ಸಾರಾಂಶ
ಸಿದ್ದಾಪುರ: ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಶಿಕ್ಷಣದ ಕೊರತೆಯಾದಲ್ಲಿ ಅದು ಹಿನ್ನಡೆಯಾಗುತ್ತದೆ, ಶಿಕ್ಷಕ ಸಮುದಾಯ ದೇಶದ ಅಭಿವೃದ್ಧಿಗೆ ಶಕ್ತಿ ನೀಡುವ ಗುರುತರ ಜವಾಬ್ದಾರಿ ಹೊಂದಿದ್ದು. ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಶಿಕ್ಷಕ ವೃತ್ತಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ತಾಲೂಕಿನ ಶಿಕ್ಷಕರ ವೇದಿಕೆ ಪಟ್ಟಣದ ಬಾಲಭವನದಲ್ಲಿ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಪ್ರಗತಿ ಉತ್ತಮವಾಗಿದೆ. ಆರ್ಥಿಕವಾಗಿ ಹಿಂದಿರುವ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿದೆ.ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಕಾರಣ. ಜನಪ್ರತಿನಿಧಿ,ಸಾರ್ವಜನಿಕರ ಸಹಕಾರವೂ ಒದಗಿದೆ. ಮಕ್ಕಳಿಗೆ ಸೂಕ್ತ ದಿಕ್ಕನ್ನು ಸೂಚಿಸಿ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಮಾತನಾಡಿ, ಕುವೆಂಪುರವರ ಮಾತಿನಂತೆ ಮಕ್ಕಳನ್ನು ಭತ್ತದ ಚೀಲಗಳಾಗಿಸದೇ ಭತ್ತದ ಗದ್ದೆಗಳಾಗಿಸುವ ಜವಾಬ್ದಾರಿ ಶಿಕ್ಷಕ ಸಮುದಾಯದ್ದು. ಶಿಕ್ಷಕ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಇಡೀ ಸಮಾಜ ಹಿನ್ನಡೆ ಅನುಭವಿಸುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕ್ಷೇತ್ರ ಶಿಕ್ಷಣ ಕ್ಷೇತ್ರ ಎಂದರು.
ಸಾಮಾಜಿಕ ಧುರೀಣ ವಸಂತ ನಾಯ್ಕ ಮಾತನಾಡಿ, ದೇವರಿಗಿಂತ ಮಿಗಿಲಾಗಿರುವವರು ಗುರುಗಳು. ತಮ್ಮ ಬೋಧನೆಯ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕೊಡುಗೆ ನೀಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವೇದಿಕೆಯ ಅಧ್ಯಕ್ಷ ಎಂ.ಕೆ. ನಾಯ್ಕ ಕಡಕೇರಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಸಿ.ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಆರ್.ಎಸ್. ಶಿರ್ನಾಳ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರೀಟಾ ಡಿಸೋಜ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿ.ಟಿ. ಹೆಗಡೆ, ತಾಪ್ರಾಶಾಶಿ ಸಂಘದ ಖಜಾಂಚಿ ಜಿ.ಜಿ. ಹೆಗಡೆ. ಟೀರ‍್ಸ ಬ್ಯಾಂಕ್ ನಿರ್ದೇಶಕ ವಿ.ಟಿ. ಹೆಗಡೆ ಇದ್ದರು.ಈ ಸಂದರ್ಭದಲ್ಲಿ ಮೋಹನ ಪಟಗಾರ, ರಾಜೀವ ಶಾನಭಾಗ, ಅನೀಶ ಉಪ್ಪಾರ, ತಿಪ್ಪ ಗೌಡ, ಉಲ್ಲಾಸ ದೇಶಭಂಡಾರಿ, ಮಹಮ್ಮದ ಗೌಸ್, ಲಕ್ಷ್ಮೀ ಭಟ್ಟ, ಶಾಂತಲಾ ಗಾಂವ್ಕರ, ಸುಮಿತ್ರಾ ನಾಯ್ಕ, ಕಮಲಾ ನಾಯ್ಕ, ಶಾಂತಾ ನಾಯ್ಕರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಕಿ ರೀಟಾ ಡಿಸೋಜ ತಮ್ಮ ತಂದೆಯವರ ನೆನಪಿನಲ್ಲಿ ನೀಡುವ ಅಭಿನಂದನೆಯನ್ನು ಹನುಮಂತ ನಾಯ್ಕ, ಪದ್ಮಾವತಿ ನಾಯ್ಕ, ರಾಜೇಶ ನಿಲೇಕಣಿ, ರತ್ನಾಕರ ಪಾಲೇಕರ, ಉಮೇಶ ಟಪಾಲ ಅವರಿಗೆ ನೀಡಲಾಯಿತು.ವೇದಿಕೆಯ ಸಂಚಾಲಕ ನಾಗರಾಜ ನಾಯ್ಕ ಸ್ವಾಗತಿಸಿದರು.ಮೈನಾವತಿ, ಸುಧಾ ರಾಯ್ಕರ ನಿರೂಪಿಸಿದರು. ಶ್ರೀಕಾಂತ ನಾಯ್ಕ ವಂದಿಸಿದರು.