ಕೇಂದ್ರ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯವು ನಡೆಸುವ ರಾಷ್ಟ್ರಮಟ್ಟದ ಇನ್‌ಸ್ಪಯರ್ ಮಾನಕ್ ಮಾದರಿ ರಚನಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಜೆಯ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಆದಿತ್ಯ ನಿರ್ಮಿಸಿದ ಯಂತ್ರ ರಾಷ್ಟ್ರಮಟ್ಟದ ಸ್ಪರ್ಧೆಗೆ ರಾಜ್ಯದಿಂದ ಆಯ್ಕೆಯಾಗಿದೆ. ಈ ಮೂಲಕ ಈ ಶಾಲೆಯ ಈ ಇನ್‌ಸ್ಪಯರ್ ಮಾನಕ್ ಸ್ಪರ್ಧೆಗೆ ಎರಡನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಉಡುಪಿ: ಕೇಂದ್ರ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯವು ನಡೆಸುವ ರಾಷ್ಟ್ರಮಟ್ಟದ ಇನ್‌ಸ್ಪಯರ್ ಮಾನಕ್ ಮಾದರಿ ರಚನಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಜೆಯ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಆದಿತ್ಯ ನಿರ್ಮಿಸಿದ ಯಂತ್ರ ರಾಷ್ಟ್ರಮಟ್ಟದ ಸ್ಪರ್ಧೆಗೆ ರಾಜ್ಯದಿಂದ ಆಯ್ಕೆಯಾಗಿದೆ. ಈ ಮೂಲಕ ಈ ಶಾಲೆಯ ಈ ಇನ್‌ಸ್ಪಯರ್ ಮಾನಕ್ ಸ್ಪರ್ಧೆಗೆ ಎರಡನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಈ ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜವಿಜ್ಞಾನ ಶಿಕ್ಷಕ ಸುರೇಶ್ ಮರಕಾಲ ಮಾರ್ಗದರ್ಶನದಲ್ಲಿ ಆದಿತ್ಯ ರಚಿಸಿದ ಕಟ್-ಇಟ್-ಈಸಿ ಎಂಬ ಸೌದೆ ಒಡೆಯುವ ಯಂತ್ರವು ರಾಷ್ಟ್ರಮಟ್ಟಕ್ಕೆ ತಲುಪಿದ ಅನ್ವೇಷಣೆಯಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸೌದೆ ಬಳಸುತ್ತಾರೆ. ಆದರೇ ದಪ್ಪದಪ್ಪದ ಸೌದೆಗಳನ್ನು ಒಡೆಯುವುದೇ ಬಹಳ ಕಷ್ಟದ ಕೆಲಸವಾಗಿರುತ್ತದೆ. ಈ ಕಟ್-ಇಟ್-ಈಸಿ ಯಂತ್ರವು ಅತ್ಯಂತ ಸುಲಭವಾಗಿ ಈ ಕೆಲಸವನ್ನು ಮಾಡಿ ಮುಗಿಸುತ್ತದೆ. ವಿಶೇಷವೆಂದರೆ ಈ ಯಂತ್ರದಲ್ಲಿ ಯಾವುದೇ ಇಲೆಕ್ಟ್ರಿಕ್ ಅಥವಾ ಇಲೆಕ್ಟ್ರಾನಿಕ್ ಉಪಕರಣವಿಲ್ಲ. ಕೇವಲ ಕಬ್ಬಿಣದಿಂದ ರಚಿಸಿದ ಈ ಯಂತ್ರವನ್ನು ಬಳಸಿ ಚಿಕ್ಕ ಮಕ್ಕಳು ಕೂಡಾ ದೊಡ್ಡ ದೊಡ್ಡ ಕಟ್ಟಿಗೆಗಳನ್ನು ಒಡೆದು ಸೌದೆಯನ್ನಾಗಿ ಮಾಡಬಹುದು !
ಮತ್ತೊಂದು ವಿಶೇಷವೆಂದರೆ ಕಟ್ಟಿಗೆಯ ದಪ್ಪಕ್ಕೆ ಅನುಗುಣವಾಗಿ ಸಣ್ಣ, ಮಧ್ಯಮ ಹಾಗೂ ದಪ್ಪ ಎಂಬ ಮೂರು ಪ್ರಕಾರದ ಸೌದೆಗಳನ್ನು ಮಾಡುವ ಅನುಕೂಲವೂ ಈ ಯಂತ್ರದಲ್ಲಿದೆ ! ಈ ಯಂತ್ರದ ಮಾದರಿಯ ಕಾರ್ಯವಿಧಾನ, ವಿನ್ಯಾಸವನ್ನು ವಿದ್ಯಾರ್ಥಿ ಆದಿತ್ಯ ರಚಿಸಿದ್ದರೆ, ಕಬ್ಬಿಣದ ಚೌಕಟ್ಟು ರಚನೆ, ವೆಲ್ಡಿಂಗ್ ಕೆಲಸ, ಪೈಂಟಿಂಗ್ ಇತ್ಯಾದಿ ಕಾರ್ಯಗಳನ್ನು ಶಿಕ್ಷಕ ಸುರೇಶ್ ಮರಕಾಲ ಹಾಗೂ ಪ್ರವೀಣ್ ಹೆಬ್ರಿ ಮಾಡಿದ್ದಾರೆ.ಎರಡು ವರ್ಷಗಳ ಹಿಂದಷ್ಟೇ ಶಿಕ್ಷಕ ಸುರೇಶ್ ಮರಕಾಲ ಇವರ ಮಾರ್ಗದರ್ಶನದಲ್ಲಿ ಇದೇ ಶಾಲೆಯ ವಿದ್ಯಾರ್ಥಿನಿಯರಾದ ಅಮೂಲ್ಯ ಹಾಗೂ ನಿಕಿತಾ ರಚಿಸಿದ ಮಾದರಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಮುಂದೆ ಜಪಾನ್‌ನ ಅಂತರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗಿದ್ದವು.
ಇದೀಗ ಎರಡನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಾಧನೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಾಲಾಭಿವೃದ್ಧಿ ಸಮಿತಿ ಸದಸ್ಯರು ಶ್ಲಾಘಿಸಿದ್ದಾರೆ.