ಶಿಕ್ಷಕರು ರಾಜಕೀಯ ಪಕ್ಷ, ರಾಜಕಾರಣಿಗಳೊಂದಿಗೆ ಗುರುತಿಸಿಕೊಳ್ಳಬೇಡಿ

| Published : Sep 08 2025, 01:01 AM IST

ಶಿಕ್ಷಕರು ರಾಜಕೀಯ ಪಕ್ಷ, ರಾಜಕಾರಣಿಗಳೊಂದಿಗೆ ಗುರುತಿಸಿಕೊಳ್ಳಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಶಿಕ್ಷಕರಿಗೆ ಅಪಾರ ಗೌರವ, ನಂಬಿಕೆ ಇದೆ. ಶಿಕ್ಷಕರಿಂದ ನಿರೀಕ್ಷಿತ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ.

ಧಾರವಾಡ: ಶಿಕ್ಷಕ ಸಮೂಹವು ರಾಜಕೀಯ ಪಕ್ಷ, ರಾಜಕಾರಣಿಗಳೊಂದಿಗೆ ಗುರುತಿಕೊಳ್ಳದೇ ಶಿಕ್ಷಣವನ್ನೇ ತಮ್ಮ ದೈಯ್ಯವೆಂದು ಭಾವಿಸಿ, ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸಲಹೆ ನೀಡಿದರು.

ಸಮಾಜದಲ್ಲಿ ಶಿಕ್ಷಕರಿಗೆ ಅಪಾರ ಗೌರವ, ನಂಬಿಕೆ ಇದೆ. ಶಿಕ್ಷಕರಿಂದ ನಿರೀಕ್ಷಿತ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕೆಂದರು.

ಜೆಎಸ್ಸೆಸ್‌ ಕಾಲೇಜು ಆವರಣದಲ್ಲಿರುವ ಸನ್ನಿಧಿ ಕಲಾ ಕ್ಷೇತ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನೋತ್ಸವದಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಅವರು, ಶಿಕ್ಷಕ ವೃತ್ತಿ ಪವಿತ್ರವಾದದ್ದು, ವ್ಯಕ್ತಿ ಏಷ್ಟೇ ಎತ್ತರಕ್ಕೆ ಏರಿದರು ತನಗೆ ಶಿಕ್ಷಣ ನೀಡಿದ, ಪಾಠ ಕಲಿಸಿದ ಶಿಕ್ಷಕರ ಬಗ್ಗೆ ಅಪಾರ ಗೌರವ ಇರುತ್ತದೆ ಎಂದರು.

ಜಿಲ್ಲಾಡಳಿತವು ಮಿಷನ್ ವಿದ್ಯಾಕಾಶಿ ಮೂಲಕ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಅನೇಕ ಪ್ರಯತ್ನ ಮಾಡಿದ್ದು, ಉತ್ತಮ ಸ್ಥಾನಕ್ಕೂ ಶಿಕ್ಷಕರೇ ಕಾರಣ. ಕಳಪೆ ಸಾಧನೆಗೂ ಅವರೇ ಕಾರಣರಾಗುತ್ತಾರೆ. ಆದ್ದರಿಂದ ಜಿಲ್ಲೆಯು ರಾಜ್ಯದ ಮೊದಲ ಹತ್ತು ಜಿಲ್ಲೆಗಳಲ್ಲಿ ಇರುವಂತೆ ನೋಡಿಕೊಳ್ಳಿ ಎಂದರು.

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಈ ಹಿಂದಿನ ಗುರುಕುಲ ಪದ್ಧತಿಯಾಗಲಿ ಅಥವಾ ಸಾಂಪ್ರದಾಯಿಕ ಶಿಕ್ಷಣ ಕ್ರಮವಾಗಲಿ ಈಗಿಲ್ಲ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿತ್ತು. ಆದರೆ, ಈಗಿನ ವ್ಯವಸ್ಥೆಯಲ್ಲಿ ಕೇವಲ ಪಠ್ಯಕ್ರಮ ಮತ್ತು ಅಂಕಗಳಿಗೆ ಸೀಮಿತವಾಗಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಒತ್ತು ಸಿಗುತ್ತಿಲ್ಲ ಎಂದ ಖೇದ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಮೇಯರ್‌ ಜ್ಯೋತಿ ಪಾಟೀಲ, ಜಿಪಂ ಸಿಇಓ ಭುವನೇಶ ಪಾಟೀಲ ಮಾತನಾಡಿದರು. ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರನ್ನು ಪ್ರಮಾಣ ಪತ್ರ ನೀಡಿ, ಗೌರವಿಸಲಾಯಿತು. ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಾ. ರೇಣುಕಾ ಅಮಲಝರಿ ಸೇರಿದಂತೆ ಶಿಕ್ಷಣ ಇಲಾಖಾಧಿಕಾರಿಗಳಿದ್ದರು.