ಶಿಕ್ಷಕರಿಗೆ ತಾಂತ್ರಿಕ ಪ್ರಜ್ಞೆ ಅಗತ್ಯ

| Published : Apr 12 2025, 12:46 AM IST

ಸಾರಾಂಶ

ಶಿಕ್ಷಕರು ಕೇವಲ ಪಠ್ಯಪುಸ್ತಕದಲ್ಲಿರುವುದನ್ನು ಬೋಧಿಸುವುದಲ್ಲ. ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ಜೀವಿಸುವ ಹಾಗೆ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಕರು ಎರಡನೆಯ ಪೋಷಕರಿದ್ದಂತೆ. ನಿಜವಾದ ಪೋಷಕರು ಅವರ ಅಗತ್ಯತೆಗಳನ್ನು ಪೂರೈಸಿದರೆ, ಶಿಕ್ಷಕರು ವಿದ್ಯಾರ್ಥಿಗಳ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಶಿಕ್ಷಕ ವೃತ್ತಿ ಕೆಲವರಿಗೆ ಇಚ್ಛೆಯಾದರೆ, ಇನ್ನೂ ಕೆಲವರಿಗೆ ಆಕಸ್ಮಿಕವಾಗಿರಬಹುದು, ಆದರೆ ಆ ವೃತ್ತಿಯಲ್ಲೇ ಪ್ರಾಮಾಣಿಕವಾಗಿ ದುಡಿದು ಸಂತೃಪ್ತಿಯನ್ನು ಪಡೆಯಬೇಕು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಡಿಗಲ್ಲಿದ್ದಂತೆ ಎಂದು ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಅನುಪಮ ರಾಮಚಂದ್ರನ್‌ ಹೇಳಿದರು.

ತಾಲೂಕಿನ ಬಾಗೆಯ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ಶಿಕ್ಷಕರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ತಾಂತ್ರಿಕ ಜಗತ್ತಿನಲ್ಲಿ ಶಿಕ್ಷಕರಿಗೆ ತಾಂತ್ರಿಕ ಪ್ರಜ್ಞೆ ಅಗತ್ಯ. ಪ್ರತಿಯೊಬ್ಬ ಶಿಕ್ಷಕನ ಯಶಸ್ಸು ಅವನ ವಿದ್ಯಾರ್ಥಿಗಳ ಉತ್ತಮ ಜ್ಞಾನ ಮತ್ತು ನಡವಳಿಕೆಯಲ್ಲಿ ಅಡಗಿದೆ. ಶಿಕ್ಷಕರು ಕೇವಲ ಪಠ್ಯಪುಸ್ತಕದಲ್ಲಿರುವುದನ್ನು ಬೋಧಿಸುವುದಲ್ಲ. ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ಜೀವಿಸುವ ಹಾಗೆ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಕರು ಎರಡನೆಯ ಪೋಷಕರಿದ್ದಂತೆ. ನಿಜವಾದ ಪೋಷಕರು ಅವರ ಅಗತ್ಯತೆಗಳನ್ನು ಪೂರೈಸಿದರೆ, ಶಿಕ್ಷಕರು ವಿದ್ಯಾರ್ಥಿಗಳ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಶಿಕ್ಷಕ ವೃತ್ತಿ ಕೆಲವರಿಗೆ ಇಚ್ಛೆಯಾದರೆ, ಇನ್ನೂ ಕೆಲವರಿಗೆ ಆಕಸ್ಮಿಕವಾಗಿರಬಹುದು, ಆದರೆ ಆ ವೃತ್ತಿಯಲ್ಲೇ ಪ್ರಾಮಾಣಿಕವಾಗಿ ದುಡಿದು ಸಂತೃಪ್ತಿಯನ್ನು ಪಡೆಯಬೇಕು. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಕ್ಷಕರನ್ನೇ ತಮ್ಮ ಆದರ್ಶ ನಾಯಕರನ್ನಾಗಿ ಸ್ವೀಕರಿಸುತ್ತಾರೆ, ಆದಕಾರಣ ಶಿಕ್ಷಕರು ಉತ್ತಮ ವ್ಯಕ್ತಿತ್ವ, ಉತ್ತಮ ಆರೋಗ್ಯ, ತಾಂತ್ರಿಕ ಪ್ರಜ್ಞೆ, ಸಮಯ ಪ್ರಜ್ಞೆಗಳಂತ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದರು.

ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಿ. ಮಧುಕುಮಾರ್ ಅವರು ಮಾತನಾಡುತ್ತಾ, ಪ್ರಸ್ತುತ ಶಿಕ್ಷಣ ಜಗತ್ತಿನಲ್ಲಿ, ಬೋಧನೆ ಮತ್ತು ಕಲಿಕೆ ಎರಡೂ ಅನ್ಯೋನ್ಯ ಸಂಬಂಧವಿರುವ ವಿಷಯಗಳು, ಇಂದಿನ ದಿನಗಳಲ್ಲಿ ಇಂಟರ್‌ನೆಟ್ ಬಳಸಿ ಎಲ್ಲವನ್ನೂ ತಿಳಿಯುವ ವಿದ್ಯಾರ್ಥಿಗಳಿಗೆ ಕಲಿಸುವ ರೀತಿ ಶಿಕ್ಷಕರಿಗೆ ಸವಾಲಾಗಿದೆ. ಅದಕ್ಕಾಗಿ ಕ್ರಿಯಾತ್ಮಕವಾಗಿ ಬೋಧಿಸುವ ರೀತಿಯನ್ನು ಅರಿತಿರಬೇಕು, ಹಾಗಾಗಿ ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಇಂತಹ ಮೌಲಿಕ ಶಿಬಿರಗಳ ಅಗತ್ಯವಿದೆ ಎಂದರು.ಸ್ಥಳೀಯ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜನಾಧಿಕಾರಿಗಳಾದ ಮಂಜುನಾಥ್ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ದೀಪಾ ದೇಶಿಕನ್, ಪ್ರಾಂಶುಪಾಲರಾದ ಲತಾ ಬಿ, ಉಪಪ್ರಾಂಶುಪಾಲರುಗಳಾದ ಯೋಗೇಶ್ ಎಸ್‌ ಮತ್ತು ನಾಗೇಂದ್ರರವರು ಹಾಜರಿದ್ದರು. ತೋಷಿತ್ ಮತ್ತು ತಂಡದವರು ಪ್ರಾರ್ಥಿಸಿದರು, ಬಿ.ಮಧುಕುಮಾರ್ ಸ್ವಾಗತಿಸಿದರು, ಟಿ. ಎನ್ ವಿದ್ಯಾ ಮತ್ತು ಮಹೇಂದ್ರ ಎಸ್. ಅತಿಥಿಗಳನ್ನು ಪರಿಚಯಿಸಿದರು, ಲತಾ ಬಿ. ವಂದಿಸಿದರು, ಗೌತಮಿ ಕಾರ್ಯಕ್ರಮವನ್ನು ನಿರೂಪಿಸಿದರು.