ಸಾರಾಂಶ
ಆಳ್ವಾಸ್‌ನಲ್ಲಿ ರಾಜ್ಯ ಕಾಲೇಜು ಶಿಕ್ಷಕ ಸಂಘದ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಮೂಡುಬಿದಿರೆಭಾರತೀಯ ಸಾಂಸ್ಕೃತಿಕ ವಿರಾಸತ್‌ನಲ್ಲಿ ಗುರು ಶಿಷ್ಯ ಪರಂಪರೆ ಮಹತ್ವದ್ದು. ಜ್ಞಾನ ದಾನದ ಜತೆಗೆ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನೈತಿಕತೆಯ ಜತೆಗೆ ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ಶಿಕ್ಷಕರು ರಾಷ್ಟ್ರಹಿತಕ್ಕೆ ಆದ್ಯತೆ ನೀಡಿ ವಿಕಸಿತ ಭಾರತದ ನಿರ್ಮಾಣದಲ್ಲಿ ದೀಪ ಸ್ತಂಭಗಳಾಗಬೇಕಿದೆ ಎಂದು ರಾಜ್ಯ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಆಳ್ವಾಸ್ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ಜರುಗಿದ ೨೦೨೫ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ತಾಂತ್ರಿಕ ಬೆಳವಣಿಗೆ, ಕೃತಕ ಬುದ್ಧಿವಂತಿಕೆಯ ಸವಾಲುಗಳ ನಡುವೆಯೂ ಶಿಕ್ಷಕರ ಪಾತ್ರ ಜವಾಬ್ದಾರಿಯದ್ದಾಗಿದೆ. ಹೊಸತನದ ಜತೆಗೆ ಸಮರ್ಪಣಾ ಮನೋಭಾವದಿಂದ ಶಿಕ್ಷಕರು ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕು ಎಂದದರು.ಪ್ರಶಸ್ತಿ ಪ್ರದಾನ:ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಸಾಧಕ ಪ್ರಾಧ್ಯಾಪಕರ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ನೀಡಲಾದ ಪ್ರಶಸ್ತಿಗಳಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಉಪಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ಹಾಗೂ ಮೇಘಾಲಯದ ಸರಸ್ವತಿ ಸಮೂಹ ವಿದ್ಯಾಸಂಸ್ಥೆಗಳ ಸ್ಥಾಪಕ ಡಾ.ಅನಂತಕೃಷ್ಣ ಭಟ್ ಅವರನ್ನು ಜೀವಮಾನದ ಸಾಧನೆಗಾಗಿ ಗೌರವಿಸಲಾಯಿತು.ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಮಂಗಳೂರು ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ (ಆಡಳಿತ ನಿರ್ವಹಣೆ), ಸ್ಕೂಲ್ ಆಫ್ ಎಕನಾಮಿಕ್ಸ್ ಮಣಿಪಾಲ್‌ನ ಪ್ರೊ. ಹರೀಶ್ ಜೋಶಿ ಹಾಗೂ ಎ.ಜೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಶಾಂತರಾಮ ರೈ ಸಿ. (ಅತ್ಯುತ್ತಮ ಸಂಶೋಧಕ ಪ್ರಶಸ್ತಿ), ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಸುಭಾಷಿಣಿ ಶ್ರೀವತ್ಸ ಹಾಗೂ ಜಿ. ಶಂಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜೇಂದ್ರ (ಅತ್ಯುತ್ತಮ ಶಿಕ್ಷಕ ಪ್ರಶಸ್ತಿ), ಫೀಲ್ಡ್ ಮಾರ್ಷಲ್ ಮಡಿಕೇರಿ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರೊ. ವಿಜಯಲತಾ ಮತ್ತು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಯಶೋದ (ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿ), ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಡಾ.ರಾಧಾಕೃಷ್ಣ ಹಾಗೂ ಕಾವೇರಿ ಕಾಲೇಜು ವಿರಾಜಪೇಟೆಯ ಶಿಕ್ಷಕ ತಮ್ಮಯ್ಯ (ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ) ನೀಡಿ ಗೌರವಿಸಲಾಯಿತು. ೨೦೨೫ನೇ ಸಾಲಿನಲ್ಲಿ ಪಿ.ಎಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಯಿತು.ಹೊಸದಿಗಂತ ದೈನಿಕದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್. ದಿಕ್ಸೂಚಿ ಭಾಷಣ ಮಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ವಿವಿ ಉಪ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕೆಆರ್‌ಎಂಎಸ್ಎಸ್ ಮಂಗಳೂರು ವಿಭಾಗ ಅಧ್ಯಕ್ಷೆ ಉಮಾ, ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್‌ಬಿಎಂ ಪ್ರಸನ್ನ, ಡಾ. ಕೆ.ಸಿ. ಮಹದೇಶ್ ಮತ್ತಿತರರು ಉಪಸ್ಥಿತರಿದ್ದರು.ಕೆಆರ್‌ಎಂಎಸ್‌ಎಸ್ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ್ ಸ್ವಾಗತಿಸಿದರು. ಸಂಯೋಜಕಿ ಜಯಲಕ್ಷ್ಮೀ ಆರ್. ಶೆಟ್ಟಿ ವಂದಿಸಿದರು. ವೆಂಕಟೇಶ್ ನಾಯಕ್ ಮತ್ತು ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.--------------ಕನ್ನಡ ಮಾತನಾಡಿದ ರಾಜ್ಯಪಾಲರಾಜ್ಯಪಾಲರು ಹಿಂದಿಯಲ್ಲಿ ಮಾತು ಆರಂಭಿಸಿ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ, ನಾನು ನಿಮ್ಮೆಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದರು. ಮತ್ತೆ ಹಿಂದಿಯಲ್ಲೇ ಮಾತು ಮುಂದುವರಿಸಿ ಭಾಷಣ ಪೂರೈಸಿದರು.