ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಅವರು ಹೂವಿನ ಕುಂಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗೋಣಿಕೊಪ್ಪ: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಅವರು ಹೂವಿನ ಕುಂಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯದ ಕೊರತೆ ಕಾಣುತ್ತಿದ್ದು, ವಿದ್ಯಾರ್ಥಿಗಳಲ್ಲಿ ಗುರು-ಶಿಷ್ಯ ಪರಂಪರೆಯ ಮಹತ್ವ ಹಾಗೂ ಶಿಕ್ಷಕರ ಮೇಲಿನ ಗೌರವದ ಮನೋಭಾವ ಬೆಳೆಸುವುದು ಅತ್ಯಗತ್ಯ ಎಂದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿ ದೇಶದ ಉನ್ನತ ಹುದ್ದೆಗೇರಿದ ಮಹಾನ್ ವ್ಯಕ್ತಿ. ತಮ್ಮ ಜನ್ಮದಿನವನ್ನು ವೈಯಕ್ತಿಕವಾಗಿ ಆಚರಿಸುವ ಬದಲು ಶಿಕ್ಷಕರನ್ನು ಗೌರವಿಸುವ ದಿನವನ್ನಾಗಿ ಆಚರಿಸಬೇಕೆಂದು ಅವರು ಆಶಿಸಿದ್ದರು. ಇದರಿಂದ ಶಿಕ್ಷಕ ವೃತ್ತಿಗೆ ವಿಶೇಷ ಗೌರವ ದೊರಕಿದೆ ಎಂದು ಸ್ಮರಿಸಿದರು.

ತಂದೆ-ತಾಯಿಗಳು ಮಕ್ಕಳಿಗೆ ಮೊದಲ ಗುರುಗಳಾಗಿದ್ದು, ಶಿಕ್ಷಕರು ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಕರು. ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ ಮಾತನಾಡಿ, ನಾವು ಹೇಗಿದ್ದೇವೋ ಮತ್ತು ವಿದ್ಯಾರ್ಥಿಗಳಿಗೆ ಏನು ಹೇಳುತ್ತೇವೋ, ಅದನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆದ್ದರಿಂದ ನಾವು ಒಂದು ರೀತಿಯಲ್ಲಿ ವ್ಯಕ್ತಿತ್ವ ರೂಪಿಸುವವರು. ವಿದ್ಯಾರ್ಥಿಗಳ ಭಾವನೆಗಳನ್ನು ಮತ್ತು ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಸರಿಯಾಗಿ ಸ್ಪಂದಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮನ್ನು ಶಿಕ್ಷಕರನ್ನಾಗಿ ಮಾಡಿದ್ದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಧನ್ಯವಾದಗಳು. ಕಲಿಯುವುದನ್ನು ಎಂದಿಗೂ ನಿಲ್ಲಿಸಬೇಡಿ, ಏಕೆಂದರೆ ಜೀವನ ಎಂದಿಗೂ ಕಲಿಸುವುದನ್ನು ನಿಲ್ಲಿಸುವುದಿಲ್ಲ ಎಂದರು.ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ತರಗತಿ ಪ್ರತಿನಿಧಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳು, ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಾಗೂ ಕಿರು ಹಾಸ್ಯ ನಾಟಕ ಮೂಡಿಬಂತು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ. ನಯನಾ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ಕೆ. ಎ.ಕವಿತಾ, ಎನ್.ಪಿ. ರೀತಾ, ಎಂ.ಕಾಂ. ವಿಭಾಗ ಮುಖ್ಯಸ್ಥೆ ಕೆ.ಕೆ. ಚಿತ್ರಾವತಿ, ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬೆಳ್ಳಿಯಪ್ಪ ಎಂ.ಜಿ, ಸಾಂಸ್ಕೃತಿಕ ಕಾರ್ಯದರ್ಶಿ ಸುರಕ್ಷಾ ವಿ.ಎಸ್, ಜಂಟಿ ಕಾರ್ಯದರ್ಶಿಗಳಾದ ನಿತಿನ್ ಬೋಪಣ್ಣ ಕೆ.ಬಿ, ರೋನಿಕ್ ಕೆ.ಎನ್, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ತರಗತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.