ಶಿಕ್ಷಕರು ವಿದ್ಯಾರ್ಥಿಗಳಿಗೆ ಸದ್ಗುಣ, ಸಂಸ್ಕಾರ ಕಲಿಸಲಿ: ರಂಗನಾಥ ಸ್ವಾಮಿ ಸಲಹೆ

| Published : Jun 30 2025, 01:47 AM IST

ಸಾರಾಂಶ

ನಾನು ನನ್ನ ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಮಕ್ಕಳ ಭವಿಷ್ಯದ ಬಗ್ಗೆ ಪೋಷಕ ವೃಂದದವರಲ್ಲಿ ಕುಳಿತು ಚರ್ಚಿಸುತಿದ್ದಂತಹ ನನ್ನ ವೃತ್ತಿ ಬದ್ಧತೆಯನ್ನು ಕಂಡು ನನ್ನನ್ನು ಹಳ್ಳಿಯ ಜನರು ಪ್ರೀತಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಶಿಕ್ಷಕರಾಗುವುದು ಮುಖ್ಯವಲ್ಲ, ವಿದ್ಯಾರ್ಥಿಗಳಿಗೆ ಸದ್ಗುಣ, ಸಂಸ್ಕಾರ ಕಲಿಸಿ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವಂತೆ ಬೋಧನೆ ನೀಡುವವನೇ ನಿಜವಾದ ಶಿಕ್ಷಕ ಎಂದು ಹಾಸನ ಡಯಟ್ ಪ್ರಾಂಶುಪಾಲ ರಂಗನಾಥಸ್ವಾಮಿ ಹೇಳಿದರು.

ಕಣಕಟ್ಟೆ ಹೋಬಳಿ ಹೊಳಲ್ಕೆರೆ ಶ್ರೀರಾಮೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸೇವಾ ವಯೋ ನಿವೃತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ನಾಣ್ಣುಡಿಯಂತೆ ಸ್ವಂತ ಮಕ್ಕಳು ನಮಗೆ ಮುಪ್ಪಿನ ಕಾಲದಲ್ಲಿ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಇಲಾಖೆ ಮಾತ್ರ ಕೊನೆ ಉಸಿರಿರುವ ತನಕ ನಮಗೆ ಅನ್ನವನ್ನು ನೀಡುತ್ತದೆ. ಆ ಅನ್ನಕ್ಕೆ ಕುತ್ತುಬಾರದಂತೆ ನಾವು ನಡೆದುಕೊಳ್ಳಬೇಕು, ಆಗ ಮಾತ್ರ ಶಿಕ್ಷಕ ಎಂಬ ಹೆಸರು ಗಳಿಸಲಿಕ್ಕೆ ಸಾಧ್ಯ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಶಿಕ್ಷಕ ಕೆ.ಎಂ. ಶಿವಯೋಗಿಯವರು ಇದುವರೆಗೂ ಶಿಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಇಂದು ವಯೋಸಹಜ ನಿವೃತ್ತಿ ಹೊಂದಿದ್ದಾರೆ. ಅವರು ಸೇವೆ ಸಲ್ಲಿಸಿದಂಥ ಗ್ರಾಮಗಳಲ್ಲೆಲ್ಲಾ ಅತ್ಯುತ್ತಮ ಶಿಕ್ಷಕ ಎಂಬ ಹೆಸರು ಪಡೆದಿರುವುದಕ್ಕೆ ಇಂದು ಈ ಕಾರ್ಯಕ್ರಮಕ್ಕೆ ಶಿಕ್ಷಕರಷ್ಟೇ ಅಲ್ಲದೇ ಗ್ರಾಮಸ್ಥರು ಸಹ ಆಗಮಿಸಿರುವುದು. ಇದರಿಂದಲೇ ಶಿವಯೋಗಿಯವರ ಮೇಲಿನ ಅಭಿಮಾನ ಎಂಥದ್ದು ಎಂಬುದು ತಿಳಿಯುತ್ತದೆ ಎಂದರು.

ಶಿಕ್ಷಣ ಸಂಯೋಜಕ ಸತೀಶ್ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾದದ್ದು, ತಂದೆ- ತಾಯಿಗಳು ಮಕ್ಕಳಿಗೆ ಜನ್ಮ ಕೊಟ್ಟರೆ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು ಎಂದರು.

ವಯೋ ನಿವೃತ್ತಿ ಹೊಂದಿ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಕೆ.ಎಂ. ಶಿವಯೋಗಿ, ನಾನು ಸೇವೆ ಸಲ್ಲಿಸಿದಂತಹ ಹಳ್ಳಿಗಳಲ್ಲಿ ಜನರು ನನ್ನನ್ನು ಗೌರವದಿಂದ ಕಾಣುತ್ತಿದ್ದರು, ನಾನು ನನ್ನ ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಮಕ್ಕಳ ಭವಿಷ್ಯದ ಬಗ್ಗೆ ಪೋಷಕ ವೃಂದದವರಲ್ಲಿ ಕುಳಿತು ಚರ್ಚಿಸುತಿದ್ದಂತಹ ನನ್ನ ವೃತ್ತಿ ಬದ್ಧತೆಯನ್ನು ಕಂಡು ನನ್ನನ್ನು ಹಳ್ಳಿಯ ಜನರು ಪ್ರೀತಿಸುತ್ತಿದ್ದರು. ಅಂತಹ ಬದ್ಧತೆಯನ್ನು ನಾನು ಅಳವಡಿಸಿಕೊಂಡು ಬಂದಿದ್ದರಿಂದ ಇಂದು ನನ್ನ ನಿವೃತ್ತಿ ಕಾರ್ಯಕ್ರಮಕ್ಕೆ ಶಿಕ್ಷಕರ ಜೊತೆಗೆ ಪೋಷಕರು ಸಹ ಭಾಗವಹಿಸಿರುವುದು ಎಂದು ನನಗೆ ಅನಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಧಾರಾವಾಹಿ ನಟರಾದ ಹುಳಿಯಾರ್ ಗೌಡಯ್ಯ, ಚಲನಚಿತ್ರ ನಟರಾದ ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ಕುಮಾರ್‌, ಕನಕಟ್ಟೆ ಹೋಬಳಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ನಿವೃತ್ತಿ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.