1921ರ ಜು. 1ರಂದು ಸಾರಾಯಿ ಮಾರಾಟ ನಿಷೇಧಕ್ಕೆ ಆಗ್ರಹಿಸಿ ನಡೆದ ಸ್ವಾತಂತ್ರ‍್ಯ ಹೋರಾಟದ ಚಳವಳಿಯಲ್ಲಿ ಭಾಗವಹಿಸಿದ್ದ ಮಲ್ಲಿಕಸಾಬ್ ಬಿನ ಮರ್ದಾನಸಾಬ್, ಗೌಸುಸಾಬ್ ಬಿನ ಖಾದರ ಸಾಬ್ ಹಾಗೂ ಅಬ್ದುಲ್ ಗಫಾರ ಚೌಕತಾಯಿ ಅವರು ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದರು.
ಧಾರವಾಡ:
ಸಮಾಜದ ಸುಧಾರಣೆ, ಅಭಿವೃದ್ಧಿಗಾಗಿ ಹಲವರ ತ್ಯಾಗ ಮತ್ತು ಬಲಿದಾನ ಅಗತ್ಯ ಎಂಬುದನ್ನು ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ. ಅವರ ತ್ಯಾಗದ ಸಂದೇಶ ಸ್ಮರಿಸಿ, ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್ ಹೇಳಿದರು.ನಗರದ ಜಕಣಿಬಾವಿ ರಸ್ತೆಯಲ್ಲಿನ ಹುತಾತ್ಮರ ವರ್ತುಲದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಬುಧವಾರ ಗೌರವ ಸಮರ್ಪಣೆ ಮಾಡಿದ ಅವರು, 1921ರ ಜು. 1ರಂದು ಸಾರಾಯಿ ಮಾರಾಟ ನಿಷೇಧಕ್ಕೆ ಆಗ್ರಹಿಸಿ ನಡೆದ ಸ್ವಾತಂತ್ರ‍್ಯ ಹೋರಾಟದ ಚಳವಳಿಯಲ್ಲಿ ಭಾಗವಹಿಸಿದ್ದ ಮಲ್ಲಿಕಸಾಬ್ ಬಿನ ಮರ್ದಾನಸಾಬ್, ಗೌಸುಸಾಬ್ ಬಿನ ಖಾದರ ಸಾಬ್ ಹಾಗೂ ಅಬ್ದುಲ್ ಗಫಾರ ಚೌಕತಾಯಿ ಅವರು ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದರು ಎಂದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ ಮಾತನಾಡಿ. ಸಾರಾಯಿ ಮಾರಾಟ ನಿಷೇಧಕ್ಕಾಗಿ ಹೋರಾಟ ನಡೆಸಿದ ಮಹಾತ್ಮರು ಸಮಾಜದ ಹಿತಕ್ಕಾಗಿ ತಮ್ಮ ಜೀವನವನ್ನೇ ಬಲಿದಾನ ಮಾಡಿದರು. ಅವರ ತ್ಯಾಗವು ಮದ್ಯಮುಕ್ತ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಪ್ರೇರಣೆಯಾಗಿದೆ. ಅವರ ಆದರ್ಶಗಳು ಇಂದಿಗೂ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಹುತಾತ್ಮರ ತ್ಯಾಗ ಸ್ಮರಿಸುವ ಮೂಲಕ ಸಮಾಜ ಸೇವೆಯ ಮೌಲ್ಯವನ್ನು ಉಳಿಸಬೇಕಾಗಿದೆ. ಅವರ ಬಲಿದಾನವು ಇತಿಹಾಸದಲ್ಲಿ ಅಜರಾಮರ ಎಂದು ಹೇಳಿದರು.ಹಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ, ಪ್ರಾಣ ತ್ಯಾಗ ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಹುತಾತ್ಮರ ದಿನ ಆಚರಿಸಲಾಗುತ್ತದೆ. ಸಮಾಜದ ಒಳಿತಿಗಾಗಿ ಅವರು ನಡೆಸಿದ ಹೋರಾಟ ಇಂದಿಗೂ ಸ್ಫೂರ್ತಿದಾಯಕ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಎಲ್ಲರ ಜವಾಬ್ದಾರಿ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ವಾಣಿಜ್ಯೋದ್ಯಮ ಸಂಘದ ರವೀಂದ್ರ ಆಕಳವಾಡಿ, ಸಂಗಮೇಶ್ವರಯ್ಯಾ ಲಿಂಬಣ್ಣದೇವರಮಠ, ಪಂಡಿತ ಮುಂಜಿ, ವೀರಣ್ಣ ಪತ್ತಾರ, ಚಂದ್ರಶೇಖರ ಅಮಿನಗಡ, ಶಶಿಧರ ನರೇಂದ್ರ, ಮಲ್ಲಿಕಾರ್ಜುನ ಚಿಕ್ಕಮಠ, ಕಾರ್ಯಕ್ರಮ ಸಂಘಟಕ ಉದಯ ಯಂಡಿಗೇರಿ, ಮಹಾಂತೇಶ ಲಿಂಬಣ್ಣದೇವರಮಠ, ಬಸವರಾಜ ಅಕ್ಕಿ, ಈರಣ್ಣಾ ಆಕಳವಾಡಿ ಇದ್ದರು.