ಸಮಾಜವನ್ನು ತಿದ್ದುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಯಾವುದೇ ಒಂದು ಸಮುದಾಯವನ್ನು ಶಿಕ್ಷಣವಂತರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ನಾನು ಸೇರಿ ಯಾರೆಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದೇವೊ ಅದಕ್ಕೆ ಶಿಕ್ಷಕರೇ ಕಾರಣ. ಶಿಕ್ಷಕರಲ್ಲಿಯೇ ಉತ್ತಮ ನಡತೆ ಇಲ್ಲದಿದ್ದರೆ ಮಕ್ಕಳು ಏನನ್ನು ಕಲಿಯಲು ಸಾಧ್ಯ ಎಂದರು.
ಕನ್ನಡಪ್ರಭ ವಾರ್ತೆ ರಾಮನಗರ
ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳು ನಡೆಯುತ್ತಿವೆ. ಅವುಗಳಿಗೆ ಅನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ, ಬೋಧನಾ ಕೌಶಲ್ಯ ಹಾಗೂ ತಾಂತ್ರಿಕ ಪರಿಣತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಕಾರ್ಯಾಗಾರ ಮತ್ತು ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಿಕ್ಷಕರು ಕೇವಲ ಪುಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ, ವೈಚಾರಿಕತೆ, ಸಂವಹನ ಕೌಶಲ್ಯ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸುವ ಜವಾಬ್ದಾರಿಯೂ ಇದೆ ಎಂದರು.
ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಕರು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು. ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ನವೀಕರಿಸಿಕೊಳ್ಳುವ ಶಿಕ್ಷಕರಿಂದ ಮಾತ್ರ ಭವಿಷ್ಯದ ಸವಾಲುಗಳನ್ನು ಎದುರಿಸಬಲ್ಲ ಸಮರ್ಥ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯ ಎಂದು ಹೇಳಿದರು.ಸಮಾಜವನ್ನು ತಿದ್ದುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಯಾವುದೇ ಒಂದು ಸಮುದಾಯವನ್ನು ಶಿಕ್ಷಣವಂತರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ನಾನು ಸೇರಿ ಯಾರೆಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದೇವೊ ಅದಕ್ಕೆ ಶಿಕ್ಷಕರೇ ಕಾರಣ. ಶಿಕ್ಷಕರಲ್ಲಿಯೇ ಉತ್ತಮ ನಡತೆ ಇಲ್ಲದಿದ್ದರೆ ಮಕ್ಕಳು ಏನನ್ನು ಕಲಿಯಲು ಸಾಧ್ಯ ಎಂದರು.
ಮಕ್ಕಳು ಉತ್ತಮ ಪ್ರಜೆಗಳಾಗಬೇಕಾದರೆ ಶಿಕ್ಷಣ ಅತಿ ಮುಖ್ಯ. ಶಿಕ್ಷಣ ಕೇವಲ ಜ್ಞಾನ ಮಾತ್ರ ನೀಡುವುದಿಲ್ಲ, ಸಂಸ್ಕಾರವನ್ನು ಕಲಿಸುತ್ತದೆ. ಉರ್ದು ಮಾಧ್ಯಮದ ಮಕ್ಕಳು ಕೇವಲ ಭಾಷೆಯಲ್ಲಿ ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಸಾಧನೆ ಮಾಡುವಂತಾಗಬೇಕು. ಇದಕ್ಕೆ ಶಿಕ್ಷಕರ ಮಾರ್ಗದರ್ಶನ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ನಮ್ಮ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಮತ್ತು ಉರ್ದು ಶಾಲೆಗಳ ಅಭಿವೃದ್ಧಿಗೆ ಸದಾ ಬದ್ಧವಾಗಿದೆ. ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ, ಶಿಕ್ಷಕರ ಕೊರತೆಯನ್ನು ನೀಗಿಸಲು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ನಾನು ನಿಮ್ಮ ಕ್ಷೇತ್ರದ ಶಾಸಕನಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ತಿಳಿಸಿದರು.
ರಾಮನಗರದ ಹಳೇ ಜಿಲ್ಲಾಸ್ಪತ್ರೆಯನ್ನು ಸುಮಾರು ₹7 ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ನಗರದಲ್ಲಿರುವ ಎಲ್ಲ ಉರ್ದು ಶಾಲೆಗಳನ್ನು ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸಲಾಗುವುದು. ಸುಸಜ್ಜಿತ ಪ್ರಯೋಗಾಲಯ, ಆಟದ ಮೈದಾನ, ಕೊಠಡಿಗಳು ಸೇರಿದಂತೆ ಇಡೀ ಶಾಲೆ ಹೈಟೆಕ್ ಆಗಿ ಇರಲಿವೆ. ಮಕ್ಕಳಿಗೆ ನಾಲ್ಕು ಜೊತೆ ಸಮವಸ್ತ್ರ, ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.ಶಾಸಕರಿಗೆ ಮನವಿ ಸಲ್ಲಿಕೆ:
ಸರ್ಕಾರಿ ಉರ್ದು ಶಾಲೆಗಳಲ್ಲಿ ಶೇಕಡ 50ರಷ್ಟು ಹುದ್ದೆಗಳು ಖಾಲಿ ಇವೆ. ವಿಷಯವಾರುಶಿಕ್ಷಕರ ನೇಮಕಾತಿ ಮತ್ತು ವರ್ಗಾವಣೆ, ಬಡ್ತಿ, ಪಠ್ಯಪುಸ್ತಕ, ಕೊಠಡಿಗಳ ನಿರ್ಮಾಣ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಶಾಸಕರಿಗೆ ಶಿಕ್ಷಕರು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಾಜು, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಕರ್ನಾಟಕ ಉರ್ದು ಅಕಾಡೆಮಿಯ ಸೈಯ್ಯದ್ ಹಬಿದ್ ಅಸ್ಲಂ, ಗೌಸಿಯಾ ಕಾಲೇಜು ಟ್ರಸ್ಟಿ ಇಕ್ಬಾಲ್ ಬೇಗ್ ಮತ್ತಿತರರು ಉಪಸ್ಥಿತರಿದ್ದರು.