ಈ ಸರ್ಕಾರ ಎಷ್ಟು ಮಂದಿ ಶಿಕ್ಷಕರನ್ನು ನೇಮಿಸಿದೆ ಹೇಳಿ:ಕುಮಾರಸ್ವಾಮಿ

| Published : May 22 2024, 12:49 AM IST

ಈ ಸರ್ಕಾರ ಎಷ್ಟು ಮಂದಿ ಶಿಕ್ಷಕರನ್ನು ನೇಮಿಸಿದೆ ಹೇಳಿ:ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ಪರವಾಗಿ ನಮ್ಮ ಅಭ್ಯರ್ಥಿ ಕೆಲಸ ಮಾಡುತ್ತಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 1 ಲಕ್ಷ ಶಿಕ್ಷಕರನ್ನು ನೇಮಿಸಿದ್ದರು, ನಾನು ಮುಖ್ಯಮಂತ್ರಿಯಾದಾಗ 50 ಸಾವಿರ ಶಿಕ್ಷಕರ ನೇಮಕವಾಯಿತು. ಈ ಸರ್ಕಾರ ಎಷ್ಟು ಮಂದಿಯನ್ನು ನೇಮಿಸಿದೆ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ನಿವೇದಿತಾನಗರದಲ್ಲಿ ಮಂಗಳವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಸಭೆಯಲ್ಲಿ ಪಾಲ್ಗೊಂಡು ಎನ್.ಡಿ.ಎ ಅಭ್ಯರ್ಥಿ ಕೆ. ವಿವೇಕಾನಂದ ಪರ ಮತಯಾಚಿಸಿ ಮಾತನಾಡಿದ ಅವರು, ನಾನು ಯಡಿಯೂರಪ್ಪ ಸೇರಿ ಸರ್ಕಾರ ಮಾಡಿದಾಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ. ಎಚ್.ಡಿ. ದೇವೇಗೌಡರು ಈ ರಾಜ್ಯದಲ್ಲಿ ಒಂದು ಲಕ್ಷ ಶಿಕ್ಷಕರನ್ನು ನೇಮಿಸಿದ್ದರು. 50 ಸಾವಿರ ಮಹಿಳೆಯರು, 50 ಸಾವಿರ ಪುರುಷ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಅದಾದ ಬಳಿಕ ನಾವು ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಕೊಟ್ಟು ಕೆಲಸ ಮಾಡಿದೆವು. 56 ಸಾವಿರ ಶಿಕ್ಷಕರನ್ನ ನೇಮಕ ಮಾಡಿದೆವು. ಈಗಿರುವ ಸರ್ಕಾರ ಎಷ್ಟು ಶಿಕ್ಷಕರನ್ನು ನೇಮಕ ಮಾಡಿದೆ ನೀವೇ ಹೇಳಿ. ಬಿಜೆಪಿ- ಜೆಡಿಎಸ್ ಜೊತೆಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ನಾಲ್ಕು ಜಿಲ್ಲೆಯಲ್ಲಿಯೂ ಅತಿ ಹೆಚ್ಚಿನ ಮತ ಪಡೆದು ದಾಖಲೆ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಲಿ ಎಂದು ಅವರು ಆಶಿಸಿದರು.

ಶಿಕ್ಷಕರ ಪರವಾಗಿ ನಮ್ಮ ಅಭ್ಯರ್ಥಿ ಕೆಲಸ ಮಾಡುತ್ತಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಅವರು ಭರವಸೆ ನೀಡಿದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಶಿಕ್ಷಕರ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದು ಕುಮಾರಸ್ವಾಮಿ.ಅವರು ಮುಖ್ಯಮಂತ್ರಿ ಆಗಿದ್ದಾಗ 1,600 ಪ್ರೌಢಶಾಲೆ, 250 ಪ್ರಥಮ ದರ್ಜೆ ಕಾಲೇಜು ಕೊಟ್ಟರು. ಮೈಸೂರಿಗೆ ನಾಲ್ಕು ಕಾಲೇಜು ನೀಡಿದ್ದು ನಾವು. ಮೈತ್ರಿ ಅಭ್ಯರ್ಥಿ ವಿವೇಕಾನಂದರು ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅನೇಕರು ನಮ್ಮಲ್ಲೆ ತಿಂದು ಉಂಡು, ನಮ್ಮ ಬಗ್ಗೆ ಮಾತನಾಡುತ್ತಾರೆ. ನಾನು ಯಾರ ಬಗ್ಗೆನೂ ಟೀಕೆ ಮಾಡಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಬೇಕು ಎಂದು ಕರೆ ನೀಡಿದರು.

ಶಾಸಕ ಹಾಗೂ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ನಮ್ಮ ಒಗ್ಗಟ್ಟು ಗೊತ್ತಾಗುತ್ತದೆ. ನಾವೆಲ್ಲರೂ ಅಣ್ಣ ತಮ್ಮಂದಿರ ಹಾಗೆ ಕೆಲಸ ಮಾಡಿದ್ದೇವೆ. ಶಿಕ್ಷಣ ಸಚಿವರು ಡಿಡಿಪಿಐ, ಬಿಇಒ, ಬಿ.ಆರ್.ಸಿ ಗಳಿಗೆ ಸರ್ಕಾರ ಬೆದರಿಕೆ ಹಾಕುತ್ತಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ನಾನು ಸಚಿವನಾಗಿದ್ದಾಗ ಕೊಟ್ಟ ಶಾಲಾ ಕಾಲೇಜುಗಳು ಇಂದಿಗೂ ನಡೆಯುತ್ತಿವೆ ಎಂದರು.

ಶಾಸಕ ಶ್ರೀವತ್ಸ ನಮಗೆ ಧರ್ಮರಾಯ ಇದ್ದಂತೆ. ಈ ಕಾಲದಲ್ಲೂ ಹಣ ಖರ್ಚು ಮಾಡದೇ ಗೆದ್ದಿದ್ದಾರೆ. ಈಗಾಗಲೇ ನಮ್ಮ ನಾಯಕರು ಚುನಾವಣ ಪ್ರಚಾರ ಕೈಗೊಂಡಿದ್ದಾರೆ. ನಾವು ನಮ್ಮ ಶಾಲಾ ಶಿಕ್ಷಕರನ್ನು ಸಂಪರ್ಕ ಮಾಡಿ ಮನವಿ ಮಾಡೋದು ನಮ್ಮ ಕರ್ತವ್ಯ. ನಾವು ಮತದಾರರ ಮನವೊಲಿಸಿ ಮತ ಹಾಕಿಸುವ ಕೆಲಸ ಮಾಡಿದರೆ ಸಾಕು ಎಂದು ಅವರು ಹೇಳಿದರು.

ಸಂಸತ್ ಚುನಾವಣೆಯಲ್ಲಿ ನಾವು ಉಸಿರಾಡುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಯಾರೂ ಮಾತನಾಡಲಿಕ್ಕೆ ಆಗಲ್ಲ. ನಮ್ಮ ಅಭ್ಯರ್ಥಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಶಿಕ್ಷಕರ ಸೇವೆ ಮಾಡುವ ಅಸೆ ಇದೆ ಅಷ್ಟೆ ಎಂದರು.

ಮಾಜಿ ಸಚಿವ ಸಾ.ರಾ. ಮಹೇಶ್ಮಾತನಾಡಿ, ಕಾಂಗ್ರೆಸ್ ನಾಯಕರು ಪೊಲೀಸರನ್ನು ಇಟ್ಟುಕೊಂಡು ನಮ್ಮನ್ನು ಮುಗಿಸುವ ಕೆಲಸ ಮಾಡುತ್ತಿದೆ. ಈ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ಬಿಜೆಪಿ- ಜೆಡಿಎಸ್ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡೋಣ. ಮರಿತಿಬ್ಬೆಗೌಡರು ನಮ್ಮಲ್ಲೇ ಇದ್ದವರು. ಎಲ್ಲವನ್ನೂ ಅನುಭವಿಸಿ ಈಗ ನಮ್ಮ ನಾಯಕರ ಬಗ್ಗೆಯೇ ಮಾತನಾಡುತ್ತಾರೆ. ಆದ್ದರಿಂದ ಮೈತ್ರಿ ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

ನಾಮಪತ್ರ ಹಿಂತೆಗೆತ ಪೂರ್ಣಗೊಂಡು ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳ್ಳಿತ್ತಿದ್ದಂತೆಯೇ ಭರ್ಜರಿ ಮತಯಾಚನೆಯಲ್ಲಿ ಉಭಯ ಪಕ್ಷಗಳ ನಾಯಕರು ತೊಡಗಿಸಿಕೊಂಡರು.

ನಾಮಪತ್ರ ಸಲ್ಲಿಕೆ ದಿನ ಪೂರ್ವಭಾವಿ ಸಭೆ ನಡೆಸಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈಗ ಚುನಾವಣೆ ಸಮೀಪಿಸುತ್ತಿರುವಂತೆಯೇ ಶಿಕ್ಷಕರು ಮತ್ತು ಶಿಕ್ಷಕ ಸಂಘಟನೆಯ ಪ್ರಮುಖರೊಡನೆ ಸಭೆ ನಡೆಸಿದರು.

ಈ ಸಭೆಯಲ್ಲಿ ಶಿಕ್ಷಕರಲ್ಲದೆ, ಉಭಯ ಪಕ್ಷಗಳ ಕೆಲ ಪ್ರಮುಖರು ಮತ್ತು ಕಾರ್ಯಕರ್ತರೂ ಕೂಡ ಪಾಲ್ಗೊಂಡಿದ್ದರು.

ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ನಾರಾಯಣ, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ವಿಧಾನ ಪರಿಷತ್ಸದಸ್ಯ ಸಿ.ಎನ್. ಮಂಜೇಗೌಡ, ಶಾಸಕ ಟಿ.ಎಸ್. ಶ್ರೀವತ್ಸ ಮಾಜಿ ಮೇಯರ್ಗಳು ಸ್ಥಳೀಯ ನಾಯಕರು ಪಾಲ್ಗೊಂಡಿದ್ದರು.

---

ಬಾಕ್ಸ್ ಸುದ್ದಿ

ರೇವಣ್ಣ- ಎಚ್.ಡಿ.ಕೆ ಚರ್ಚೆ

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸಾರ್ವಜನಿಕವಾಗಿ ಮೊದಲು ಕಾಣಿಸಿಕೊಂಡ ಎಚ್.ಡಿ. ರೇವಣ್ಣ ಅವರು, ವೇದಿಕೆ ಮೇಲೆ ಹಾಜರಿದ್ದು, ಕೆ. ವಿವೇಕಾನಂದ ಅವರ ಪರ ಮತಯಾಚಿಸಿದರು.

ಎಚ್.ಡಿ. ಕುಮಾರಸ್ವಾಮಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ರೇವಣ್ಣ ಅವರು ಕೆಲ ಕಾಲ ಚರ್ಚೆ ನಡೆಸಿದರು. ಆರಂಭದಲ್ಲಿ ಒಂದೇ ವೇದಿಕೆ ಹಂಚಿಕೊಂಡರೂ ಎಚ್.ಡಿ. ರೇವಣ್ಣ ಮತ್ತು ಕುಮಾರಸ್ವಾಮಿ ಅವರು ದೂರ ದೂರವೇ ಕುಳಿತಿದ್ದರು. ಇವರ ನಡುವೆ ಎಚ್.ಕೆ. ಕುಮಾರಸ್ವಾಮಿ, ಡಾ. ಅಶ್ವತ್ಥ್‌ ನಾರಾಯಣ್‌ ಕುಳಿತಿದ್ದರು.

ಕೆಲ ಸಮಯದ ಬಳಿಕ ದೂರ ಕುಳಿತಿದ್ದ ಅಣ್ಣನನ್ನ ಪಕ್ಕಕ್ಕೆ ಕರೆದ ಎಚ್.ಡಿ. ಕುಮಾರಸ್ವಾಮಿ ಅವರು ಕೆಲಕಾಲ ಸುಧೀರ್ಘ ಚರ್ಚೆಗೆ ಮುಂದಾದರು.