ಮಂಗಳೂರು: ಮಂಗಳೂರಿನಲ್ಲಿ ನಡೆಸಿದ ಕೈಗಾರಿಕಾ ಟೆಕ್ ಎಕ್ಸ್‌ಪೋ ಸಮಾವೇಶ ಇಲ್ಲಿನ ಕೈಗಾರಿಕಾ ಬೆಳವಣಿಗೆಗೆ ದೊಡ್ಡ ಹೆಜ್ಜೆಯಾಗಲಿದೆ ಎಂದು ಜಿಲ್ಲಾ ಸ್ಕಿಲ್ ಡೆವಲಪ್‌ಮೆಂಟ್ ಅಧಿಕಾರಿ ಪ್ರದೀಪ್ ಡಿಸೋಜಾ ಹೇಳಿದರು.
ಕೆನರಾ ಇಂಡಸ್ಟ್ರಿಯಲ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಮೂರು ದಿನಗಳ ‘ಕೆನರಾ ಎಂಜಿನಿಯರಿಂಗ್ ಇಂಡಸ್ಟ್ರಿಯಲ್ ಟೆಕ್ ಎಕ್ಸ್‌ಪೋ-2026’ ಸಮಾವೇಶದ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು.ಇಂತಹ ಸಮಾವೇಶಗಳಿಂದ ಕೈಗಾರಿಕೆಗೆ ಮಾತ್ರವಲ್ಲ ಉದ್ಯೋಗಕ್ಕೂ ಹೆಚ್ಚಿನ ಅವಕಾಶ ಸಾಧ್ಯವಿದೆ. ಇಲ್ಲಿರುವ ಪ್ರತಿಭೆಗಳು ಉದ್ಯೋಗಕ್ಕೆ ಹೊರಗೆ ಹೋಗದೆ, ಇಲ್ಲಿಯೇ ಉದ್ಯೋಗ ನಡೆಸುವಂತಾಗಬೇಕು. ಇದಕ್ಕೆ ಈ ಸಮಾವೇಶ ಪ್ರೇರಣೆ ನೀಡಿದೆ ಎಂದರು. ಮಂಗಳೂರು ಮಾದರಿ ಉದ್ದಿಮೆ: ಚಾರ್ಟೆಡ್ ಅಕೌಂಟ್ಸ್ ಎಸ್.ಎಸ್.ನಾಯಕ್ ಮಾತನಾಡಿ, ಕರಾವಳಿಯಲ್ಲಿ ಉದ್ದಿಮೆ ಸ್ಥಾಪನೆಗೆ ರಾಜಕೀಯ ಪ್ರೋತ್ಸಾಹ ಕಡಿಮೆ ಇದೆ. ಬೈಕಂಪಾಡಿಯ ಕೈಗಾರಿಕಾ ಪ್ರದೇಶ ರಾಜ್ಯದ ಎರಡನೇ ಅತೀ ದೊಡ್ಡ ಕೈಗಾರಿಕಾ ಪ್ರಾಂಗಣವಾಗಿದೆ. ಸರ್ಕಾರ ಇನ್ನಷ್ಟು ಭೂಮಿ ನೀಡಿದರೆ, ಇಲ್ಲಿನ ಕೈಗಾರಿಕೆಗಳು ಬೆಂಗಳೂರನ್ನು ಮೀರಿ ಬೆಳೆಯಲು ಸಾಧ್ಯವಿದೆ ಎಂದರು. ಕರಾವಳಿಯ ಉದ್ಯಮಿಗಳು ಇತರೆ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಮಂಗಳೂರು ಕೈಗಾರಿಕಾ ಹಬ್: ಕೆನರಾ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿ ಅಧ್ಯಕ್ಷ ಪಿ.ಬಿ.ಮುದಾಸ್ಸರ್ ಮಾತನಾಡಿ, ಜಿಲ್ಲೆಯ 30 ಸಂಸ್ಥೆಗಳ ಜೊತೆ ಕೆಸಿಸಿಐ ಒಪ್ಪಂದ ಮಾಡಿಕೊಂಡಿದೆ. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್, ಎಂಎಸ್‌ಇಝಡ್, ಹೊಸ ಕೈಗಾರಿಕಾ ಬಡಾವಣೆಗಳು ಕೈಗಾರಿಕೆಯ ಬೆಳವಣಿಗೆಗೆ ಹೊಸ ಆಸೆಯನ್ನು ಚಿಗುರಿಸಿವೆ. ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನ ಹಾಗೂ ರೈಲು ಸಂಪರ್ಕಗಳು ಕರಾವಳಿಯಲ್ಲಿ ಕೈಗಾರಿಕಾ ಹಬ್‌ಗೆ ಪೂರಕವಾಗಿವೆ. ಮುಂದಿನ ದಿನಗಳಲ್ಲಿ ಮಂಗಳೂರು ಕೈಗಾರಿಕಾ ಕಾರಿಡಾರ್ ಆಗಿ ರೂಪುಗೊಳ್ಳುವುದರಲ್ಲಿ ಸಂಶಯ ಇಲ್ಲ ಎಂದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಾಸ್ಸಿರ್, ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಮಂಗಳೂರು ಇದರ ಅಧ್ಯಕ್ಷ ಅಭಿನವ್ ಬನ್ಸಿಲ್, ಕೆನರಾ ಪ್ಲಾಸ್ಟಿಕ್ ಮೆನುಫ್ಯಾಕ್ಚರರ್ಸ್ ಅಂಡ್ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎ.ನಝೀರ್, ಜಿಲ್ಲಾ ಸಣ್ಣ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷೆ ಕುಸುಮ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.
ಕೆನರಾ ಎಂಜಿನಿಯರಿಂಗ್ ಇಂಡಸ್ಟ್ರಿಯಲ್ ಟೆಕ್ ಎಕ್ಸ್‌ಪೋ-2026 ಸಂಚಾಲಕ ಎನ್.ಅರುಣ್ ಪಡಿಯಾರ್, ಕೆನರಾ ಇಂಡಸ್ಟ್ರಿಯಲ್ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎ.ಇಕ್ಬಾಲ್, ಕಾರ್ಯದರ್ಶಿ ರೋಶನ್ ಬಾಳಿಗಾ, ಜೊತೆ ಕಾರ್ಯದರ್ಶಿ ಬಿ.ರಾಮಚಂದ್ರ, ಕೋಶಾಧಿಕಾರಿ ಪುಷ್ಪರಾಜ್, ಕಾರ್ಯಕ್ರಮ ಸೆಲ್ ಸಂಚಾಲಕ ಶರತ್ ರವಿ ಮತ್ತಿತರರಿದ್ದರು.ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಒತ್ತು: ಕೆನರಾ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ. ಪೂಜಾರಿ ಪ್ರಾಸ್ತಾವಿಕದಲ್ಲಿ, ಮೂರು ದಿನಗಳ ಎಕ್ಸ್‌ಪೋದಲ್ಲಿ 120ಕ್ಕೂ ಅಧಿಕ ಸ್ಟಾಲ್‌ಗಳು ಆಗಮಿಸಿದ್ದು, 9 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ಚೆನ್ನೈ, ಕೇರಳದಿಂದಲೂ ಸ್ಟಾಲ್‌ಗಳನ್ನು ಹಾಕಿದ್ದಾರೆ. ಕರಾವಳಿಯ ಕೈಗಾರಿಕೆಗಳು ಅಂತಾರಾಷ್ಟ್ರೀಯ ಮಟ್ಟದ ಕೈಗಾರಿಕಾ ಉತ್ಪನ್ನಗಳ ಜೊತೆ ಸ್ಪರ್ಧಿಸಬೇಕಾದರೆ ಅಂತಹ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ. ಗಲ್ಫ್ ಯುದ್ಧದ ಬಳಿಕ ಮಧ್ಯಪ್ರಾಚ್ಯ ರಾಷ್ಟ್ರಗಳು ಉದ್ದಿಮೆಗೆ ಸುರಕ್ಷಿತವಾಗಿಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿ ವಿವಿಧ ರಾಜ್ಯಗಳ ಕೈಗಾರಿಕಾ ಕಂಪನಿಗಳ ಜೊತೆ ಮಾತುಕತೆ ನಡೆಸಿ ಗುಣಮಟ್ಟದ ಉತ್ಪನ್ನಗಳನ್ನು ಹೊರತಲು ಪ್ರಯತ್ನಿಸಲಾಗುವುದು ಎಂದರು.