ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮಕ್ಕೂ ಅನುಮತಿ ನೀಡಿ, ಕನಿಷ್ಠ ಸಂಖ್ಯೆ ವಿದ್ಯಾರ್ಥಿಗಳು ಇರುವ ಶಾಲೆಗಳನ್ನು ವಿಲೀನಗೊಳಿಸುವುದು ಅತ್ಯಂತ ಅಗತ್ಯದ ಕಾರ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ, ಶಿಕ್ಷಣ ಇಲಾಖೆ ಹಿರಿಯರನ್ನು ಗೌರವಿಸಿ ಅವರು ಮಾತನಾಡಿದರು. ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿಯೇ ಸಮಾಜದಲ್ಲಿ ಶಿಕ್ಷಕರಿಗಿರುವ ಗೌರವ ಬೇರೆಯವರಿಗಿಲ್ಲ. ವಿದ್ಯಾರ್ಥಿಗಳು ನಿಮ್ಮನ್ನು ಅನುಸರಿಸುವ ಕಾರಣ ನಿಮ್ಮಗಳ ವರ್ತನೆ ಬಗ್ಗೆ ಎಚ್ಚರ ವಹಿಸಿ ಎಂದರು.ಸರ್ಕಾರಗಳ ಎಡವಟ್ಟು ನೀತಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತು ಅಗತ್ಯ ಸೌಲಭ್ಯಗಳ ಕೊರತೆ ಮುಂತಾದ ಕಾರಣಗಳಿಂದಾಗಿ ಸರ್ಕಾರಿ ಶಾಲೆಗಳು ಸೊರಗುವಂತಾಗಿದೆ. ಕನಿಷ್ಠ ಸಂಖ್ಯೆ ವಿದ್ಯಾರ್ಥಿಗಳಿರುವ ಶಾಲೆಗಳಿಂದಾಗಿ ತರಗತಿಗೊಬ್ಬ ಶಿಕ್ಷಕರ ನೇಮಕ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡವರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವ ದುರಂತ ಎದುರಾಗಿದೆ ಎಂದರು.
ವಿದ್ಯಾರ್ಥಿಗಳ ಸಂಖ್ಯೆ ಅತಿ ಕಡಿಮೆ ಇರುವ ಶಾಲೆಗಳ ವಿದ್ಯಾರ್ಥಿಗಳ ಪೋಷಕರ ಮನವೊಲಿಸಿ ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಅನಿವಾರ್ಯತೆ ಮನಗಾಣಬೇಕಿದೆ. ಮುಖ್ಯವಾಗಿ ಬಡವರ ಮಕ್ಕಳಿಗೂ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮದ ಶಿಕ್ಷಣ ದೊರೆಯುವಂತೆ ಸರ್ಕಾರವೂ ಗಮನ ಹರಿಸಬೇಕಿದೆ. ಈ ವಿಚಾರದಲ್ಲಿ ಸರ್ಕಾರ ಮಕ್ಕಳ ಸಂಖ್ಯೆ ನಿಯಮ ಸಡಿಲಿಸಬೇಕಿದೆ ಎಂದು ಆಗ್ರಹಿಸಿದರು.ಶಾಲಾ ಶೌಚಾಲಯ ಶುದ್ಧೀಕರಣದ ವಿಚಾರದಲ್ಲಿ ರಾಜ್ಯದಲ್ಲಿ ನಡೆದಿರುವ ಬೆಳವಣಿಗೆ ಆತಂಕಕಾರಿ, ಖಂಡನೀಯವೂ ಆಗಿದೆ. ಶಾಲೆಗಳಲ್ಲಿ ಶೌಚಾಲಯ ಶುದ್ಧೀಕರಣಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲದ ಕಾರಣ ಈ ಸಮಸ್ಯೆ ಉದ್ಭವವಾಗಿದೆ. ಇದರ ಹಿಂದಿನ ಉದ್ದೇಶ ಕೇವಲ ದುರುದ್ದೇಶದಿಂದ ಕೂಡಿದೆ. ಓದುವ ಹಂತದಲ್ಲಿ ಹಿಂದೆ ಮಹಾನ್ ವ್ಯಕ್ತಿಗಳೂ ಶೌಚಾಲಯವನ್ನು ಶುದ್ಧಿಗೊಳಿಸಿದ್ದರು. ನಾವೂ ನಮ್ಮ ಮನೆ ಎಂಬ ಭಾವನೆಯಲ್ಲಿ ಸ್ವಚ್ಛತೆ ಮಾಡಿದ್ದೇವೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಜಯಂತಿ ನಾಗೇಶ್ ಮಾತನಾಡಿ, ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಲ್ಲ ಕೆಲಸಗಳಿಗೂ ಬಳಸಿಕೊಳ್ಳುತ್ತಿದೆ. ಎಲ್ಲ ಇಲಾಖೆಗಳಲ್ಲೂ ಅರ್ಹತೆಗೆ ಸರಿಯಾದ ಪ್ರಾಶಸ್ತ್ಯ ಇದೆ. ಆದರೆ, ಪದೋನ್ನತಿ ವಿಚಾರದಲ್ಲಿ ನಮ್ಮನ್ನು ನಗಣ್ಯ ಮಾಡಲಾಗಿದೆ. ಶಾಲೆಗಳಿಗೆ ಅಗತ್ಯವಿರುವ ಉಪಕರಣಗಳ ಕೊರತೆ ಇರುವುದನ್ನು ದಾನಿಗಳನ್ನು ಕಾಡಿ- ಬೇಡಿ ಹೊಂದಿಸಿಕೊಳ್ಳುವ ಅನಿವಾರ್ಯತೆ ಇದೆ. ಈಚೆಗೆ ಶೌಚಾಲಯ ಸ್ವಚ್ಛತೆ ವಿಚಾರ ಗಂಭೀರವಾಗಿದ್ದು ಶಿಕ್ಷಕರನ್ನು ಭಯಬೀತರನ್ನಾಗಿಸಿದೆ. ಶಾಲೆ ಶೌಚಾಲಯಗಳನ್ನು ಯಾರು ಸ್ವಚ್ಛ ಮಾಡಬೇಕು ಎಂಬುದೇ ಯಕ್ಗಷಪ್ರಶ್ನೆಯಾಗಿದೆ ಎಂದೂ ಆತಂಕ ವ್ಯಕ್ತಪಡಿಸಿದರು.ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರದ ಕುರಿತು ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಶ್ರೀಪತಿ ಹಳಗುಂದ ಉಪನ್ಯಾಸ ನೀಡಿದರು.
ಪಪಂ ಅಧ್ಯಕ್ಷೆ ಗೀತಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ನಿವೃತ್ತ ಬಿಇಓ ಆನಂದಕುಮಾರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಉಪಾಧ್ಯಕ್ಷ ಎಂ.ಎಸ್.ತಿಮ್ಮಪ್ಪ, ಪೋಷಣ್ ಅಭಿಯಾನ್ ಸಹಾಯಕ ನಿರ್ದೇಶಕ ಪ್ರವೀಣ್ ಮುಂತಾದವರು ವೇದಿಕೆಯಲ್ಲಿದ್ದರು.- - - -17ಟಿಟಿಎಚ್01:
ತೀರ್ಥಹಳ್ಳಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ನಿವೃತ್ತ ಬಿಇಒ ಆನಂದಕುಮಾರ್ ಅವರನ್ನು ಗೌರವಿಸಲಾಯಿತು.