ಕೋರಿತ್ತು. ಆದರೆ, ತಿದ್ದುಪಡಿ ಸಾಧ್ಯವಾಗದ ಕಾರಣ ಈ ಹಿಂದಿನ ಕಾಯ್ದೆಯ ಪ್ರಕವಾರವೇ ವರ್ಗಾವಣೆ ಪ್ರಕ್ರಿಯೆ ನಡೆಸಲು ಇಲಾಖೆ ಸೂಚಿಸಿದೆ. ಪ್ರಮುಖವಾಗಿ ವಲಯವಾರು ವರ್ಗಾವಣೆಗೆ ಈ ಹಿಂದೆ ಇದ್ದಂತೆ ಶೇ.4, ಕೋರಿಕೆ ವರ್ಗಾವಣೆ ಜಿಲ್ಲೆಯ ಒಳಗೆ ಶೇ.7, ವಿಭಾಗದ ಒಳ ಮತ್ತು ಹೊರಗಿನ ಕೋರಿಕೆ ವರ್ಗಾವಣೆಗೆ ತಲಾ ಶೇ.2ರಷ್ಟು ಮಿತಿ ನಿಗದಿಪಡಿಸಲಾಗಿದೆ. ಗಂಭೀರ ಕಾಯಿಲೆ, ಪತಿ ಪತ್ನಿ ವರ್ಗಾವಣೆ, ಅಂಗವಿಕಲತೆ, 12 ವರ್ಷದೊಳಗಿನ ಮಕ್ಕಳನ್ನು ಹೋಂದಿರುವ ವಿಧವೆ, ವಿಧುರ ಶಿಕ್ಷಕರು, ವಿಚ್ಚೇದಿತ ಶಿಕ್ಷಕರು, ಗರ್ಭಿಣಿ, 6 ವರ್ಷಕ್ಕಿಂತ ಕಡಿಮೆ ಮಕ್ಕಳಿರುವ ಶಿಕ್ಷಕರು ಸೇರಿದಂತೆ ಏಳು ಆದ್ಯತೆಯ ಮೇಲೂ ವರ್ಗಾವಣೆ ಕೋರಲು ಅವಕಾಶ ಮುಂದುವರೆಸಲಾಗಿದೆ. ಇನ್ನು, ಜಿಲ್ಲೆಯ ಒಳಗಿನ ವರ್ಗಾವಣೆಗೆ ಆಯಾ ಜಿಲ್ಲಾ ಉಪನಿರ್ದೇಶಕರುಗಳು, ವಿಭಾಗದ ಒಳಗಿನ ವರ್ಗಾವಣೆಗೆ ವಿಭಾಗೀಯ ಜಂಟಿ ನಿರ್ದೇಶಕರು, ವಿಭಾಗದ ಹೊರಗಿನ ವರ್ಗಾವಣೆಗೆ ಪ್ರಾಥಮಿಕ ಶಿಕ್ಷಣ ನಿರ್ದೇಶಕರು, ಪ್ರೌಢ ಶಿಕ್ಷಣ ನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹಾಗಾಗಿ ಎಲ್ಲ ವರ್ಗಾವಣೆಯೂ ಇಲಾಖೆಯ ಕೇಂದ್ರ ಕಚೇರಿಯ ಉನ್ನತ ಅಧಿಕಾರಿಗಳನ್ನೇ ಅವಲಂಭಿಸಿರುವುದಿಲ್ಲ.