ಸಾರಾಂಶ
ತರೀಕೆರೆ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆ2020-21 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಬಿಡುಗಡೆಯಾದ ಹಣ ಪರಿಶಿಷ್ಟ ಜಾತಿ, ಪಂಗಡದ ಕಾಲೋನಿಗೆ ಬಳಕೆಯಾಗದೆ ದುರ್ಬಳಕೆ ಮಾಡಿರುವ ಬಗ್ಗೆ ತನಿಖೆಗೆ ಅಧಿಕಾರಿಗಳ ತಂಡ ರಚಿಸಿ, ಸಮಗ್ರ ವರದಿ ಬಂದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿ ನಡೆದ ತರೀಕೆರೆ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅನುಪಾಲನಾ ವರದಿ ಬಗ್ಗೆ ಚರ್ಚೆ ನಡೆಯುವಾಗ ಮುಖಂಡ ಸುನೀಲ್ ಮಾತನಾಡಿ 2020-21 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಬಿಡುಗಡೆಯಾದ ಹಣವನ್ನು ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗೆ ಬಳಕೆ ಮಾಡದೆ ಬೇರೆ ಬೇರೆ ಕಾಮಗಾರಿಗಳಿಗೆ ದುರ್ಬಳಕೆ ಮಾಡಿದ್ದು, ದಲಿತ ಕಾಲೋನಿಗಳಿಗೆ ಹಾಕಬೇಕಾದ ಐಮಾಸ್ ಲೈಟುಗಳನ್ನು ಹಾಕದ್ದನ್ನು ತಿಳಿಸಿದಾಗ, ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಎಸ್.ಎನ್. ಸಿದ್ರಾಮಪ್ಪ, ಮುಖಂಡ ಕೆ.ನಾಗರಾಜ್, ಜಿ.ಟಿ.ರಮೇಶ್ ಈ ಬಗ್ಗೆ ಅಧಿಕಾರಿಗಳ ತಂಡ ರಚಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದರು.ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ತಂಡ ರಚಿಸಿ ಕ್ರಮ ವಹಿಸುವ ಕುರಿತು ಪ್ರತಿಕ್ರಿಯಿಸಿದರು.ಕರ್ನಾಟಕ ದಸಂದ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಭಾವಿಕೆರೆ ಗ್ರಾಪಂ ನಿಂದ ಅರಸಿಕೆರೆ ಕಾವಲಿನಲ್ಲಿ ವಾಸವಾಗಿರುವ 9 ಜನ ವಸತಿ ರಹಿತರಿಗೆ ನಿವೇಶನ ನೀಡಿ ಮನೆಗಳನ್ನು ಕಟ್ಟಿಸಿ ಕೊಡಬೇಕು. ಎನ್.ಆರ್.ಪುರ ತಾಲೂಕು ರಾಮೂರು ಮತ್ತು ಶಿರಗಡಲೆ ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಜಮೀನು ಮಂಜೂರು ಮಾಡಬೇಕು. ಲಕ್ಕವಳ್ಳಿಯಲ್ಲಿ ಸರೋಜಮ್ಮ ಅವರಿಗೆ ಖಾತೆ ಬದಲಾವಣೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಕೆ.ಸ್ವಾಮಿ ಮಾತನಾಡಿ ಪಟ್ಟಣದ ಸುಂದರೇಶ್ ಬಡಾವಣೆಯ ರಸ್ತೆಯನ್ನು ಖಾಸಗಿಯವರು ಒತ್ತುವರಿ ಮಾಡಿದ್ದು ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ. ಅತಿ ಶೀಘ್ರದಲ್ಲೇ ಕೆರೆ ಮತ್ತು ರಸ್ತೆ ಒತ್ತುವರಿಯನ್ನು ಅಧಿಕಾರಿಗಳು ತೆರವುಗೊಳಿಸಿ, ಪಟ್ಟಣದ ಹೃದಯಭಾಗದ ಸರ್ಕಾರಿ ಸ್ಮಶಾನ ಜಾಗದಲ್ಲಿ ಕೊಳಚೆ ನೀರು ಹರಿಯುತ್ತಿದೆ. ಸಾರ್ವಜನಿಕರಿಗೆ ಶವ ಸಂಸ್ಕಾರ ಮಾಡಲು ತೊಂದರೆಯಾಗುತ್ತಿದ್ದು,ಈ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.ಮುಖಂಡ ಕೆ.ನಾಗರಾಜ್ ಮಾತನಾಡಿ ಹುರುಳಿಹಳ್ಳಿ ಗ್ರಾಮದ ಗ್ರಾಮಟಾಣ ಜಾಗ ಈ ಹಿಂದೆ ಸರ್ಕಾರ ಪರಿಶಿಷ್ಟ ಜನಾಂಗಕ್ಕೆ ಮಂಜೂರಾತಿ ನೀಡಿದ್ದು, ಅವರಿಗೆ ನಿವೇಶನಗಳ ದಾಖಲೆ ನೀಡಬೇಕೆಂದು ಕೋರಿದಾಗ ಡಾ.ಕೆ.ಜೆ.ಕಾಂತರಾಜ್ ಅಳತೆ ಪ್ರಕ್ರಿಯೆ ಮುಗಿದಿದ್ದು ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
) ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಎಸ್.ಎನ್.ಸಿದ್ರಾಮಪ್ಪ ಮಾತನಾಡಿ ಅನುಪಾಲನಾ ವರದಿಯಲ್ಲಿ ವಿವಿಧ ಸಮಸ್ಯೆಗಳು ಪದೇ ಪದೇ ಚರ್ಚೆಗೆ ಬರುತ್ತಿದ್ದು ಈ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಿ ಎಂದು ಒತ್ತಾಯಿಸಿದರು. ಸಮಿತಿ ಸದಸ್ಯರಾದ ನಾಗರಾಜ್, ರಾಮು, ಮುಖಂಡ ಬಾಲರಾಜ್, ಜಿ.ಟಿ.ರಮೇಶ್, ರಾಮಚಂದ್ರ, ಟಿ.ಎಸ್. ಬಸವರಾಜ್, ನಾಗರಾಜ್, ಪುಟ್ಟಸ್ವಾಮಿ, ತರೀಕೆರೆ, ಅಜ್ಜಂಪುರ, ಕಡೂರು, ಎನ್.ಆರ್.ಪುರ ತಾಲೂಕು ಮುಖಂಡರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು.ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಕಡೂರು ತಹಸೀಲ್ದಾರ್ ಪೂರ್ಣಿಮ, ಅಜ್ಜಂಪುರ ತಹಸೀಲ್ದಾರ್ ವಿನಾಯಕ ಸಾಗರ್, ಎನ್.ಆರ್.ಪುರ ತಹಸೀಲ್ದಾರ್ ತನುಜ ಸವದತ್ತಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ,ಅಜ್ಜಂಪುರ ತಾ.ಪಂ.ಇ.ಒ.ವಿಜಯಕುಮಾರ್, ಪುರಸಭೆ ಮುಖ್ಯಾಧಿಕಾರಿ eಚ್.ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.30ಕೆಟಿಆರ್.ಕೆ.6ಃತರೀಕೆರೆಯಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅದ್ಯಕ್ಷತೆಯಲ್ಲಿ ತರೀಕೆರೆ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆ ಏರ್ಪಡಿಸಲಾಗಿತ್ತು.