ತಾಂತ್ರಿಕ ಸಮಸ್ಯೆ: ನಿಧಾನಗತಿಯಲ್ಲಿ ಸಮೀಕ್ಷೆ ಕಾರ್ಯ

| Published : Sep 26 2025, 01:00 AM IST

ಸಾರಾಂಶ

ಸಾಮಾಜಿಕ ಹಾಗೂ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕಾರ್ಯ ತಾಂತ್ರಿಕ ಸಮಸ್ಯೆಯಿಂದ ನಿಧಾನಗತಿಯಲ್ಲಿ ಸಾಗಿದೆ. ಆ್ಯಪ್ ಕಾರ್ಯನಿರ್ವಹಿಸಲಾಗದೇ ಶಿಕ್ಷಕರು ಗಣತಿಯೇ ಸಾಕಪ್ಪ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೇ ಒಂದೆಡೆ ಗಣತಿಯೂ ಆಗದು, ರಜೆಯೂ ಸಿಗದು ಎಂಬ ನೋವಿನಲ್ಲಿ ಶಿಕ್ಷಕ ವರ್ಗವಿದೆ.

ಬಿಸಿಎಂ ಇಲಾಖೆಯ ಅಧಿಕಾರಿ ಮಾತಿಗೆ ಆಕ್ರೋಶ, ಗಣತಿದಾರರ ಪ್ರತಿಭಟನೆ

ತಹಸೀಲ್ದಾರಗೆ ಮನವಿ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸಾಮಾಜಿಕ ಹಾಗೂ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕಾರ್ಯ ತಾಂತ್ರಿಕ ಸಮಸ್ಯೆಯಿಂದ ನಿಧಾನಗತಿಯಲ್ಲಿ ಸಾಗಿದೆ. ಆ್ಯಪ್ ಕಾರ್ಯನಿರ್ವಹಿಸಲಾಗದೇ ಶಿಕ್ಷಕರು ಗಣತಿಯೇ ಸಾಕಪ್ಪ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೇ ಒಂದೆಡೆ ಗಣತಿಯೂ ಆಗದು, ರಜೆಯೂ ಸಿಗದು ಎಂಬ ನೋವಿನಲ್ಲಿ ಶಿಕ್ಷಕ ವರ್ಗವಿದೆ.

ಈ ಸಮಸ್ಯೆ ಬಗೆಹರಿಸುವಂತೆ ಬುಧವಾರ ಸಂಜೆ ಶಿಕ್ಷಕರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲು ಗಣತಿದಾರರು ತಹಸೀಲ್ದಾರ ಕಚೇರಿಗೆ ಬಂದಿದ್ದರು. ಸಮಸ್ಯೆ ಆಲಿಸಿ, ಪರಿಹಾರದ ಕ್ರಮ ಕೈಗೊಳ್ಳಬೇಕಾದ ಬಿಸಿಎಂ ಇಲಾಖೆಯ ಅಧಿಕಾರಿ ದಾಕ್ಷಾಯಿಣಿ ನಾಯ್ಕ ಗಣತಿದಾರರ ವಿರುದ್ಧವೇ ಮಾತನಾಡಿದ ಪರಿಣಾಮ ಆಕ್ರೋಶಗೊಂಡ ಗಣತಿದಾರರು, ದಿಢೀರ್ ಪ್ರತಿಭಟನೆಗೆ ಮುಂದಾದರು.

ಗಣತಿದಾರರು ಗಣತಿಗೆ ಹೋದ ಸಂದರ್ಭದಲ್ಲಿ ಉಂಟಾಗುತ್ತಿರುವ ತೊಡಕುಗಳ ಬಗ್ಗೆ ವಿವರಿಸುತ್ತಿರುವಾಗ, ಏಕಾಏಕಿ ಕೋಪಗೊಂಡ ದಾಕ್ಷಾಯಿಣಿ ನಾಯ್ಕ, ಶಿಕ್ಷಕರ ಬಗ್ಗೆ ಅಗೌರವದ ಮಾತುಗಳನ್ನಾಡಿದ್ದು, ಗಣತಿದಾರರನ್ನು ಕೆರಳಿಸಿತು. ತರಬೇತಿಯಲ್ಲಿ ಸರಿಯಾಗಿ ತಿಳಿದುಕೊಳ್ಳದೇ ಈಗ ಬಂದು ಗಲಾಟೆ ಮಾಡುತ್ತಿದ್ದೀರಿ, ಸರಿಯಾಗಿ ತಿಳಿದುಕೊಳ್ಳುವ ಸಹನೆಯೂ ಇಲ್ಲ, ಅನಗತ್ಯವಾಗಿ ದೊಂಬಿ ಮಾಡಲು ಇಲ್ಲಿಗೆ ಬಂದಿದ್ದೀರಿ ಎಂದು ಹೇಳಿದಾಗ ಇನ್ನೂ ಶಿಕ್ಷಕರು ಕೆಂಡಾಮಂಡಲವಾದರು. ಅಸಡ್ಡೆಯಾಗಿ ಮಾತನಾಡಿರುವುದು ಗಣತಿದಾರರ ಅಸಮಾಧಾನಕ್ಕೆ ಕಾರಣವಾಯಿತು.

ಸ್ಥಳಕ್ಕೆ ಆಗಮಿಸಿದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ, ಶಿಕ್ಷಕರಿಗೆ ಅಗೌರವ ತೋರಿದ ಅಧಿಕಾರಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ತಾಲೂಕಿನಲ್ಲಿ ಗಣತಿ ಕಾರ್ಯ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಿಸಿಮುಟ್ಟುತ್ತಿದ್ದಂತೆ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ ಅಧಿಕಾರಿ, ತಹಸೀಲ್ದಾರ ಕಚೇರಿಯ ಒಳಗೆ ಹೋದರು.

ನಂತರ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಬಂದು ಶಿಕ್ಷಕರ ಸಮಸ್ಯೆಯನ್ನು ಸಹನೆಯಿಂದ ಆಲಿಸಿದರು. ದಾಕ್ಷಾಯಿಣಿ ನಾಯ್ಕ ಪರವಾಗಿ ತಾವು ಕ್ಷಮೆ ಕೇಳುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಶಿಕ್ಷಕರು, ನೀವು ಕ್ಷಮೆ ಕೇಳುವುದು ಬೇಡ, ನಿಮ್ಮ ಬಗ್ಗೆ ಗೌರವವಿದೆ. ಅವರೇ ಬಂದು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.

ಆಗ ತಹಸೀಲ್ದಾರ ಕಚೇರಿಯಿಂದ ಹೊರ ಬಂದ ದಾಕ್ಷಾಯಿಣಿ ನಾಯ್ಕ, ನಾನು ಸರ್ಕಾರದ ನಿಯಮದಂತೆ ಕಾರ್ಯನಿರ್ವಹಿಸಿದ್ದೇನೆ. ಕ್ಷಮೆ ಕೇಳುವಂತಹ ಯಾವ ತಪ್ಪೂ ಮಾಡಿಲ್ಲ, ಕ್ಷಮೆ ಕೇಳುವುದಾದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕೇಳುತ್ತೇನೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಾದರೂ ಯಾವ ಅಭ್ಯಂತರವಿಲ್ಲ ಎಂದರು.

ತಹಸೀಲ್ದಾರರು ಪುನಃ ಚೇಂಬರ್‌ಗೆ ಕರೆದೊಯ್ದು, ಮನವೊಲಿಸುವ ವಿಫಲ ಯತ್ನ ನಡೆಯಿತು. ಆದರೆ ಕೊನೆಗೆ ಹೊರಬಂದ ತಹಸೀಲ್ದಾರ, ದಾಕ್ಷಾಯಿಣಿ ನಾಯ್ಕ ಕ್ಷಮೆ ಕೇಳಲು ಸಿದ್ಧರಿಲ್ಲ. ಹಾಗಾಗಿ ಅವರನ್ನು ಗಣತಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದೇವೆ. ಬೇರೆ ಅಧಿಕಾರಿ ನೇಮಕಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ಅನಾರೋಗ್ಯ ಅಥವಾ ಯಾವುದೇ ಕಾರಣದಿಂದ ಗಣತಿಯಲ್ಲಿ ಭಾಗವಹಿಸಲು ಆಗದೇ ಇದ್ದರೆ ಅಂತಹ ಶಿಕ್ಷಕರು ಲಿಖಿತವಾಗಿ ಮನವಿ ನೀಡಿದರೆ, ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದಾಗ ಶಿಕ್ಷಕರು ಪ್ರತಿಭಟನೆ ಕೈಬಿಟ್ಟರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಇತರರಿದ್ದರು.