ಕೊಪ್ಪಳ: ಜಿಲ್ಲಾದ್ಯಂತ ಶಾಲಾ ಪ್ರಾರಂಭೋತ್ಸವ ಸೋಮವಾರ ಸಡಗರ-ಸಂಭ್ರಮದಿಂದ ನಡೆಯಿತು. ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕೆಲವು ಕಡೆ ಪಠ್ಯಪುಸ್ತಕ ವಿತರಣೆ ಮಾಡಿ, ಸ್ವಾಗತಿಸಿಕೊಂಡರೆ ಇನ್ನು ಕೆಲವು ಶಾಲೆಗಳಲ್ಲಿ ಪುಷ್ಪ ಮಳೆ ಸುರಿಸಿ, ಸ್ವಾಗತಿಸಿಕೊಂಡರು.

ಕೆಲವರು ಪೆನ್ನು, ಬುಕ್, ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಮೊದಲ ದಿನ ಶಾಲೆಗಳಲ್ಲಿ ಮಕ್ಕಳು ಸಡಗರ- ಸಂಭ್ರಮ ಮನೆಮಾಡಿರುವುದು ಕಂಡುಬಂದಿತು. ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು.

ಬಿಸರಹಳ್ಳಿ ಗ್ರಾಮದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪುಷ್ಪಧಾರೆ ಮೂಲಕ ಆತ್ಮೀಯವಾಗಿ ಸ್ವಾಗತಿಸಿ ಹೊಸ ಶೈಕ್ಷಣಿಕ ವರ್ಷದ ಶುಭಾರಂಭಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ಪೂರೈಸಲಾದ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಿದ್ಯಾರ್ಥಿಗಳು ಹೊಸ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಗುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ದೇವೇಂದ್ರಪ್ಪ ಕುರುಡಗಿ ಮಾತನಾಡಿ, ಶಿಕ್ಷಣವು ಮಕ್ಕಳ ಭವಿಷ್ಯ ರೂಪಿಸುವ ಶಕ್ತಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ನಿಯಮಿತವಾಗಿ ಶಾಲೆಗೆ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಶಾಲೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಕುರಿ ಮಾತನಾಡಿ, ಸರ್ಕಾರಿ ಶಾಲೆಗಳು ಇಂದು ಗುಣಮಟ್ಟದ ಶಿಕ್ಷಣದ ಜತೆಗೆ ಅನೇಕ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಶಿಕ್ಷಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ರಮೇಶ್ ಬುಡ್ಡನಗೌಡರ ಮಾತನಾಡಿ, ಶಿಕ್ಷಣದ ಮೂಲಕ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಎಸ್‌ಡಿಎಂಸಿ ಸದಸ್ಯರಾದ ಉಮೇಶ್ ದ್ಯಾವಣ್ಣವರ್, ಅಜ್ಜಯ್ಯ ಹಿರೇಮಠ, ಅಡಿವೆಪ್ಪ ಹುಲ್ಲೂರು, ಸೀಮಣ್ಣ ಸಂಕ್ಲಾಪುರ ಹಾಗೂ ಶಿಕ್ಷಕರಾದ ವೀರಣ್ಣ, ಬಾಬುರಡ್ಡಿ, ಪ್ರಕಾಶ್, ಹೊಳೆಬಸಯ್ಯ, ಭಾರತಿ, ಶಿಲ್ಪಾ ಉಪಸ್ಥಿತರಿದ್ದರು.

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ: ತಾಲೂಕಿನ ಹಲಗೇರಿ ಗ್ರಾಮದ ಕನಕನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸರಸ್ವತಿಯೊಂದಿಗೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ಬಸನಗೌಡ ಪಾಟೀಲ, ಶಿಕ್ಷಕ ದೇವಪ್ಪ ಒಂಟಿಗಾರ ಹಾಗೂ ಶಿಕ್ಷಕಿ ಹನುಮವ್ವ ಕಂಬಳಿ ಇದ್ದರು.

ಸಿಪಿಎಸ್ ಶಾಲೆಯಲ್ಲಿ ಪ್ರಾರಂಭೋತ್ಸವ: ನಗರದ ಸಿ.ಪಿ.ಎಸ್. ಶಾಲೆಯಲ್ಲಿ ಪ್ರಾರಂಭೋತ್ಸವ ಜರುಗಿತು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವಿಂದ್ರ ಬಾಗಲಿ ಅವರು ಸರ್ಕಾರ ನೀಡಿದ ಉಚಿತ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ನೀಡಿದರು. ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ, ಕಾಶೀನಾಥ ಸಿರಿಗೇರಿ, ವಿರೂಪಾಕ್ಷಪ್ಪ ಬಾಗೋಡಿ, ಆಬೀದಹುಸೇನ, ಶಿಕ್ಷಕಕಿಯರಾದ ಭಾರತಿ ಆಡೂರು, ಜಯಶ್ರೀ ದೇಸಾಯಿ, ಶೀಲಾ ಬಂಡಿ, ಶಶಿಕಲಾ, ಜಲಜಾಕ್ಷಿ ಹಾಜರಿದ್ದರು.