ಕನ್ನಡಪ್ರಭ ವಾರ್ತೆ ಬೆಳಗಾವಿಕಾಗವಾಡ ತಾಲೂಕಿನ ಉಗಾರ ಖುರ್ದನಲ್ಲಿರುವ ಪ್ರತಿಷ್ಠಿತ ಉಗಾರ ಶುಗರ್ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಿಢೀರ್‌ ಬೀಗಮುದ್ರೆ (ಕ್ಲೋಸರ್) ನೋಟಿಸ್ ನೀಡಿರುವುದನ್ನು ಖಂಡಿಸಿ ಉಗಾರ ಶುಗರ್ ವರ್ಕರ್ಸ್ ಯೂನಿಯನ್ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾಗವಾಡ ತಾಲೂಕಿನ ಉಗಾರ ಖುರ್ದನಲ್ಲಿರುವ ಪ್ರತಿಷ್ಠಿತ ಉಗಾರ ಶುಗರ್ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಿಢೀರ್‌ ಬೀಗಮುದ್ರೆ (ಕ್ಲೋಸರ್) ನೋಟಿಸ್ ನೀಡಿರುವುದನ್ನು ಖಂಡಿಸಿ ಉಗಾರ ಶುಗರ್ ವರ್ಕರ್ಸ್ ಯೂನಿಯನ್ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಸುಮಾರು 85 ವರ್ಷಗಳ ಇತಿಹಾಸ ಹೊಂದಿರುವ ಕಾರ್ಖಾನೆಯನ್ನು ನಂಬಿಕೊಂಡು ಸಾವಿರಾರು ಕಾರ್ಮಿಕರು ಹಾಗೂ ರೈತ ಕುಟುಂಬಗಳು ಜೀವನ ಸಾಗಿಸುತ್ತಿವೆ. ಹೀಗಿರುವಾಗ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬೀಗಮುದ್ರೆ ನೋಟಿಸ್ ಜಾರಿ ಮಾಡಿರುವುದು ಖಂಡನೀಯ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಕಾರ್ಮಿಕ ಮುಖಂಡರು ಆಗ್ರಹಿಸಿದರು.

ಕ್ಲೋಸರ್ ನೋಟಿಸ್‌ನಿಂದಾಗಿ 4,500ಕ್ಕೂ ಅಧಿಕ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಬದುಕು ಅತಂತ್ರವಾಗುವ ಆತಂಕ ಎದುರಾಗಿದೆ. ಪರಿಸರ ನಿಯಮಗಳನ್ನು ಕಾರ್ಖಾನೆ ಪಾಲಿಸಿಕೊಂಡು ಬರುತ್ತಿದ್ದರೂ ಸಮರ್ಪಕ ಪರಿಶೀಲನೆ ನಡೆಸದೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯ ಸುತ್ತಮುತ್ತ ಯಾವುದೇ ರೀತಿಯ ವಾಸನೆ ಅಥವಾ ಪರಿಸರ ಸಮಸ್ಯೆ ಇಲ್ಲ. ಅನಗತ್ಯ ದೂರುಗಳ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ ಎಂದು ಮಹಿಳಾ ಕಾರ್ಮಿಕರು ಅಸಮಾಧಾನ ಹೊರಹಾಕಿದರು.

ನೋಟಿಸ್‌ ಹಿಂಪಡೆಯದಿದ್ದರೆ ಉಗಾರ ಬಂದ್ ಮಾಡಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಕಾರ್ಮಿಕರು ಮತ್ತು ರೈತರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆ.ಎಂ.ಕರಿಗಾರ, ಎಸ್.ಎಂ. ಕಾಂಬಳೆ, ಎ.ಎಚ್. ನಾವಲಿಗೇರ, ಎನ್. ಟೋಪಿವಾಲಿ, ಎಸ್.ಎನ್. ಪೂಜಾರಿ, ಎ.ಎ. ಕಾಮತ್‌, ಎಂ.ಜಿ. ಉಳ್ಳಾಗಡ್ಡಿ, ಎ.ಬಿ. ವಾಲಿ, ಪಿ.ವಿ. ಜೋಶಿ ಸೇರಿದಂತೆ ಹಲವರು ಭಾಗವಹಿಸಿದ್ದರು.