ಸಾರಾಂಶ
ಜನರ ಅಚ್ಚರಿಗೆ ಕಾರಣವಾದ ಸರ್ಕಾರದ ನಡೆ
ಬಸವರಾಜ ಸರೂರಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಾಣಿಬೆನ್ನೂರು ತಾಲೂಕು ದಂಡಾಧಿಕಾರಿ (ತಹಸೀಲ್ದಾರ್) ಎಚ್.ಎನ್. ಶಿರಹಟ್ಟಿ ಅವರು 17 ದಿನದಲ್ಲಿ ಮತ್ತೆ ಅದೇ ಸ್ಥಾನಕ್ಕೆ ನಿಯುಕ್ತಿ ಆಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.ಲೋಕಾ ಬಲೆಗೆ ಬಿದ್ದರೂ ಪುನಃ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಬಹುದೇ? ಎಂಬ ಜಿಜ್ಞಾಸೆ ಜನರ ಮನದಲ್ಲಿ ಉಂಟಾಗಿದ್ದು ಸಾರ್ವತ್ರಿಕವಾಗಿ ಈ ವಿಷಯ ಚರ್ಚೆಯಾಗುತ್ತಿದೆ.
ತಹಸೀಲ್ದಾರರು ತಾಲೂಕು ದಂಡಾಧಿಕಾರಿ ಕೂಡ ಆಗಿರುತ್ತಾರೆ. ಇಂಥದೊಂದು ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ರಾಜ್ಯ ಸರ್ಕಾರ ಬದಲಾಯಿಸುವ ಬದಲು ಮತ್ತೆ ಅವರಿಗೆ ಅದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ನೀಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ 307 ಟ್ರ್ಯಾಪ್ ಪ್ರಕರಣ ನಡೆದಿವೆ. ಆದರೆ ಇದರಲ್ಲಿ ಯಾವ ಅಧಿಕಾರಿಗಳಿಗೂ ಮರಳಿ ಅದೇ ಜಾಗದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಉದಾಹರಣೆಗಳಿಲ್ಲ. ಅಧಿಕಾರಿ ಟ್ರ್ಯಾಪ್ ಆದ ಸ್ಥಳಕ್ಕೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದರೆ ಸಾಕ್ಷಿ ನಾಶ, ದೂರುದಾರನ ವಿರುದ್ಧ ಷಡ್ಯಂತ್ರ ಮಾಡುವ ಸಂಭವ ಇರುತ್ತದೆ ಎನ್ನುವ ಕಾರಣಕ್ಕೆ ಅಮಾನತುಗೊಳಿಸಿ ನಂತರ ಕೆಲ ದಿನದಲ್ಲಿ ಬೇರೆಡೆ ನಿಯೋಜನೆ ಮಾಡಲಾಗುತ್ತದೆ.
ರಾಣಿಬೆನ್ನೂರ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಜ. 5ರಂದು ಮಣ್ಣಿನ ಲಾರಿ ಬಿಡಲು ತನ್ನ ಚಾಲಕನ ಮೂಲಕ ₹12 ಸಾವಿರ ಸ್ವೀಕರಿಸುತ್ತಿರುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದ್ದರು. ಪ್ರಕರಣ ನಡೆದು 17 ದಿನ ಕಳೆದಿಲ್ಲ. ಆಗಲೇ ಎಚ್.ಎನ್. ಶಿರಹಟ್ಟಿ ಮತ್ತೆ ರಾಣಿಬೆನ್ನೂರು ತಹಸೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.ತಹಸೀಲ್ದಾರ್ ಕರ್ತವ್ಯದ ಕುರಿತು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರನ್ನು ವಿಚಾರಿಸಿದಾಗ ಅದು ರಾಜ್ಯ ಸರ್ಕಾರದಿಂದ ಆಗಬೇಕು. ಅವರ ನಿಯೋಜನೆ ಕುರಿತು ನಾವು ಹೇಳಲು ಬರುವುದಿಲ್ಲ ಎಂದಿದ್ದಾರೆ.
ಸರ್ಕಾರದ ನಿಯಮಾವಳಿ ಪ್ರಕಾರ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನವಾದ ಅಧಿಕಾರಿಗೆ 24 ಗಂಟೆಯಲ್ಲಿ ಜಾಮೀನು ದೊರೆತರೆ ಅವರನ್ನು ಅಮಾನತು ಮಾಡುವುದಿಲ್ಲ. ರಾಣಿಬೆನ್ನೂರು ತಹಸೀಲ್ದಾರ್‌ಗೆ 24 ಗಂಟೆಯಲ್ಲಿ ಜಾಮೀನು ದೊರೆತಿದೆ. ಆದ್ದರಿಂದ ಅವರು ಇಲ್ಲಿಯೇ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಹುರುಳಿಲ್ಲ. ಇಂದಿನ ದಿನದಲ್ಲಿ ಯಾರನ್ನು ಬೇಕಾದರೂ ಸುಲಭವಾಗಿ ಟ್ರ್ಯಾಪ್ ಮಾಡಬಹುದು. ಹಾಗಂತ ಎಲ್ಲರನ್ನು ಅಮಾನತು ಮಾಡಲು ಬರುವುದಿಲ್ಲ ಎನ್ನುತ್ತಾರೆ ಶಾಸಕ ಪ್ರಕಾಶ ಕೋಳಿವಾಡ.ರಾಣಿಬೆನ್ನೂರು ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಲಂಚ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಟ್ರ್ಯಾಪ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಒಂದು ದಿನ ಅವರನ್ನು ಬಂಧನದಲ್ಲಿಡಲಾಗಿತ್ತು. ಜಾಮೀನು ಪಡೆದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಕಂದಾಯ ಇಲಾಖೆಯಿಂದ ತಿಳಿಯಬೇಕಿದೆ ಎನ್ನುತ್ತಾರೆ ಲೋಕಾಯುಕ್ತ ಹಾವೇರಿ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ.