ನಾರಾಯಣ ಹೆಗಡೆ

ಹಾವೇರಿ: ಕೃತಕ ಬುದ್ಧಿಮತ್ತೆ (ಎಐ) ಹಾಗೂ ಜಿಪಿಎಸ್ ಆಧರಿತ ಕರ್ತವ್ಯ (KAAMS) ಆ್ಯಪ್ ಮೂಲಕ ಹಾಜರಾತಿ ವ್ಯವಸ್ಥೆ ಅನುಷ್ಠಾನ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಕೆಲವೇ ದಿನಗಳಲ್ಲಿ ವಿನೂತನ ವ್ಯವಸ್ಥೆಗೆ ಒಗ್ಗಿಕೊಂಡಿರುವ ಶಿಕ್ಷಕರು, ನಿಗದಿತ ಸಮಯಕ್ಕೆ ಶಾಲೆ ಆವರಣ ತಲುಪುತ್ತಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿದಂತೆ 5968 ಶಿಕ್ಷಕರು, ಸಿಬ್ಬಂದಿ, ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 5733 ಶಿಕ್ಷಕರು ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ಹಾಕುತ್ತಿದ್ದಾರೆ. ಕೆಲವು ತಾಂತ್ರಿಕ ಸಮಸ್ಯೆ ಹೊರತಾಗಿ ಬಹುತೇಕ ಶಿಕ್ಷಕರು ಬಹುಬೇಗನೆ ಹೊಸ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಆದರೆ, ನಿಗದಿತ ಸಮಯಕ್ಕೆ ಲಾಗಿನ್‌ ಆಗಬೇಕಿರುವುದರಿಂದ ಶಿಕ್ಷಕರು ಪರದಾಡುತ್ತಿದ್ದಾರೆ. ಬಸ್‌ ಮೂಲಕ ಶಾಲೆಗೆ ಹೋಗುವವರು, ಕುಗ್ರಾಮಗಳಲ್ಲಿನ ಶಾಲಾ ಶಿಕ್ಷಕರು, ನೆಟ್‌ವರ್ಕ್‌ ಇಲ್ಲದ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಸರ್ಕಾರಿ ನೌಕರರ ಹಾಜರಾತಿ ಕಡ್ಡಾಯಗೊಳಿಸಲು ಸರ್ಕಾರ ಕಾಮ್ಸ್‌ (ಕರ್ತವ್ಯ) ಆ್ಯಪ್‌ ಅನುಷ್ಠಾನಕ್ಕೆ ತಂದಿದೆ. ಜೂನ್‌ ತಿಂಗಳಲ್ಲಿ ಶಾಲೆ ಪುನರಾರಂಭವಾದಾಗಿನಿಂದ ಈ ಆ್ಯಪ್‌ ಮೂಲಕವೇ ಶಿಕ್ಷಕರು ಹಾಜರಾತಿ ಹಾಕುತ್ತಿದ್ದಾರೆ. ಫೇಸ್ ರೆಕಗ್ನಿಶನ್ ಹಾಗೂ ಜಿಪಿಎಸ್‌ ಮೂಲಕ ಇದು ಕಾರ್ಯನಿರ್ವಹಿಸುತ್ತಿರುವುದರಿಂದ ಶಿಕ್ಷಕರು ಬೆಳಗ್ಗೆ 9.45ಕ್ಕೆ ಲಾಗಿನ್ ಆಗಬೇಕು. ಸಂಜೆ 4.30ಕ್ಕೆ ಲಾಗ್‌ಔಟ್ ಮಾಡಬೇಕು. ಇದು ಜಿಯೋ-ಫೆನ್ಸಿಂಗ್ ಮೂಲಕ ಕಾರ್ಯನಿರ್ವಹಿಸುವುದರಿಂದ ನಿಗದಿತ ಶಾಲಾ ಆವರಣದಲ್ಲಿ ಮಾತ್ರ ಹಾಜರಾತಿ ದಾಖಲಾಗುತ್ತದೆ.

ಸಮಯ ಮೀರಿ ಶಾಲೆಗೆ ಬರುವ ಶಿಕ್ಷಕರಿಗೆ ಸಾಂದರ್ಭಿಕ ರಜೆ (ಸಿಎಲ್‌) ಎಂದು ಪರಿಗಣಿಸುತ್ತಿರುವುದರಿಂದ ಶಿಕ್ಷಕರು ತರಾತುರಿಯಲ್ಲೇ ಶಾಲೆಯತ್ತ ಹೆಜ್ಜೆ ಹಾಕುತ್ತಿರುವುದು ಜಿಲ್ಲೆಯಲ್ಲಿ ಕಂಡುಬರುತ್ತಿದೆ.


235 ಶಿಕ್ಷಕರಿಗೆ ತಾಂತ್ರಿಕ ಸಮಸ್ಯೆ: ನೂತನ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಿದ ಬಳಿಕ ಶೇ. 95ಕ್ಕೂ ಹೆಚ್ಚು ಸಿಬ್ಬಂದಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ 5968 ಅಧಿಕಾರಿ, ಸಿಬ್ಬಂದಿ ಪೈಕಿ 5733 ಜನರು ಕರ್ತವ್ಯ ಆ್ಯಪ್‌ ಮೂಲಕ ಹಾಜರಾತಿ ಹಾಕುತ್ತಿದ್ದಾರೆ. ಉಳಿದ 235 ಶಿಕ್ಷಕರಲ್ಲಿ 142 ನೌಕರರ ಎಚ್‌ಆರ್‌ಎಂಎಸ್‌ ಹಾಗೂ ಆಧಾರ್‌ ಕಾರ್ಡ್‌ ತಿದ್ದುಪಡಿ ಬಾಕಿ ಇದೆ. 39 ನೌಕರರು ನಿವೃತ್ತಿಯಾಗಿದ್ದಾರೆ. 54 ನೌಕರರಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ವಿವಿಧ ಸಮಸ್ಯೆಯಿಂದ 196 ಶಿಕ್ಷಕರಿಗೆ ಕರ್ತವ್ಯ ಆ್ಯಪ್‌ನಲ್ಲಿ ಹಾಜರಾತಿ ವರದಿಯನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ. ತಂತ್ರಾಂಶದಲ್ಲಿ ಇದನ್ನು ಸರಿಪಡಿಸಿದರೆ ಜಿಲ್ಲೆಯಲ್ಲಿ ಕರ್ತವ್ಯ ಆ್ಯಪ್ ಅನುಷ್ಠಾನದಲ್ಲಿ ನೂರಕ್ಕೆ ನೂರರಷ್ಟು ಸಾಧನೆಯಾಗಲಿದೆ.

ತಡವಾಗಿ ಬರುತ್ತಿದ್ದವರಿಗೆ ಫಜೀತಿ: ಸರ್ಕಾರಿ ಶಾಲೆ ಶಿಕ್ಷಕರಲ್ಲಿ ಬಹುತೇಕರು ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದರು. ಆದರೆ, ಕೆಲವು ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಾಗುತ್ತಿರಲಿಲ್ಲ. ಶಿಕ್ಷಕರ ಸಂಘಟನೆ ಕೆಲಸ ನೆಪದಲ್ಲಿ ಹೊರಗಡೆ ಇರುತ್ತಿದ್ದರು. ಇನ್ನು ಕೆಲವು ಶಿಕ್ಷಕರು ತಡವಾಗಿ ಹೋಗುತ್ತಿದ್ದರು. ಕಚೇರಿ ಕೆಲಸ ಎಂದು ಹೇಳಿ ಹೋದವರು ಮರಳಿ ಸಂಜೆವರೆಗೂ ಬರುತ್ತಿರಲಿಲ್ಲ. ಲೊಕೇಶನ್ ಹಾಜರಾತಿ ಕಡ್ಡಾಯಗೊಳಿಸಿದ ಬಳಿಕ ಮುಖ್ಯಶಿಕ್ಷಕರು ಸೇರಿದಂತೆ ಶಾಲಾ ಸಿಬ್ಬಂದಿ ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗಬೇಕಿದೆ. ಇದು ಕೆಲವು ಶಿಕ್ಷಕರು, ಸಿಬ್ಬಂದಿ, ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ, ಸರ್ಕಾರದ ಈ ಆದೇಶದಿಂದ ವಿದ್ಯಾರ್ಥಿಗಳು, ಪೋಷಕರಿಗೆ ಸಂತಸವಾಗಿದೆ. ನಿಗದಿತ ಸಮಯದೊಳಗೆ ಶಾಲೆಗೆ ಆಗಮಿಸಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಂತೂ ಸರ್ಕಾರದ ಆದೇಶದಿಂದ ಸಂತಸಗೊಂಡಿದ್ದಾರೆ.

ಮೊಬೈಲ್‌ ಸ್ವಿಚ್‌ ಆಫ್ ಆದರೆ ಕಷ್ಟ: ಸರ್ಕಾರದ ಆದೇಶವನ್ನು ಶಿಕ್ಷಕರು ಸಮರ್ಪಕವಾಗಿ ಪಾಲಿಸುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ, ಬಸ್‌ನಲ್ಲಿ ಹೋಗುವವರಿಗೆ ಸಮಸ್ಯೆ ಎದುರಾಗುತ್ತಿದೆ. ಬಸ್‌ ತಡವಾದರೆ ಹಾಜರಾತಿ ಹಾಕಲು ಆಗುತ್ತಿಲ್ಲ. ತಡವಾಗಿ ಲಾಗ್‌ ಇನ್‌ ಆದರೆ ಅರ್ಧ ದಿನ ರಜೆ ಎಂದು ಪರಿಗಣಿತವಾಗುತ್ತದೆ. ನೆಟ್‌ವರ್ಕ್‌ ಇಲ್ಲದ ಕಡೆ ಸಮಸ್ಯೆಯಾಗುತ್ತಿದೆ. ಬೆಳಗ್ಗೆ ಹೋಗುವ ಶಿಕ್ಷಕರು ಸಂಜೆ ಬರುವವರೆಗೆ ಮೊಬೈಲ್‌ ಸ್ವಿಚ್‌ ಆಫ್‌ ಆಗದಂತೆ ನೋಡಿಕೊಳ್ಳಬೇಕಿದೆ. ಆರಂಭಿಕವಾಗಿ ಕೆಲವು ಸಮಸ್ಯೆಯಿದ್ದರೂ ಶಿಕ್ಷಕರ ಕಳ್ಳ ರಜೆಗೆ ಕಡಿವಾಣ ಬಿದ್ದಿರುವುದಂತೂ ಸತ್ಯ.

ಕಾಮ್ಸ್‌ ಆ್ಯಪ್‌ ಅನುಷ್ಠಾನ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಕೆಲವು ತಾಂತ್ರಿಕ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ್ಯಪ್ ನಿರ್ವಹಣೆ ತಂಡವು ಕೆಲವೇ ದಿನಗಳಲ್ಲಿ ತಾಂತ್ರಿಕ ತೊಡಕುಗಳನ್ನು ನಿವಾರಿಸಲಿದೆ. ಜಿಲ್ಲೆಯ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹಾವೇರಿ ಡಿಡಿಪಿಐ ಮೋಹನ ದಂಡಿನ ಹೇಳಿದರು.