ಶಿಕ್ಷಕರ ಬೋಧನಾ ಶೈಲಿ ಬದಲಾಗಬೇಕು

| Published : Jul 10 2024, 12:40 AM IST

ಸಾರಾಂಶ

ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಪ್ರಯತ್ನ ಹೇಗೆ ಮಾಡಬಹುದು ಎಂಬುದರ ಕುರಿತು ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಪದಾಧಿಕಾರಿಗಳು ನೀಡುತ್ತಿರುವ ಮಾರ್ಗದರ್ಶನದ ಪ್ರಯೋಜನ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳಲ್ಲಿ ಧನಾತ್ಮಕ ಆಲೋಚನೆಗಳನ್ನು ಬಲಗೊಳಿಸುವ ಮೂಲಕ ಅವರಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಮೊದಲು ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಬೋಧನೆಗೆ ಮಕ್ಕಳು ಆಕರ್ಷಿತರಾಗುವಂತೆ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಕರೆ ನೀಡಿದರು.ಶಾಲಾ ಶಿಕ್ಷಣ ಇಲಾಖೆಯಿಂದ ಮಂಗಳೂರಿನ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿಯಿಂದ ನಗರದ ರಂಗಮಂದಿರದಲ್ಲಿ ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗಾಗಿ ಧನಾತ್ಮಕ ಆಲೋಚನಾ ಶಕ್ತಿಯ ಮೂಲಕ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಕುರಿತಂತೆ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಸುಲಭ ಕಲಿಕಾ ವಿಧಾನ

ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಪ್ರಯತ್ನ ಹೇಗೆ ಮಾಡಬಹುದು ಎಂಬುದರ ಕುರಿತು ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಪದಾಧಿಕಾರಿಗಳು ನೀಡುತ್ತಿರುವ ಮಾರ್ಗದರ್ಶನದ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಈ ಕಾರ್ಯಾಗಾರ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೂ ವ್ಯಕ್ತಿತ್ವ ವಿಕಸನ ಮತ್ತು ಸುಲಭ ಕಲಿಕಾ ವಿಧಾನಗಳ ಕುರಿತು ಅರಿವು ಮೂಡಿಸುವ ಕೆಲಸ ಟ್ರಸ್ಟ್ ಮಾಡಲಿದ್ದು, ಮೊದಲು ಶಿಕ್ಷಕರು ಸಿದ್ದರಾಗಬೇಕು ಎಂದರು.

ಶಿಕ್ಷಕರು ಬದಲಾವಣೆಯಾದರೆ ಇಡೀ ವ್ಯವಸ್ಥೆಯೇ ಬದಲಾವಣೆಯಾಗುತ್ತದೆ ಎಂಬ ಮಾತು ಸತ್ಯ, ಈ ನಿಟ್ಟಿನಲ್ಲಿ ಸಮಾಜ ಹಾಗೂ ದೇಶಕ್ಕೆ ಉತ್ತಮ ಸಾಧಕರನ್ನು ಕಳುಹಿಸಿಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ, ನಿಮ್ಮ ಕಲಿಕಾ ನೀತಿ ಸಮಾಜದ ಮೇಲೂ ಪರಿಣಾಮ ಬೀರುತ್ತದೆ ಆದ್ದರಿಂದ ಹೊಣೆಯರಿತು ಕೆಲಸ ಮಾಡಿ ಎಂದು ಸೂಚಿಸಿದರು.

ಧನಾಮತ್ಮಕ ಮನಸ್ಥಿತಿಗೆ ಉತ್ತೇಜನ

ಮಂಗಳೂರಿನ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿಯ ಫೌಂಡರ್ ಮಾಸ್ಟರ್ ರೋಹನ್ ಎಂ.ಸಿರಿ ತರಬೇತಿಯಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಕ್ಕಳಲ್ಲಿ ಧನಾಮತ್ಮಕ ಮನಸ್ಥಿತಿಗೆ ಉತ್ತೇಜನ ನೀಡುವ ಕೆಲಸವಾಗಬೇಕು ಎಂದರು.ಇಂದಿನಿಂದಲೇ ಮಕ್ಕಳಿಗೂ ತರಬೇತಿ

ಮಂಗಳೂರಿನ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿಯ ಮ್ಯಾನೇಜಿಂಗ್ ಟ್ರಸ್ಟಿ ಶಮ್ಮಿಶ್ರಿ ಮಾತನಾಡಿ, ಮಕ್ಕಳ ಚಲನವಲನ ಗಮನಿಸಿ ಅವರನ್ನು ಕಲಿಕಾ ದಾರಿಗೆ ಹೇಗೆ ಸೆಳೆಯಬೇಕು ಎಂಬ ತಂತ್ರಗಾರಿಕೆ ಶಿಕ್ಷಕರಿಗೆ ಇಂದು ಅಗತ್ಯವಾಗಿದೆ ಎಂದರು.ಶಿಕ್ಷಣಾಧಿಕಾರಿ ಸಗೀರಾ ಅಂಜುಂ, ಟ್ರಸ್ಟ್‌ನ ಮಾಧವ್ ಭಂಡಾರಿ, ಬಿಇಒ ಎಸ್.ಎನ್.ಕನ್ನಯ್ಯ, ಮುನಿವೆಂಕಟರಾಮಾಚಾರಿ, ಮುನಿಲಕ್ಷ್ಮಯ್ಯ, ವಿಷಯ ಪರಿವೀಕ್ಷಕ ಕೃಷ್ಣಪ್ಪ, ಗಾಯತ್ರಿ,ಶಶಿವಧನ, ವೆಂಕಟೇಶಬಾಬು, ಇಸಿಒ ಮುನಿರತ್ನಯ್ಯಶೆಟ್ಟಿ, ಸಿರಾಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.