ರಾಮನಗರ: ಜನಗಣತಿ ಕಾರ್ಯ ಕಾನೂನು ಬದ್ಧ ಕೆಲಸ. ಇದನ್ನು ಶಿಕ್ಷಕರು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಗರಸಭೆ ವತಿಯಿಂದ ನಡೆದ ರಾಷ್ಟ್ರೀಯ ಜನಗಣತಿ 2027ರ ಗಣತಿದಾರರು ಮತ್ತು ಮೇಲ್ವಿಚಾರಕರ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜಿಲ್ಲಾಡಳಿತ ನಿಯೋಜಿಸುವ ಚುನಾವಣೆಗಳು, ಸಮಿಕ್ಷೆ ಕಾರ್ಯ ಹಾಗೂ ಪರೀಕ್ಷಾ ಕರ್ತವ್ಯಗಳನ್ನು ಸಮರ್ಥವಾಗಿ ನಡೆಸುವ ಮೂಲಕ ಜಿಲ್ಲೆಯಲ್ಲಿ ಶಿಕ್ಷಕರಿಗೆ ಒಳ್ಳೆಯ ಹೆಸರಿದೆ ಎಂದರು.ಜನಗಣತಿ ಸುಗಮವಾಗಿ ನಡೆಸಲು ಜಿಲ್ಲೆಯಲ್ಲಿ 5 ತಹಸೀಲ್ದಾರರು, 6 ಜನ ನಗರಸಭೆ, ಪುರಸಭೆಯ ಅಧಿಕಾರಿಗಳು ಸೇರಿ ಒಟ್ಟು 11 ಉಸ್ತುವಾರಿ ಅಧಿಕಾರಿಗಳು ನೇಮಕವಾಗಿದ್ದು, ಯಾವುದೇ ಗೊಂದಲವಿಲ್ಲದೆ ಸರಳವಾಗಿರುವ ಜನಗಣತಿ ಕಾರ್ಯ ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರ ತರಬೇತಿದಾರರ ಮೂಲಕ ಗಣತಿದಾರರು ಕೆಲಸ ನಿರ್ವಹಿಸಲಿದ್ದಾರೆ. ಹಾಗಾಗಿ ಸಮಸ್ಯೆಗಳ ಬಗ್ಗೆ ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡು ಜನಗಣತಿಯನ್ನು ಯಶಸ್ವಿಯಾಗಿಸಿ ಎಂದು ಕರೆ ನೀಡಿದರು.
ಏ.15 ರವರೆಗೆ ಸ್ವಯಂ ಜನಗಣತಿ, ಏ.15 ರಿಂದಮೇ 15 ರವರೆಗೆ ಮನೆ ಮನೆ ಗಣತಿ ಎರಡು ಹಂತದಲ್ಲಿ ಡಿಜಿಟಲ್ ಮೂಲಕ ಜನಗಣತಿ ನಡೆಯಲಿದೆ. ನೀವು ಲಾಗಿನ್ ಆದ ತಕ್ಷಣ ಜನಗಣತಿ ಕಾರ್ಯ ಮಾಡಬೇಕಾದ ಬ್ಲಾಕ್ ಮಾಹಿತಿ ಲಭ್ಯವಾಗಲಿದೆ. ನಿಮ್ಮ ಬ್ಲಾಕ್ ನಲ್ಲಿ ಒಂದು ಮನೆಯ ಜನಗಣತಿ ಮಾಹಿತಿ ಬಿಟ್ಟು ಹೋಗಬಾರದು ಮತ್ತು ಓವರ್ ಲ್ಯಾಪ್ ಸಹ ಆಗಬಾರದು. ಮೊದಲು ಬ್ಲಾಕ್ ದೃಡಪಡಿಸಿಕೊಂಡು ಮೇಲ್ವಿಚಾರಕರ ನೆರವು ಪಡೆಯಿರಿ ಎಂದು ಚಂದ್ರಯ್ಯ ಸಲಹೆ ನೀಡಿದರು.ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿ, ಪ್ರತಿ10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ 2021 ರಲ್ಲಿ ಕೋವಿಡ್ ನಿಂದ ಜನಗಣತಿ ಸಾಧ್ಯವಾಗಿರಲಿಲ್ಲ. ಅದು ಇದೀಗ 2026 ರ ಏಪ್ರಿಲ್ ನಲ್ಲಿ ನಡೆಯುತ್ತಿದೆ. 1872 ರಲ್ಲಿ ಆರಂಭವಾದ ಜನಗಣತಿ ಈಗ ಅದು 16ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯ ನಂತರದ 8ನೇ ರಾಷ್ಟ್ರೀಯ ಜನಗಣತಿ ಯಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ. ಜನಗಣತಿ ಅಂಕಿ- ಅಂಶಗಳ ಆಧಾರದ ಮೇಲೆ ಸರ್ಕಾರ ಯೋಜನೆಗಳನ್ನು ರೂಪಿಸಲು ಮೂಲ ಆಧಾರವಾಗಲಿದೆ. ಆಗಾಗಿ ಮೂರು ದಿನಗಳ ಕಾಲ ತರಬೇತಿ ಪಡೆದು ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಿ ಎಂದು ಮನವಿ ಮಾಡಿದರು.
ಬಿಇಒ ಪಿ.ಸೋಮಲಿಂಗಯ್ಯ ಮಾತನಾಡಿ, ಶಿಕ್ಷಕರು ಜಿಲ್ಲಾಡಳಿತ ವಹಿಸಿದ ಕರ್ತವ್ಯ ಗಳನ್ನು ಜವಬ್ದಾರಿಯಿಂದ ನಿರ್ವಹಿಸಿದ್ದು, 2027 ರ ಜನಗಣತಿ ಕಾರ್ಯ ನಡೆಸಲು ನಾವು ಮತ್ತು ನಮ್ಮ ಶಿಕ್ಷಕರು ಸಿದ್ದರಿದ್ದೇವೆ. ನಮ್ಮ ದೇಶದ ದತ್ತಾಂಶ ಸಂಗ್ರಹಿಸುವ ಕೆಲಸ ಮಾಡುವ ಅವಕಾಶ ಸಿಕ್ಕಿರು ವುದು ನಮ್ಮ ಭಾಗ್ಯ ಎಂದು ಭಾವಿಸಿದ್ದು ಯಶಸ್ವಿ ಯಾಗಿ ಗಣತಿ ಕಾರ್ಯ ನಡೆಸುವುದಾಗಿ ಹೇಳಿದರು.
ನಗರಸಭೆ ಎಇಇ ವಿಶ್ವನಾಥ್, ಪರಿಸರ ವಿಭಾಗದ ಎಇಇ ಸುಬ್ರಮಣಿ, ಆರ್ ಐ ಕಿರಣ್, ಮಾಸ್ಟರ್ ಟ್ರೈನರ್ಸ್ ಗಳಾದ ಮಲ್ಲಿಕಾರ್ಜುನ, ಸಿದ್ದಲಿಂಗಸ್ವಾಮಿ, ರಾಜಶೇಖರ ಪಾಟೀಲ್, ರವಿಕುಮಾರ್, ಮುನಿಯಪ್ಪ ಸೇರಿದಂತೆ ಗಣತಿದಾರರು ತರಬೇತಿ ಕಾರ್ಯದಲ್ಲಿ ಭಾಗವಹಿಸಿದ್ದರು.
3ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಗರಸಭೆಯಿಂದ ನಡೆದ ರಾಷ್ಟ್ರೀಯ ಜನಗಣತಿ 2027 ರ ಗಣತಿದಾರರು ಮತ್ತು ಮೇಲ್ವಿಚಾರಕರ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಉದ್ಘಾಟಿಸಿದರು.