ಕನ್ನಡಪ್ರಭ ವಾರ್ತೆ ಅಥಣಿಇಂದಿನ ಮಕ್ಕಳಿಗೆ ಹಣ ಗಳಿಸುವ ಮೌಲ್ಯದ ಶಿಕ್ಷಣಕ್ಕಿಂತ ಗುಣ ಗಳಿಸುವ ಮೌಲ್ಯ ಶಿಕ್ಷಣ ಬೇಕಾಗಿದೆ. ಹೊಸ ತಂತ್ರಜ್ಞಾನದ ಅರಿವಿನಲ್ಲಿರುವ ಮಕ್ಕಳಿಗೆ ಗೂಗಲ್ ಗುರುವಿನ ಜ್ಞಾನ ಹೊಂದಿರುವ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಬುದ್ದಿವಂತ ಮಕ್ಕಳಿಗಿಂತ ಹೃದಯವಂತ ಮಕ್ಕಳನ್ನು ಶಿಕ್ಷಕರು ಬೆಳೆಸಬೇಕು ಎಂದು ಬಸವನಬಾಗೇವಾಡಿಯ ಶಿಕ್ಷಕರ ಸಾಹಿತಿ ಅಶೋಕ ಹಂಚಲಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅಥಣಿ

ಇಂದಿನ ಮಕ್ಕಳಿಗೆ ಹಣ ಗಳಿಸುವ ಮೌಲ್ಯದ ಶಿಕ್ಷಣಕ್ಕಿಂತ ಗುಣ ಗಳಿಸುವ ಮೌಲ್ಯ ಶಿಕ್ಷಣ ಬೇಕಾಗಿದೆ. ಹೊಸ ತಂತ್ರಜ್ಞಾನದ ಅರಿವಿನಲ್ಲಿರುವ ಮಕ್ಕಳಿಗೆ ಗೂಗಲ್ ಗುರುವಿನ ಜ್ಞಾನ ಹೊಂದಿರುವ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಬುದ್ದಿವಂತ ಮಕ್ಕಳಿಗಿಂತ ಹೃದಯವಂತ ಮಕ್ಕಳನ್ನು ಶಿಕ್ಷಕರು ಬೆಳೆಸಬೇಕು ಎಂದು ಬಸವನಬಾಗೇವಾಡಿಯ ಶಿಕ್ಷಕರ ಸಾಹಿತಿ ಅಶೋಕ ಹಂಚಲಿ ಅಭಿಪ್ರಾಯಪಟ್ಟರು. ಇಲ್ಲಿನ ಸುಕ್ಷೇತ್ರ ಗಚ್ಚಿನಮಠದ ಸಭಾಂಗಣದಲ್ಲಿ ಭಾನುವಾರ ಕಾಮ್ಸ್ ಸಂಸ್ಥೆ ಹಾಗೂ ಅಥಣಿ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಹೊಸ ತಂತ್ರಜ್ಞಾನದೊಂದಿಗೆ ಬೆಳೆಯುತ್ತಿದ್ದಾರೆ. ಗೂಗಲ್ ಗುರುವಿನೊಂದಿಗೆ ಮಾತನಾಡಿ ಜ್ಞಾನ ಪಡೆಯುತ್ತಿರುವ ಮಕ್ಕಳಿಗೆ ಅದನ್ನು ಮೀರಿದ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡಬೇಕಾಗಿದೆ. ಮುಖ್ಯವಾಗಿ ಬುದ್ಧಿವಂತ ಮತ್ತು ಹೃದಯವಂತ ಮಕ್ಕಳನ್ನು ರೂಪಿಸಬೇಕಾಗಿದೆ. ನಾವು ಮಾಡುವ ವೃತ್ತಿ, ನಾಡಿನ ಭಾಷೆ ಮತ್ತು ಸಂಸ್ಕೃತಿ ಪ್ರೀತಿಸಬೇಕು ಗೌರವಿಸಬೇಕು. ವಿಶ್ವಗುರು ಸ್ಥಾನದತ್ತ ಹೊರಟಿರುವ ಭಾರತದ ಬಗ್ಗೆ ನಮಗೆ ಹೆಮ್ಮೆ ಮತ್ತು ಗೌರವ ಇರಬೇಕು. ರಾಷ್ಟ್ರಾಭಿಮಾನವನ್ನು ಮಕ್ಕಳಲ್ಲಿ ತುಂಬುವಂತಹ ಶಿಕ್ಷಣ ಮತ್ತು ಶಿಕ್ಷಕರು ನಾವಾಗಬೇಕು ಎಂದು ತಿಳಿಸಿದರು.ಉದ್ಘಾಟಕ ಚಿಕ್ಕೋಡಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್ ಮನ್ನಿಕೆರಿ ದೂರವಾಣಿ ಮೂಲಕ ಧ್ವನಿ ವರ್ಧಕ ಸಹಾಯದಿಂದ ಮಾತನಾಡಿ, ಶಿಕ್ಷಕ ಹುದ್ದೆಗೆ ಇರುವ ಗೌರವ ಸಮಾಜದಲ್ಲಿ ಇನ್ಯಾವುದೇ ಹುದ್ದೆಗೆ ಇಲ್ಲ. ನಮ್ಮ ಘನತೆ ಗೌರವಕ್ಕೆ ಇದಕ್ಕೆ ಯೋಗದಂತೆ ಸೇವೆ ಸಲ್ಲಿಸಿ ದೇಶದ ಭವಿಷ್ಯವನ್ನು ಕಟ್ಟುವ ಶಿಲ್ಪಿಗಳನ್ನ ನಾವು ತಯಾರಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಮಾತನಾಡಿ, ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ವಿಚಾರಧಾರೆಗಳನ್ನು ಶಿಕ್ಷಕರು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರು ಮೊದಲು ತಮ್ಮ ವೃತ್ತಿಯನ್ನು ಪ್ರೀತಿಸಬೇಕು, ನೀವು ಸೇವಿ ಸಲ್ಲಿಸುವ ಶಿಕ್ಷಣ ಸಂಸ್ಥೆಯನ್ನು ಪ್ರೀತಿಸಬೇಕು, ನಿಮ್ಮ ಆರೋಗ್ಯವನ್ನು ಪ್ರೀತಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಕಲಿಸಿಕೊಡಬೇಕು. ಮಕ್ಕಳಿಗೆ ಮೊದಲು ಪ್ರಥಮ ದ್ವಿತೀಯ ಹಾಗೂ ತೃತೀಯ ಭಾಷೆಗಳನ್ನು ಕಲಿಸಿದಾಗ ಇನ್ನಿತರ ವಿಷಯಗಳನ್ನು ಕಲಿಯಲು ಸಹಕಾರಿ ಯಾಗುತ್ತದೆ. ತಾಲೂಕಿನ ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದರು.ಗಚ್ಚಿನಮಠದ ಶಿವಬಸವ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ಬಹಳಷ್ಟು ಮಹತ್ವ ನೀಡಲಾಗಿದೆ. ಗುರು ಅಥವಾ ಶಿಕ್ಷಕ ಕೇವಲ ಮಕ್ಕಳಿಗೆ ಪಾಠ ಮಾಡದೇ ಸಮಾಜಕ್ಕೂ ಮಾರ್ಗದರ್ಶಕರಾಗಬೇಕು. ಇಂಡಿ ತಾಲೂಕಿನ ಅಥರ್ಗಾ ವಿರಕ್ತಮಠದಲ್ಲಿ ಒಬ್ಬ ಶ್ರೇಷ್ಠ ಶಿಕ್ಷಕನ ಭಾವಚಿತ್ರ ಪಲ್ಲಕ್ಕಿ ಮೆರವಣಿಗೆ ಜರುಗುತ್ತದೆ. ಆ ರೇವಣಸಿದ್ದಯ್ಯ ಮಾಸ್ಟರ್ ಅವರಿಗೆ ಅಥಣಿಯ ಮುರಗೇಂದ್ರ ಶಿವಯೋಗಿಗಳು ಆಶೀರ್ವಾದ ನೀಡಿದರೆಂದು ಅವರ ಸೇವೆಯನ್ನು ಸ್ಮರಿಸಿದರು. ಅಥಣಿ ತಾಲೂಕು ಕಾಮ್ಸ್ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಕಡಿಮೆ ವೇತನದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಿರುವ ಪ್ರಶ್ನಿಸುವ ಖಾಸಗಿ ಶಾಲಾ ಶಿಕ್ಷಕರ ಸೇವೆಯನ್ನು ಸರ್ಕಾರ ಮತ್ತು ತಾಲೂಕು ಆಡಳಿತ ಗುರುತಿಸುತ್ತಿಲ್ಲ. ಸರ್ಕಾರದಿಂದ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿಮ್ಮ ಖಾಸಗಿ ಸಂಸ್ಥೆಯ ಶಿಕ್ಷಕರಿಗೆ ಯಾವುದೇ ಗೌರವ ಇಲ್ಲ, ಅದಕ್ಕಾಗಿ ಕಾಮ್ಸ್ ಸಂಸ್ಥೆಯನ್ನ ಹುಟ್ಟು ಹಾಕಿ ಕಳೆದ ೧೦ ವರ್ಷಗಳಿಂದ ಸಂಘಟನೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇವೆ. ಪ್ರಥಮ ಬಾರಿಗೆ ಗುರುಸೇವಾ ಪ್ರಶಸ್ತಿಯನ್ನು ನೀಡುವ ಮೂಲಕ ರಾಜ್ಯದಲ್ಲಿ ತಾಲೂಕು ಸಂಘಟನೆ ಮಾದರಿಯಾಗಿದೆ. ಸರ್ಕಾರ ಮಾಡದೇ ಇರುವ ಶೈಕ್ಷಣಿಕ ಕಾರ್ಯವನ್ನು ಖಾಸಗಿ ಸಂಸ್ಥೆಗಳು ಮಾಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ 35 ಲಕ್ಷ ಶಿಕ್ಷಣ ಕಲಿಯುತ್ತಿದ್ದರೇ, ನಮ್ಮ ಖಾಸಗಿ ಸಂಸ್ಥೆಗಳಲ್ಲಿ 49 ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಪುಟ್ಟಣ್ಣಯ್ಯ ಅವರು ಸದನ ಸಮಿತಿಯ ಸದಸ್ಯರಾದ ನಂತರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತ ಸರ್ಕಾರದ ಕೆಲವು ತಪ್ಪು ನೀತಿಗಳನ್ನು ಸರಿಪಡಿಸುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕ, ಶಿಕ್ಷಕಿಯರಿಗೆ 2026ನೇ ಸಾಲಿನ ಗುರು ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಮ್ಸ್ ಸಂಸ್ಥೆಯ ಉಪಾಧ್ಯಕ್ಷ ಡಿ.ಡಿ.ಮೇಕನಮರಡಿ, ಎ.ಎಸ್.ಜೋಶಿ, ಶ್ರೀಶೈಲ ಇಂಚಿಗೇರಿ, ಅರುಣ್ ಮಾಳಿ, ವಿಜಯ ಹುದ್ದಾರ, ಅಪ್ಪಾಸಾಬ ತೆಲಸಂಗ, ಆರ್.ಎಂ.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ.ಬಿ.ಬಡಿಗೇರ ಸ್ವಾಗತಿಸಿದರು. ಚಿದಾನಂದ ಪಾಟೀಲ ನಿರೂಪಿಸಿದರು. ಸಂತೋಷ ಬಡಕಂಬಿ ವಂದಿಸಿದರು.

ಹಣವಂತ ಮಕ್ಕಳಗಿಂತ ಗುಣವಂತ ಮಕ್ಕಳನ್ನು ಬೆಳಸಬೇಕಾಗಿದೆ. ಶಿಕ್ಷಕರು ಮಕ್ಕಳಿಗೆ ನೈತಿಕತೆಯನ್ನು, ಮಾನವೀಯ ಮೌಲ್ಯಗಳು ಕಲಿಸಬೇಕಾಗಿದೆ. ಶೈಕ್ಷಣಿಕ ವ್ಯವಸ್ಥೆ ಭ್ರಷ್ಟವಾದರೇ ಇಡೀ ವ್ಯವಸ್ಥೆ ಮತ್ತು ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕರು ತಮ್ಮ ವೃತ್ತಿ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು.-ಶಿವಬಸವ ಸ್ವಾಮೀಜಿ, ಗಚ್ಚಿನಮಠ.