ಮಕ್ಕಳನ್ನು ಉತ್ತಮವಾಗಿ ರೂಪಿಸುವ ಅಧ್ಯಾಪಕರು: ಎಂ.ಎಸ್.ಮರಿಸ್ವಾಮಿಗೌಡ

| Published : Jan 09 2025, 12:46 AM IST

ಮಕ್ಕಳನ್ನು ಉತ್ತಮವಾಗಿ ರೂಪಿಸುವ ಅಧ್ಯಾಪಕರು: ಎಂ.ಎಸ್.ಮರಿಸ್ವಾಮಿಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಿಂಡಿಕೇಟ್ ಸದಸ್ಯ ಸ್ಥಾನ ಸಿಕ್ಕಿರುವುದು ಸೌಭಾಗ್ಯ. ಅದೇ ರೀತಿ ಚಂದ್ರಶೇಖರಯ್ಯ ಕೂಡ ಶಿಕ್ಷಕರಾಗಿ‌, ಮುಖ್ಯ ಶಿಕ್ಷಕರಾಗಿ ಮಕ್ಕಳಿಗೆ ‌ಸರಳ ರೀತಿಯಲ್ಲಿ ಪಾಠ ಬೋಧನೆ ಮಾಡಿದ್ದಾರೆ. ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಅಧ್ಯಾಪಕರಾಗಿ ಜಾಗರೂಕರಾಗಿ ಅಧ್ಯಯನ ಮಾಡುವ ಮೂಲಕ ಮಕ್ಕಳನ್ನು ಉತ್ತಮವಾಗಿ ರೂಪಿಸುವ ಕೆಲಸ ಮಾಡಿದರೆ ಅವರು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಭೂ ದಾಖಲೆಗಳ ಇಲಾಖೆ ನಿವೃತ್ತ ಅಧಿಕಾರಿ ಎಂ.ಎಸ್.ಮರಿಸ್ವಾಮಿಗೌಡ ಹೇಳಿದರು.

ಪಟ್ಟಣದ ಕೃಷ್ಣನಗರದ ಕಲಾಕುಟೀರದಲ್ಲಿ ಗ್ರಾಮರಂಗ ಸಾಂಸ್ಕೃತಿಕ ವೇದಿಕೆಯಿಂದ ನಡೆದ ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಬಿ.ಆರ್.ಜಯಕುಮಾರಿ ಅಭಿನಂದನಾ ಸಮಾರಂಭ ಹಾಗೂ ಚಂದ್ರು-75 ಸಂಭ್ರಮಾಚರಣೆಯಲ್ಲಿ ಮಾತನಾಡಿದರು.

ಈ ಹಿಂದಿನ ಪಾಂಡಿತ್ಯ ಹಾಗೂ ಬದ್ದತೆ ಇತ್ತೀಚಿನ ಶಿಕ್ಷಕರಲ್ಲಿ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇಂದಿನ ಶಿಕ್ಷಕರಲ್ಲಿ ಸಮಗ್ರ ಜ್ಞಾನ ಸಂಪಾದನೆಯೇ ಇಲ್ಲವಾಗಿದೆ. ಎಲ್ಲಾ ಕ್ಷೇತ್ರಗಳ ಬಗೆಗೆ ಜ್ಞಾನ ಇರಬೇಕು ಎಂದರು.

ಡಾ.ಬಿ.ಆರ್.ಜಯಕುಮಾರಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಿಂಡಿಕೇಟ್ ಸದಸ್ಯ ಸ್ಥಾನ ಸಿಕ್ಕಿರುವುದು ಸೌಭಾಗ್ಯ. ಅದೇ ರೀತಿ ಚಂದ್ರಶೇಖರಯ್ಯ ಕೂಡ ಶಿಕ್ಷಕರಾಗಿ‌, ಮುಖ್ಯ ಶಿಕ್ಷಕರಾಗಿ ಮಕ್ಕಳಿಗೆ ‌ಸರಳ ರೀತಿಯಲ್ಲಿ ಪಾಠ ಬೋಧನೆ ಮಾಡಿದ್ದಾರೆ. ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದರು.

ಇದೇ ವೇಳೆ ಡಾ.ಬಿ.ಆರ್.ಜಯಕುಮಾರಿ ಹಾಗೂ ಚಂದ್ರಶೇಖರಯ್ಯ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ , ಮಹಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಯಾವುದೇ ಕಲ್ಮಶವಿಲ್ಲದ ಮಗುವಿನ ಮನಸ್ಸು ಚಂದ್ರಶೇಖರಯ್ಯ ಅವರದ್ದು. ಶಿಕ್ಷಕರಾಗಿ, ಕನ್ನಡ ಸೇವಕರಾಗಿ ನಿಷ್ಕಂಳಕ ಸೇವೆ ಮಾಡಿದ್ದಾರೆ. ಜತೆಗೆ ಸಾರ್ಥಕ ಬದುಕು ಸಾಗಿಸಿದ್ದಾರೆ. ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆಯಾಗಿರುವ ನನಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ ಎಂದು ಹೇಳಿದರು.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಕಸಾಪ ಅಧ್ಯಕ್ಷ ಮೇನಾಗ್ರ ಪ್ರಕಾಶ್, ಮಾಜಿ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಎಂ.ರಮೇಶ್ ಬೀರಶೆಟ್ಟಹಳ್ಳಿ, ಗ್ರಾಮರಂಗ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಬಿ.ಎಸ್.ನಾಗಲಿಂಗೇಗೌಡ ಇತರರಿದ್ದರು.