ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರಕಾರ ಕೈ ತುಂಬಾ ಸಂಬಳ ಕೊಡುತ್ತದೆ, ನಿವೃತ್ತಿ ನಂತರ ಪಿಂಚಣಿ ನೀಡುತ್ತದೆ, ಇದು ಮಕ್ಕಳು ನನ್ನ ಕುಟುಂಬಕ್ಕೆ ನೀಡುವ ಅನ್ನ. ಆ ಮಕ್ಕಳಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಿದ್ದೇನೆ, ನನ್ನ ಸೇವೆ ನನಗೆ ತೃಪ್ತಿ ನೀಡಿದೆ ಎಂದು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಇಂದ್ರ ಕುಮಾರ್ ಹೇಳಿದರು.ತಮ್ಮ ಕಾಲೇಜು ಮತ್ತು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಸೇವಾವಧಿಯಲ್ಲಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ನನಗೆ ಸ್ಪಂದಿಸಿದ್ದಾರೆ. ಈ ಸ್ಪಂದನೆಯಿಂದಾಗಿ ನಾನು ಇಂದು ಎಲ್ಲರ ಮನ ಗೆಲ್ಲಲು ಸಾಧ್ಯವಾಗಿದೆ. ಎಲ್ಲರೂ ನನ್ನ ಸೇವೆ ಮತ್ತು ಗುಣದ ಬಗ್ಗೆ ಶ್ಲಾಘನೆ ಮಾಡಿದ್ದಾರೆ, ಬಡತನ ಕುಟುಂಬದಲ್ಲಿ ಬಂದವನು ನಾನು, ಸರಕಾರಿ ಶಾಲಾ- ಕಾಲೇಜುಗಳಲ್ಲಿ ಬಹುತೇಕ ಬಡ ಕುಟುಂಬದ ವರ್ಗದ ವಿದ್ಯಾರ್ಥಿಗಳೇ ಹೆಚ್ಚು ಇರುತ್ತಾರೆ, ಅವರಿಗೆ ನಾವು ನ್ಯಾಯ ಕೊಟ್ಟಾಗ ನಮ್ಮ ನಿವೃತ್ತಿಯ ಜೀವನವು ನೆಮ್ಮದಿಯಾಗಿರುತ್ತದೆ ಎಂಬುದು ನನ್ನ ಭಾವನೆ ಎಂದು ಹೇಳಿದರು.
ಕೋಲಾರದಲ್ಲಿ ನಾನು ಪ್ರೌಢಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುವ ವೇಳೆ ವಿದ್ಯಾರ್ಥಿಯೊಬ್ಬ ಹರಿದ ಪ್ಯಾಂಟನ್ನು ಹಾಕಿಕೊಂಡು ಬಂದಿದ್ದ, ಆತನಿಗೆ ನೂರು ರುಪಾಯಿ ಕೊಟ್ಟಿದ್ದೆ. ಆಗ ಒಂದು ಪ್ಯಾಂಟ್ ಹೊಲಿಸಿಕೊಂಡಿದ್ದ ಆ ವಿದ್ಯಾರ್ಥಿಯು ಇತ್ತೀಚೆಗೆ ಕೋಲಾರಕ್ಕೆ ನನ್ನನ್ನು ಕರೆಸಿಕೊಂಡಿದ್ದರು. ಆ ಹಳೆಯ ವಿದ್ಯಾರ್ಥಿಯು ಮಾತಾಡಿ, ಇಂದು ನಾನು ಮತ್ತು ನನ್ನಾಕೆ ಸರ್ಕಾರಿ ನೌಕರರಾಗಿದ್ದೇವೆ,ಇದಕ್ಕೆ ಇಂದ್ರ ಕುಮಾರ್ ಅವರ ಪ್ರೋತ್ಸಾಹ ಕಾರಣ ಎಂದು ಆವತ್ತು ನಾನು ಹೊಲಿಸಿಕೊಟ್ಟಿದ್ದ ಪ್ಯಾಂಟನ್ನು ಸಭೆಯಲ್ಲಿ ಪ್ರದರ್ಶಿಸಿದ ಎಂದು ಹಳೆಯ ಪ್ರಸಂಗ ನೆನೆದು, ಈ ಕಾಲೇಜಿನಲ್ಲಿ ನಾನು ಬೋಧಿಸುವ ವಿಷಯದಲ್ಲಿ ಹೆಚ್ಚು ಪ್ರತಿಭೆ ತೋರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ತಲಾ ಒಂದು ಸಾವಿರ ರು.ಗಳನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದೇನೆ. ಹಿಂದೆ ನನ್ನೊಂದಿಗೆ ಸೇವೆ ಸಲ್ಲಿಸಿ ತೆರಳಿರುವ ಮತ್ತು ನಿವೃತ್ತಿ ಹೊಂದಿರುವ ಉಪನ್ಯಾಸಕರು, ಪ್ರಾಂಶುಪಾಲರು ಬಂದು ನನ್ನನ್ನು ಹಾರೈಸಿದ್ದೀರಿ ನಿಮ್ಮೆಲ್ಲರಿಗೂ ಕೃತಜ್ಞತೆಗಳು ಎಂದರು.ಇದೇ ಕಾಲೇಜಿನಲ್ಲಿ ನಿವೃತ್ತಿ ಹೊಂದಿದ್ದ ಪ್ರಾಂಶುಪಾಲ ರಾಜಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉದ್ಧಾರ ಆಗಬೇಕೆಂದರೆ ನಿಮ್ಮಲ್ಲಿರುವ ಮೊಬೈಲ್ ಅನ್ನು ಕೈಬಿಡಿ, ಅದು ನಿಮ್ಮಲ್ಲಿದ್ದರೆ ತಂದೆ- ತಾಯಿಯ ಮಾತು, ಹಿತೈಷಿಗಳ ಮಾತು ಮತ್ತು ಗುರುಗಳ ಮಾತು ಸಹ ನಿಮಗೆ ಹಿಡಿಸದು. ಪಿಯುಸಿ ನಿಮ್ಮ ಜೀವನದಲ್ಲಿ ಒಳ್ಳೆಯ ತಿರುವನ್ನು ಪಡೆಯುವ ಸಮಯ, ತಪ್ಪು ತಪ್ಪು ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವುದರಿಂದ ನಿಮ್ಮ ಕುಟುಂಬ ಮತ್ತು ನಿಮ್ಮ ಭವಿಷ್ಯದ ಬಗ್ಗೆ ಕನಸು ಕಾಣುವ ಗುರುಗಳ ವರ್ಗಕ್ಕೂ ನೋವಾಗುತ್ತದೆ ಎಂದರು.
ಪಪೂ ಕಾಲೇಜು ಪ್ರಾಂಶುಪಾಲ ರೇಣುಕಾರಾಧ್ಯ, ಹಾಸನ ಕಾಲೇಜಿನ ಲಕ್ಷ್ಮೀನಾರಾಯಣ್ , ಪರಶಿವಮೂರ್ತಿ ನಿ., ಪ್ರಾಂಶುಪಾಲ ಕವಲೀರಪ್ಪ, ಸರ್ಕಾರಿ ಬಾಲಕಿಯರ ಕಾಲೇಜಿನ ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ, ನಿವೃತ್ತ ಉಪನ್ಯಾಸಕ ರಾಮಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದಮೂರ್ತಿ, ಶಿಕ್ಷಣ ಸಂಯೋಜಕ ಯೋಗೇಶ್, ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ, ಇಂದ್ರ ಕುಮಾರ್ ಅವರ ಹಳೆಯ ವಿದ್ಯಾರ್ಥಿ ಹಾಗೂ ಪ್ರೌಢಶಾಲೆ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ್ ಮತ್ತು ಇಂದ್ರ ಕುಮಾರ್ ಅವರ ಧರ್ಮಪತ್ನಿ ಹಾಗೂ ಬಂಧುಗಳು ಸೇರಿ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಂದ್ರಕುಮಾರ್ ಅವರನ್ನು ಅಭಿನಂದಿಸಿದರು. ಕಾಲೇಜಿನ ಉಪನ್ಯಾಸಕ ಹಾಗೂ ಎನ್ಎಸ್ಎಸ್ ಅಧಿಕಾರಿ ಗೋವಿಂದರಾಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.