ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ

| Published : Aug 25 2025, 01:00 AM IST

ಸಾರಾಂಶ

ಶಿಕ್ಷಕರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು ತಮ್ಮ ವ್ಯಕ್ತಿತ್ವದೊಂದಿಗೆ ತಮ್ಮ ವಿದ್ಯಾರ್ಥಿಗಳನ್ನು ಬೆಳೆಸುತ್ತಾ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಶಿಕ್ಷಕರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು ತಮ್ಮ ವ್ಯಕ್ತಿತ್ವದೊಂದಿಗೆ ತಮ್ಮ ವಿದ್ಯಾರ್ಥಿಗಳನ್ನು ಬೆಳೆಸುತ್ತಾ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ಪಟ್ಟಣದ ತೀನಂಶ್ರೀ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಶಿಕ್ಷಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲಾ ನೌಕರರ ಶೈಕ್ಷಣಿಕ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನನಗೆ ಶಿಕ್ಷಕರ ಬಗ್ಗೆ ಅಪಾರ ಗೌರವವಿದೆ ಕಾರಣ ಸಮಾಜದವನ್ನು ತಿದ್ದುವ ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವಂತಹ ಒಂದು ರೀತಿಯ ಕಾರ್ಖಾನೆ ಇದ್ದಂತೆ. ಒಂದು ಸಮಾಜವನ್ನು ಒಂದು ಊರನ್ನು ಬದಲಾಯಿಸುವಂತಹ ಶಕ್ತಿ ಶಿಕ್ಷಕರಲ್ಲಿರುತ್ತದೆ. ಆದ್ದರಿಂದ ಶಿಕ್ಷಕರ ವೃತ್ತಿಗೆ ಗೌರವ ತರುವಂತೆ ಉತ್ತಮವಾಗಿ ಸೇವೆ ಮಾಡಿ ಎಂದರು.

ಈಗಾಗಲೇ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ನುರಿತ ಶಿಕ್ಷಕರಿಂದ ಪ್ರೇರಣಾ ಶಿಬಿರಗಳನ್ನು ಮಾಡಲಾಗುತ್ತಿದ್ದು ಇದರೊಂದಿಗೆ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ನೀಟ್ ತರಬೇತಿಯನ್ನು ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ತಾಲೂಕು ಅಭಿವೃದ್ಧಿ ಪಡಿಸುವುದು ನನ್ನ ಗುರಿಯಾಗಿದೆ. ಇದರೊಂದಿಗೆ ಈಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಅದಕ್ಕಾಗಿ ತಾಲೂಕಿನಲ್ಲಿ ಮಾದರಿ ಶಾಲೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದೇನೆ ಎಂದರು. ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಹರಟೆ ಖ್ಯಾತಿಯ ಪ್ರೊ. ಕೃಷ್ಣೇಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮನಮೋಹನ್‌, ಶಿಕ್ಷಕರ ಸಂಘದ ಅದ್ಯಕ್ಷ ಗವಿರಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಉಮೇಶ್ ವೆಂಕಟರಮಣಯ್ಯ, ಸುರೇಶ್, ಗಂಗಾಧರ್, ಶಿವಣ್ಣ, ಮಂಜುನಾಥ್ ಸೇರಿದಂತೆ ಇತರರು ಇದ್ದರು.