ಯಲಬುರ್ಗಾ: ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರೇ ಕಾರಣೀಕರ್ತರಾಗಿದ್ದಾರೆ ಎಂದು ಬಿಇಒ ಅಶೋಕ ಗೌಡರ ಹೇಳಿದರು.
ಪಟ್ಟಣದ ಶಿಕ್ಷಕರ ಪತ್ತಿನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಅವಳಿ ತಾಲೂಕಿನ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಶಿಕ್ಷಕರ ಸಂಘಟನೆಗಳು ಸಂಘದ ಹಿತಕ್ಕಾಗಿ ಕಾರ್ಯ ನಿರ್ವಹಿಸಿದರೆ ಸಂಘದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನನ್ನ ಅವಧಿಯಲ್ಲಿ ಶಿಕ್ಷಕರ ಬೇಡಿಕೆಗಳಿಗೆ ಪರಿಹಾರ ಒದಗಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ. ಸರ್ಕಾರ ತಂದಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಇಲಾಖೆ ಕೆಲಸ ಮಾಡುತ್ತಿದ್ದು ಇದಕ್ಕೆ ಶಿಕ್ಷಕರು ಕೂಡ ಕೈಜೋಡಿಸಬೇಕು. ನೂತನ ಪದಾಧಿಕಾರಿಗಳು ಎಲ್ಲ ಶಿಕ್ಷಕರ ಹಿತ ಕಾಪಾಡಬೇಕು ಎಂದರು.
ನೂತನ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣಾ ಮಾತನಾಡಿ, ಎರಡನೇ ಅವಧಿಗೆ ಅಧ್ಯಕ್ಷರಾಗಲು ಎಲ್ಲ ಶಿಕ್ಷಕರ ಸಹಕಾರದಿಂದ ಅವಕಾಶ ದೊರಕಿದೆ. ತಾಲೂಕಿನ ಶಿಕ್ಷಕರ ಪರವಾಗಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆನ್‌ಲೈನ್ ಹಾಜರಾತಿ ಕಡ್ಡಾಯ ಶಿಕ್ಷಕ ಸಮುದಾಯಕ್ಕೆ ಭಾರಿ ತೊಂದರೆಯಾಗುತ್ತದೆ. ಇದನ್ನು ರದ್ದುಗೊಳಿಸುವ ಕೆಲಸ ಸರ್ಕಾರ ಮಾಡಬೇಕು. ಸಂಘದ ಬೆಳವಣಿಗೆಗೆ ಎಲ್ಲ ಶಿಕ್ಷಕರ ಸಹಕಾರದ ಅವಶ್ಯಕತೆ ಇದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ನಿವೃತ್ತ ಉಪನಿರ್ದೇಶಕ ಶಂಕ್ರಪ್ಪ ಗಾಂಜಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಮುಳಗುಂದ, ಸಂಗಯ್ಯ ಹಿರೇಮಠ, ಶರಣಯ್ಯ ಸರಗಣಾಚಾರ, ಮೆಹಬೂಬ್ ಬಾದಶ, ಕಳಕಮಲ್ಲಪ್ಪ ಅಂತೂರ, ವೀರಭದ್ರಪ್ಪ ಅಂಗಡಿ, ಶಿವಪುತ್ರಪ್ಪ ತಿಪ್ಪನಾಳ, ಬಾಲದಂಡಪ್ಪ ತಳವಾರ್, ಶಿವಪ್ಪ ಕೊಂಡಗುರಿ, ಶಿವಾನಂದ ಮಾಳಗಿ, ನಾಗರಾಜ ನಡುಲಕೇರಿ ಹಾಗೂ ಪದಾಧಿಕಾರಿಗಳು ಮತ್ತಿತರರು ಇದ್ದರು.