ಹುಬ್ಬಳ್ಳಿ:
ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯುಕ್ತಿಗೊಳಿಸಿದ್ದರಿಂದ ಆಯಾ ವರ್ಗದ ಮಕ್ಕಳು ಶಾಲೆಯತ್ತ ಮುಖ ಮಾಡದೇ ಮನೆಯಲ್ಲಿ ಉಳಿಯುತ್ತಿವೆ. ಸರ್ಕಾರವೇ ಮುಂದೆ ನಿಂತು ಈ ಎಳೆಯ ಮಕ್ಕಳ ಓದಿಗೆ ಕಲ್ಲು ಹಾಕುತ್ತಿರುವುದು ಬೆಳಕಿಗೆ ಬಂದಿದೆ.ನಗರದಲ್ಲಿನ ಅಮರ ಜವಾನ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿ ಇದ್ದು, ಬರೋಬ್ಬರಿ 350ಕ್ಕೂ ವಿದ್ಯಾರ್ಥಿಗಳಿದ್ದಾರೆ. ಪ್ರತಿ ತರಗತಿಯಲ್ಲಿ 50-60 ವಿದ್ಯಾರ್ಥಿಗಳಿದ್ದು 6 ಜನ ಶಿಕ್ಷಕರಿದ್ದಾರೆ. ಈ ಪೈಕಿ ಒಬ್ಬರನ್ನು ಈಗಾಗಲೇ ಎಸ್‌ಐಆರ್‌ಗೆ ನಿಯೋಜಿಸಲಾಗಿದೆ. ಇನ್ನೊಬ್ಬ ಶಿಕ್ಷಕಿ ಮುಕ್ತಾಯಿನಿ ತುಪ್ಪದ ಎಂಬುವವರನ್ನು ನಿಯೋಜಿಸಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದು, ಈ ಇಬ್ಬರೂ ಪಾಠ ಮಾಡುತ್ತಿದ್ದ ಮಕ್ಕಳೀಗ ಶಿಕ್ಷಕರೇ ಇಲ್ಲದೇ ಶಾಲೆಗೆ ಬಂದು ಏನು ಮಾಡುವುದು ಎನ್ನುವ ಗೊಂದಲದಲ್ಲಿದ್ದಾರೆ.
ಇದೇ ಸಂಸ್ಥೆಯ ಪ್ರೌಢಶಾಲೆ, ಕ್ರೀಡಾ ವಸತಿ ಶಾಲೆಗಳಿಂದ ತಲಾ ಒಬ್ಬ ಶಿಕ್ಷಕರಂತೆ ಇಬ್ಬರನ್ನೂ ನಿಯೋಜಿಸಲಾಗಿದೆ. ಒಂದೇ ಸಂಸ್ಥೆಯಿಂದ ನಾಲ್ಕು ಸಿಬ್ಬಂದಿ ನಿಯೋಜಿಸಿಕೊಂಡರೆ ಶೈಕ್ಷಣಿಕ ಸಂಸ್ಥೆ ನಡೆಸುವುದಾದರೂ ಹೇಗೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಎಸ್‌ಐಆರ್‌ಗೆ ನಿಯೋಜಿಸಿದ ಶಿಕ್ಷಕರ ತರಗತಿಯನ್ನು ಯಾರು ನಡೆಸಬೇಕು? ಕಡಿಮೆ ಶಿಕ್ಷಕರಿರುವ ಕಾರಣ ತರಗತಿ ನಡೆಸುವುದು ಕಷ್ಟವಾಗುತ್ತದೆ ಎನ್ನುವುದು ಸಂಸ್ಥೆಯ ಆಡಳಿತ ಮಂಡಳಿಯ ಅಳಲು.ಮನವಿ ಸ್ವೀಕರಿಸುತ್ತಿಲ್ಲ:
ಎಸ್‌ಐಆರ್ ಕೆಲಸದಿಂದ ನಮ್ಮನ್ನು ಕೈ ಬಿಡಬೇಕು ಎಂಬ ಮನವಿ ಕೊಡಲು ಪಾಲಿಕೆಗೆ ತೆರಳಿದರೆ ಯಾರು ಸ್ವೀಕರಿಸುತ್ತಿಲ್ಲ. ಎಸ್‌ಐಆರ್ ವಿಷಯವಾಗಿ ಯಾರಾದರೂ ಮನವಿ ಕೊಡಲು ಬಂದರೆ ಪಡೆದುಕೊಳ್ಳಬೇಡಿ ಎಂದು ಆಯುಕ್ತರು ಸೂಚಿಸಿದ್ದಾರೆಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಹೀಗಾದರೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಎಂಬ ಪ್ರಶ್ನೆ ಶಿಕ್ಷಕರು, ಸಂಸ್ಥೆಯ ಅಧ್ಯಕ್ಷರದ್ದು.
ಈ ನಡುವೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಫಾರಸು ಇದ್ದರೆ ತಾನಾಗಿಯೇ ರದ್ದಾಗುತ್ತದೆಯಂತೆ. ಜತೆಗೆ ಸಂಘದ ಪದಾಧಿಕಾರಿಗಳಿಗೂ ಎಸ್‌ಐಆರ್‌ಗೆ ನಿಯೋಜಿಸಿಲ್ಲವಂತೆ. ಈ ತಾರತಮ್ಯವೇಕೆ? ಎನ್ನುವುದು ಶಿಕ್ಷಕರ ಪ್ರಶ್ನೆ.
ಆವರಣದಲ್ಲಿ ಪಾಠ:ಜೂ. 30ರಿಂದ ರಾಜ್ಯದಲ್ಲಿ ಎಸ್‌ಐಆರ್ ನಡೆಯುತ್ತಿದೆ. ಎಸ್‌ಐಆರ್‌ಗೆ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಬೇರೆ ಇಲಾಖೆ ಸಿಬ್ಬಂದಿ ಬಳಸಿಕೊಳ್ಳಿ. ಶಿಕ್ಷಕರನ್ನೇ ಬಳಸಿಕೊಂಡು ಮಕ್ಕಳ ಭವಿಷ್ಯಕ್ಕೆ ಏಕೆ ಕೊಡಲಿ ಏಟು ಕೊಡುತ್ತಿದ್ದೀರಿ ಎಂಬ ಆಕ್ಷೇಪ ಕೇಳಿಬಂದಿದೆ.38 ಇಲಾಖೆಗಳಿದ್ದು ಇಂಥ ಕೆಲಸಗಳಿಗೆ ಬರೀ ಶಿಕ್ಷಕರಷ್ಟೇ ಏಕೆ? ಹೆಚ್ಚು ಒತ್ತಡ, ಕೆಲಸವಿಲ್ಲದ ಇಲಾಖೆಗಳಾಗಿರುವ ರೇಷ್ಮೆ, ಅಂಕಿ ಸಂಖ್ಯೆ ಹಾಗೂ ಸಾಂಖ್ಯಿಕ ಇಲಾಖೆ, ಪದವಿ ಪೂರ್ವ ಶಿಕ್ಷಣ ಸೇರಿದಂತೆ ಹತ್ತಾರು ಇಲಾಖೆಗಳಿವೆ. ಜತೆಗೆ ಮಹಾನಗರ ಪಾಲಿಕೆ ಸಿಬ್ಬಂದಿಯೂ ಇದ್ದಾರೆ. ಇವರೆನ್ನೆಲ್ಲ ಬಳಸಿಕೊಳ್ಳಿ. ನಮ್ಮನ್ನಷ್ಟೇ ಏಕೆ ಬಳಸಿಕೊಳ್ಳುತ್ತೀರಿ ಎಂಬ ಪ್ರಶ್ನೆ ಪ್ರಾಥಮಿಕ ಶಾಲಾ ಶಿಕ್ಷಕರದ್ದು.
ಶಿಕ್ಷಕರ ನಿಯೋಜನೆಯನ್ನು ರದ್ದುಪಡಿಸದಿದ್ದಲ್ಲಿ ಮಹಾನಗರ ಪಾಲಿಕೆ ಆವರಣಕ್ಕೆ ಮಕ್ಕಳನ್ನು ಕರೆದುಕೊಂಡು ಬಂದು ಪಾಠ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಈ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಆ ಶಾಲೆಯ ಉಳಿದ ಶಿಕ್ಷಕರು ನೀಡಿದ್ದಾರೆ.ಶಾಲೆಯ ಶಿಕ್ಷಕರನ್ನೆಲ್ಲ ಎಸ್‌ಐಆರ್‌ಗೆ ನಿಯೋಜಿಸಿದರೆ ಶಾಲೆಯನ್ನು ಅದ್ಹೇಗೆ ನಡೆಸಬೇಕು? ನಮ್ಮ ಸಮಸ್ಯೆ ಕೇಳಲು ಮನವಿ ಕೂಡ ಸ್ವೀಕರಿಸುತ್ತಿಲ್ಲ ಎಂದರೆ ಹೇಗೆ? ಹೀಗಾದರೆ ಮಕ್ಕಳನ್ನು ಪಾಲಿಕೆ ಆವರಣಕ್ಕೆ ಕರೆದು ತಂದು ಪಾಠ ಮಾಡಿಸುವ ಮೂಲಕ ಶಿಕ್ಷಕರಿಂದಲೇ ಪ್ರತಿಭಟನೆ ನಡೆಸಬೇಕಾಗುತ್ತದೆ.
ಡಿ.ಡಿ.ಮೇಚನ್ನವರ, ಅಧ್ಯಕ್ಷರು, ಪ್ರಿಯದರ್ಶಿನಿ ಜನಸೇವಾ ಸಾಗರ