ಕನ್ನಡಪ್ರಭ ವಾರ್ತೆ ಕುಣಿಗಲ್ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಆಕಾಂಕ್ಷಿಯಾದ ಎಂ ಎನ್ ರಾಮಸ್ವಾಮಿ ಹೆಸರನ್ನು ಕೈಬಿಟ್ಟು ಸಂಘದ ಚುನಾವಣೆಯಲ್ಲಿ ವಾಮಮಾರ್ಗದಲ್ಲಿ ಅಕ್ರಮ ಮಾಡಲಾಗಿದೆ ಎಂದು ಶಿಕ್ಷಕರು ಬಿಇಒ ಕಛೇರಿ ಎದುರು ಪ್ರತಿಭಟಿಸಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಎಂಎನ್ ರಾಮಸ್ವಾಮಿ, ಕಳೆದ ಬಾರಿ ಇದ್ದಂತಹ ಆಡಳಿತ ಮಂಡಳಿ ನನ್ನನ್ನು ಈ ಬಾರಿ ಚುನಾವಣೆಗೆ ಸ್ಪರ್ಧಿಸಬಾರದೆಂದು ಉದ್ದೇಶಪೂರ್ವಕವಾಗಿ ನನ್ನ ಮೇಲೆ ಸಂಘ ವಿರೋಧಿ ಕಾರಣ ಹೇಳಿ ಸದಸ್ಯತ್ವ ನೀಡದೇ ಕೈಬಿಟ್ಟಿದೆ. ಕಳೆದ ಎರಡು ದಿನಗಳ ಹಿಂದೆ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯನ್ನು ಪ್ರಕಟ ಮಾಡಿದಾಗ ನನ್ನ ಹೆಸರು ಇತ್ತು ಆದರೆ ಅಂತಿಮ ಪಟ್ಟಿಯಲ್ಲಿ ಹೆಸರನ್ನು ಕೈಬಿಟ್ಟಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ. ಪ್ರತಿ ವರ್ಷವೂ ವಂತಿಕೆಯನ್ನು ಸಂಘಕ್ಕೆ ಪಾವತಿಸುತ್ತಿದ್ದು ಶಿಕ್ಷಕರ ಪರವಾಗಿ ನಿರಂತರ ಸೇವೆ ಹೋರಾಟ ಮಾಡುತ್ತಿದ್ದೇನೆ ಸಂಘದಿಂದ ಶಿಕ್ಷಕರಿಗೆ ಅನುಕೂಲ ಆಗುವ ವಿಚಾರಗಳನ್ನು ಪ್ರಸ್ಥಾಪಿಸಿದ್ದಕ್ಕೆ ಸಂಘ ವಿರೋಧಿ ಹೇಗೆ ಸಾಧ್ಯ ಎಂದರು. ಈ ಬಾರಿ ನಾನು ಚುನಾವಣಾ ಪ್ರಬಲ ಆಕಾಂಕ್ಷಿಯಾಗಿದ್ದು ನನ್ನ ತಂಡವನ್ನು ಗೆಲ್ಲಿಸಲು ತಾಲೂಕಿನ ಎಲ್ಲಾ ಶಿಕ್ಷಕರು ಒಲವು ತೋರಿದ ಹಿನ್ನೆಲೆಯಲ್ಲಿ ವಾಮಮಾರ್ಗದಲ್ಲಿ ನನ್ನನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ನಿಸ್ಪಕ್ಷಪಾತವಾದ ಚುನಾವಣೆಯನ್ನು ನಡೆಸಬೇಕಾಗಿರುವ ಉದ್ದೇಶ ಇವರಿಗೆ ಇಲ್ಲ. ಅಕ್ರಮವಾಗಿ ಚುನಾವಣೆಯನ್ನು ನಡೆಸಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಬೇಕೆಂದು ಈ ಕೃತ್ಯ ಮಾಡಿದ್ದು ನಾಮಪತ್ರ ಸಲ್ಲಿಸಲು ಭಾನುವಾರ 6 ಗಂಟೆಗೆ ಸಮಯ ಮುಕ್ತಾಯವಾಗಲಿದೆ. 19ರ ಭಾನುವಾರ ಚುನಾವಣೆ ನಡೆಯಲಿದ್ದು ಅದೇ ದಿನ ಮತ ಎಣಿಕೆ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಹೆಸರನ್ನ ಕೈಬಿಟ್ಟು ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಹನುಮಂತ ರಾಯಪ್ಪ ಹನುಮಂತಯ್ಯ ರವಿಕುಮಾರ್ ನಟರಾಜ್ ಷಡಕ್ಷರಿ ಮಂಜುನಾಥ್ ಹಾಗೂ ಸತೀಶ್ ಸೇರಿದಂತೆ ಇತರರು ಇದ್ದರು