ತಂತ್ರಜ್ಞಾನ ಒಳಿತಿಗೆ ಬಳಕೆಯಾಗಲಿ: ಐಶ್ವರ್ಯ ಪಟ್ಟಣಶೆಟ್ಟಿ

| Published : Jul 31 2025, 12:46 AM IST

ಸಾರಾಂಶ

ತಂತ್ರಜ್ಞಾನವನ್ನು ಒಳಿತಿಗಾಗಿ ಬಳಸಿಕೊಳ್ಳಬೇಕು. ಮನಸ್ಸನ್ನು ದುರ್ಬಲಗೊಳಿಸಿಕೊಳ್ಳುವ ಶಕ್ತಿಗಳಿಗೆ ದಾಸರಾಗುವುದು ಬೇಡ. ಬದುಕು ಕಟ್ಟಿಕೊಳ್ಳಬೇಕಾದ ಯುವಶಕ್ತಿ ಬದುಕನ್ನು ಇಂತಹ ಮೋಸ ಜಾಲಕ್ಕೆ ಸಿಕ್ಕಿಸಿಕೊಳ್ಳದೆ ಎಚ್ಚರಿಕೆಯಿಂದಿರಬೇಕು.

ಹಾನಗಲ್ಲ: ಮಾನವ ಅಪಹರಣದ ಮೂಲಕ ದುಷ್ಟಶಕ್ತಿಗಳು ಇಡೀ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿದ್ದು, ಇದಕ್ಕಾಗಿ ಬೃಹತ್‌ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಪಟ್ಟಣಶೆಟ್ಟಿ ತಿಳಿಸಿದರು.ಬುಧವಾರ ಇಲ್ಲಿನ ಎನ್‌ಸಿಜೆಸಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ನ್ಯೂ ಸಂಯುಕ್ತ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ಮಾನವ ಕಳ್ಳತನ, ಸಾಗಾಣಿಕೆ ತಡೆ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯು ಸಂಗತಿಗಳು ಬದುಕಿಗೆ ಮಾರಕವಾಗಿದೆ. ಮೊಬೈಲ್ ಮತ್ತು ಇತರೆ ತಂತ್ರಜ್ಞಾನಗಳು ಯುವಕರ ಮೇಲೆ ಅತಿ ಹೆಚ್ಚು ದುಷ್ಟರಿಣಾಮ ಬೀರುತ್ತಿವೆ. ತಂತ್ರಜ್ಞಾನವನ್ನು ಒಳಿತಿಗಾಗಿ ಬಳಸಿಕೊಳ್ಳಬೇಕು. ಮನಸ್ಸನ್ನು ದುರ್ಬಲಗೊಳಿಸಿಕೊಳ್ಳುವ ಶಕ್ತಿಗಳಿಗೆ ದಾಸರಾಗುವುದು ಬೇಡ. ಬದುಕು ಕಟ್ಟಿಕೊಳ್ಳಬೇಕಾದ ಯುವಶಕ್ತಿ ಬದುಕನ್ನು ಇಂತಹ ಮೋಸ ಜಾಲಕ್ಕೆ ಸಿಕ್ಕಿಸಿಕೊಳ್ಳದೆ ಎಚ್ಚರಿಕೆಯಿಂದಿರಬೇಕು. ಇಂತಹ ವಿಷಯದಲ್ಲಿ ಕಾನೂನಿನ ಅರಿವು ಕೂಡ ಅಗತ್ಯ ಎಂದರು.ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ಮಾಧ್ಯಮಗಳಿಲ್ಲದ ಕಾಲದಲ್ಲಿಯೂ ಮಾನವ ಕಳ್ಳ ಸಾಗಣೆ ಇತ್ತು. ಈಗ ಹೆಚ್ಚಾಗಿದೆ. ಹೆಚ್ಚು ಪ್ರಚಾರ ಸಿಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಸಾಮಾಜಿಕ ದೋಷಗಳ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಬದುಕು ಕಟ್ಟಿಕೊಳ್ಳಲು ಬೇಕಾಗುವ ನಿರಂತರ ಪ್ರಯತ್ನ ನಿಮ್ಮದಾಗಿರಲಿ ಎಂದರು.ತಹಸೀಲ್ದಾರ್ ಎಸ್. ರೇಣುಕಾ ಮಾತನಾಡಿ, ಇಡೀ ನಾಡಿನಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇಂತಹವುಗಳ ಬಗೆಗೆ ಎಚ್ಚರಿಕೆ ಇರಲಿ. ಈಗ ಎಚ್ಚರಿಕೆಯೊಂದೇ ಇದಕ್ಕೆ ಸರಿಯಾದ ಮಾರ್ಗ. ಇಂತಹ ಕೃತ್ಯಗಳನ್ನು ತಡೆಯಲು ಸಾಮೂಹಿಕ ಪ್ರಯತ್ನ ಬೇಕು. ಈಗಲೇ ಎಚ್ಚೆತ್ತುಕೊಂಡರೆ ಬದುಕಿನಲ್ಲಿ ಇಂತಹ ದುರ್ಘಟನೆಗಳಿಂದ ದೂರ ಉಳಿಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಸಿ. ಮಹಾಂತಿನಮಠ, ಶಿಶು ಅಭಿವೃದ್ಧಿ ಅಧಿಕಾರಿ ರಾಮು ಬೈಲಸೀಮೆ, ಜನತಾ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಸುರೇಶ ರಾಯ್ಕರ, ಪ್ರಾಚಾರ್ಯ ಅನಿತಾ ಹೊಸಮನಿ, ಉಪನ್ಯಾಸಕರಾದ ರವಿ ಜಡೆಗೊಂಡರ, ಎಫ್.ಎಸ್. ಕಾಳಿ, ಎ.ಎಚ್. ಹಳ್ಳಳ್ಳಿ, ಎಸ್.ಎಲ್. ಮಂಜುನಾಥ, ಕಿರಣ ಪಟಗಾರ, ಪ್ರದೀಪ ಕಾಟೇಕರ, ಕೆ.ಬಿ. ಶೇಷಗಿರಿ ಪಾಲ್ಗೊಂಡಿದ್ದರು. ಸಿಂಚನಾ ಮಡಿವಾಳರ ಪ್ರಾರ್ಥನೆ ಹಾಡಿದರು.