ಬೆಳಗ್ಗೆ 6 ಗಂಟೆಯಿಂದಲೇ ಯೂರಿಯಾ ಗೊಬ್ಬರ ಪಡೆಯಲು ರೈತರು ಗೋದಾಮಿನ ಮುಂದೆ ಕಾದು ನಿಂತಿದ್ದರು. ಆದರೆ 10.30ರ ಆನಂತರ ತಾಂತ್ರಿಕ ದೋಷ ಉಂಟಾಗಿದೆ ಎಂದು ತಿಳಿಸಿ ಗೇಟ್‌ಗೆ ಬೋರ್ಡ್ ಅಳವಡಿಸಿ ವಿತರಣೆ ಸ್ಥಗಿತಗೊಳಿಸಲಾಯಿತು.
ಶಿವಕುಮಾರ ಕುಷ್ಟಗಿ
ಗದಗ: ಮುಂಗಾರು ಹಂಗಾಮು ಆರಂಭದ ಹೊತ್ತಿನಲ್ಲಿ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರದ ಮುಂದೆ ಶುಕ್ರವಾರ ಬೆಳಗ್ಗೆಯಿಂದಲೇ ರೈತರು ಸಾಲುಗಟ್ಟಿ ನಿಂತಿದ್ದಾರೆ.ಬೆಳಗ್ಗೆ 6 ಗಂಟೆಯಿಂದಲೇ ಯೂರಿಯಾ ಗೊಬ್ಬರ ಪಡೆಯಲು ರೈತರು ಗೋದಾಮಿನ ಮುಂದೆ ಕಾದು ನಿಂತಿದ್ದರು. ಆದರೆ 10.30ರ ಆನಂತರ ತಾಂತ್ರಿಕ ದೋಷ ಉಂಟಾಗಿದೆ ಎಂದು ತಿಳಿಸಿ ಗೇಟ್‌ಗೆ ಬೋರ್ಡ್ ಅಳವಡಿಸಿ ವಿತರಣೆ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಈ ವೇಳೆ ವಿತರಕರ ಜತೆ ಕೆಲಹೊತ್ತು ರೈತರು ವಾಗ್ವಾದ ನಡೆಸಿದರು.
ತಾಂತ್ರಿಕ ದೋಷ ನಮ್ಮಲ್ಲಿ ಮಾತ್ರ ಅಲ್ಲ, ಎಲ್ಲ ಕಡೆಯೂ ಇದೆ ಎಂದು ಗೊಬ್ಬರ ವಿತರಕರು ಹೇಳಿದರು. ರೈತರು ಇನ್ನೇನು ಮಾಡುವುದು ಎಂದು ಸರ್ಕಾರ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಹೊರನಡೆದರು.ಮಳೆ ಕಾರಣ: ಜಿಲ್ಲೆಯಲ್ಲಿ ಈಚೆಗೆ ಸುರಿದ ಮುಂಗಾರು ಪೂರ್ವ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ವಿಶೇಷವಾಗಿ ತಗ್ಗು ಪ್ರದೇಶಗಳಲ್ಲಿನ ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುವಿಕೆ, ಬೆಳವಣಿಗೆ ಕುಂಠಿತಗೊಳ್ಳುವಿಕೆ ಹಾಗೂ ಬೇರು ಕೊಳೆ ಸಮಸ್ಯೆಗಳು ಹೆಚ್ಚಾಗಿವೆ. ಇದರಿಂದ ಬೆಳೆಗಳನ್ನು ಪುನಶ್ಚೇತನಗೊಳಿಸಲು ರೈತರು ಯೂರಿಯಾ, ಇತರ ರಸಗೊಬ್ಬರ ಖರೀದಿಗೆ ಮುಗಿಬಿದ್ದಿದ್ದಾರೆ.
ಹಳದಿಯಾದ ಬೆಳೆ: ಅತಿಯಾದ ಮಳೆಯಿಂದ ಉಂಟಾಗುವ ತೇವಾಂಶದಿಂದಾಗಿ ಬೆಳೆಗಳಲ್ಲಿ ನೈಟ್ರೋಜನ್ ಅಂಶದ ಕೊರತೆ ಸಾಮಾನ್ಯವಾಗಿರುವುದರಿಂದ ರೈತರು ತಕ್ಷಣ ಯೂರಿಯಾ ಬಳಕೆ ಮಾಡಲು ಮುಂದಾಗುತ್ತಾರೆ. ವಿಶೇಷವಾಗಿ ಮೆಕ್ಕೆಜೋಳ, ತರಕಾರಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಎಲೆ ಹಳದಿಯಾಗುವುದು, ಬೆಳವಣಿಗೆ ನಿಧಾನಗೊಳ್ಳುವುದು ಕಂಡುಬಂದಾಗ ಯೂರಿಯಾಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ತೋಟಗಾರಿಕಾ ಬೆಳೆಗಳಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಸಿಗದಿದ್ದರೆ ಗಿಡಗಳು ಒಣಗುವುದು, ಹೂವು, ಕಾಯಿ ಉದುರುವುದು ಹಾಗೂ ಇಳುವರಿ ಕಡಿಮೆಯಾಗುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಕಾಳಸಂತೆಯ ಆತಂಕ: ಯೂರಿಯಾ ಕೊರತೆಯ ಸಂದರ್ಭಗಳಲ್ಲಿ ಕಾಳಸಂತೆ ದಂಧೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವೆಡೆ ಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವ ಪ್ರಕರಣಗಳು ಕಂಡುಬರುವ ಸಾಧ್ಯತೆಯಿದ್ದು, ಇದರಿಂದ ಸಣ್ಣ ಹಾಗೂ ಮಧ್ಯಮ ರೈತರು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಗೊಬ್ಬರಕ್ಕಾಗಿ ದಿನಗಟ್ಟಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಿಂತರೂ ಗೊಬ್ಬರ ಸಿಗುತ್ತಿಲ್ಲ ಎನ್ನುವುದು ಅಷ್ಟೇ ಬೇಸರದ ಸಂಗತಿ.
ಗಮನ ಹರಿಸಲಿ: ಜಿಲ್ಲೆಯಲ್ಲಿ ಮಳೆ ಉತ್ತಮವಾಗಿರುವುದರಿಂದ ಮುಂಗಾರು ಬಿತ್ತನೆ ಚಟುವಟಿಕೆ ಚುರುಕುಗೊಂಡಿವೆ. ಇದೇ ಕಾರಣಕ್ಕೆ ಯೂರಿಯಾ, ಡಿಎಪಿ ಹಾಗೂ ಇತರ ರಸಗೊಬ್ಬರಗಳಿಗೆ ಬೇಡಿಕೆ ಏರಿಕೆಯಾಗುತ್ತಿದೆ. ಕೃಷಿ ಇಲಾಖೆ ಜಿಲ್ಲೆಯಲ್ಲಿ ಸಮರ್ಪಕ ಪ್ರಮಾಣದ ದಾಸ್ತಾನು ಇದೆ ಎಂದು ಹೇಳುತ್ತಿದ್ದರೂ, ವಿತರಣಾ ಕೇಂದ್ರಗಳ ಮುಂದೆ ರೈತರು ದಿನಗಟ್ಟಲೇ ಸಾಲುಗಟ್ಟಿ ನಿಲ್ಲುತ್ತಿದ್ದು, ಈ ಕುರಿತು ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ ತಿಳಿಸಿದರು.ಅಲ್ಪ ವಿಳಂಬ: ಜಿಲ್ಲೆಯಲ್ಲಿ ಗೊಬ್ಬರದ ಅಭಾವವಿಲ್ಲ. 2026- 27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಕೆ- ಕಿಸಾನ್ ತಂತ್ರಾಂಶದ ಮೂಲಕವೇ ವಿತರಿಸಬೇಕಿದೆ. ಹಾಗಾಗಿ ತಾಂತ್ರಿಕ ಸಮಸ್ಯೆಯಿಂದ ವಿತರಣೆಯಲ್ಲಿ ಅಲ್ಪ ವಿಳಂಬವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚೇತನಾ ಪಾಟೀಲ ತಿಳಿಸಿದರು.ಜಿಲ್ಲೆಯ ಮುಂಗಾರು ಸಿದ್ಧತೆ: ಬಿತ್ತನೆ ಗುರಿ ಒಟ್ಟು 3.14 ಲಕ್ಷ ಹೆಕ್ಟೇರ್, ಹೆಸರು 1.17 ಲಕ್ಷ ಹೆ., ಮೆಕ್ಕೆಜೋಳ 1.55 ಲಕ್ಷ ಹೆ., ಶೇಂಗಾ 15 ಸಾವಿರ ಹೆ., ಸೂರ್ಯಕಾಂತಿ 8 ಸಾವಿರ ಹೆ., ಬೀಜ ದಾಸ್ತಾನು ಒಟ್ಟು ಅವಶ್ಯಕತೆ 8 ಸಾವಿರ ಕ್ವಿಂಟಲ್.
ರಸಗೊಬ್ಬರ: ಜಿಲ್ಲೆಯಲ್ಲಿ ಒಟ್ಟು ದಾಸ್ತಾನು 16194 ಮೆ. ಟನ್, ಯೂರಿಯಾ, ಡಿಎಪಿ, ಎಂಒಪಿ ಹಾಗೂ ಸಂಯುಕ್ತ ಗೊಬ್ಬರ ಲಭ್ಯಮಳೆ ವಿವರ: ವಾಡಿಕೆ ಮಳೆ 74.5 ಮಿಮೀ, ದಾಖಲಾಗಿರುವ ಮಳೆ 107.7 ಮಿಮೀ, ವಾಡಿಕೆಗಿಂತ ಹೆಚ್ಚಿನ ಮಳೆ 33.20 ಮಿಮೀಯಾಗಿದೆ.