ಆಹಾರ ಪದಾರ್ಥ ಜಗಿಯಲು ದಂತ ಅಗತ್ಯ: ಡಾ.ಮಂಜು ದಯಾನಂದ್

| Published : Nov 04 2025, 12:15 AM IST

ಆಹಾರ ಪದಾರ್ಥ ಜಗಿಯಲು ದಂತ ಅಗತ್ಯ: ಡಾ.ಮಂಜು ದಯಾನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕ ವಯಸ್ಸಿನ ಮಕ್ಕಳು ಅತಿಯಾದ ಸಿಹಿ ಪದಾರ್ಥ ಸೇವನೆ ಮಾಡುವುದರಿಂದ ಮತ್ತು ಸರಿಯಾದ ಬ್ರಷಿಂಗ್ ಅಭ್ಯಾಸದ ಕೊರತೆಯಿಂದ ಬಾಲ್ಯದಲ್ಲಿಯೇ ಹಲ್ಲಿನ ಹಾನಿ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿನಿತ್ಯ ಎರಡು ಬಾರಿ ಬ್ರಷ್ ಮಾಡಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಸೇವಿಸಿದ ಆಹಾರ ಪದಾರ್ಥಗಳನ್ನು ಜಗಿಯಲು ದಂತ ಪ್ರಮುಖವಾಗಿರುತ್ತದೆ. ಹಾಗಾಗಿ ದಂತ ರಕ್ಷಣೆ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದು ದಂತ ವೈದ್ಯ ಡಾ.ಮಂಜು ದಯಾನಂದ್ ಹೇಳಿದರು.

ತಾಲೂಕಿನ ಚಿಣ್ಯ ಸರ್ಕಲ್ ಸಮೀಪದ ಭೂಸಮುದ್ರ ಗೇಟ್ ಬಳಿ ವಿಬ್‌ಗಯಾರ್ ಪಬ್ಲಿಕ್ ಶಾಲೆಯಲ್ಲಿ ಪಾಂಡವಪುರದ ಸಿರಿ ದಂತ ಆರೈಕೆ ಸಂಸ್ಥೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಚಿಕ್ಕ ವಯಸ್ಸಿನ ಮಕ್ಕಳು ಅತಿಯಾದ ಸಿಹಿ ಪದಾರ್ಥ ಸೇವನೆ ಮಾಡುವುದರಿಂದ ಮತ್ತು ಸರಿಯಾದ ಬ್ರಷಿಂಗ್ ಅಭ್ಯಾಸದ ಕೊರತೆಯಿಂದ ಬಾಲ್ಯದಲ್ಲಿಯೇ ಹಲ್ಲಿನ ಹಾನಿ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿನಿತ್ಯ ಎರಡು ಬಾರಿ ಬ್ರಷ್ ಮಾಡಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಜೊತೆಗೆ ಕನಿಷ್ಠ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಸಂಪರ್ಕಿಸಿ ಹಲ್ಲುಗಳ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು.

ಶಾಲೆ ಮುಖ್ಯ ಶಿಕ್ಷಕ ಟಿ.ಎಸ್.ಅಭಿಲಾಷ್ ಮಾತನಾಡಿ, ಶಾಲೆಗೆ ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಕ್ಕಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ತಾವು ಸೇವಿಸುವ ತಿಂಡಿ ತಿನಿಸು ಸೇರಿದಂತೆ ಯಾವುದೇ ಆಹಾರ ಪದಾರ್ಥಗಳನ್ನು ಜಗಿಯಲು ಹಲ್ಲು ಸುರಕ್ಷಿತವಾಗಿರಬೇಕು. ಹಾಗಾಗಿ ಮಕ್ಕಳು ಚಾಕೊಲೇಟ್ ಸೇರಿದಂತೆ ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ ಪೌಷ್ಠಿಕಾಂಶ ಯುಕ್ತ ಹಣ್ಣು, ತರಕಾರಿ, ಆಹಾರ ಪದಾರ್ಥ ಸೇವಿಸಿ ತಮ್ಮ ದಂತ ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು.

ಶಿಬಿರದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಮಾಡಲಾಯಿತು. ಶಾಲೆ ಆಡಳಿತಾಧಿಕಾರಿ ಎಂ.ಡಿ.ಮರಿಸ್ವಾಮಿಗೌಡ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಇದ್ದರು.