ಸ್ವಿಸ್ ಬ್ಯಾಂಕ್ ನಿಂದ ಭಾರತದ ಕಪ್ಪು ಹಣ ತಂದರೆ ಹೇಳಿ: ಡಾ.ಯತೀಂದ್ರ

| Published : Apr 01 2024, 12:49 AM IST

ಸಾರಾಂಶ

ಮೋದಿ ಸರ್ಕಾರ ಆಡಳಿತಕ್ಕೆ ಬಂದು 10 ವರ್ಷ ಕಳೆದಿದೆ. ಮೋದಿ ಕಪ್ಪು ಹಣ ತರಲೇ ಇಲ್ಲ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೋದಿ ಸರ್ಕಾರ ಆಡಳಿತಕ್ಕೆ ಬಂದು 10 ವರ್ಷ ಕಳೆದಿವೆ. ಇಡೀ ದೇಶದ ಆರ್ಥಿಕ ಪರಿಸ್ಥಿತಿ ಹಿಂದೆ ಸರಿದಿದೆ. ದೇಶವು 25 ವರ್ಷಗಳಷ್ಟು ಹಿಂದಕ್ಕೆ ಸರಿದಿದೆ‌. ಕಪ್ಪು ಹಣ ತರುತ್ತೇವೆ. ಸುಖದ ಜೀವಮಾನ ನಿಮ್ಮದಾಗಬಹುದು ಎಂದ ಮೋದಿ ಕಪ್ಪು ಹಣ ತರಲೇ ಇಲ್ಲ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದ ರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ವಿರಾಜಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಕೊಡಗು ಜಿಲ್ಲಾ ಕಾಂಗ್ರೆಸ್ ಚುನಾವಣಾ ಸಮಿತಿ ವತಿಯಿಂದ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸನಾತನ ಧರ್ಮಮದ ತಳಹದಿಯ ಮೇಲೆ ರಾಜಕೀಯ ನಡೆಸುತ್ತಿರುವ ಮೋದಿ ಸರ್ಕಾರ ದಲಿತರ ಜೀವನವನ್ನು ಸುಖಮಯವಾಗಿಸುತ್ತೇನೆ ಎಂದರು. ಅದು ಆಗಲಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು ಸೃಷ್ಟಿಯೇ ಆಗಿಲ್ಲ ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ದೇಶವನ್ನು ಅಧೋಗತಿಯತ್ತ ಸಾಗಿಸಿದ್ದಾರೆ. ರೈತರನ್ನು ಶೋಷಿಸುತ್ತ ಅವರಿಂದ ಪ್ರತಿಭಟನೆಯ ಹಕ್ಕನ್ನು‌ ಕೇಂದ್ರ ಸರ್ಕಾರ ಕಸಿದು ಕೊಂಡಿದೆ ಎಂದು ಯತೀಂದ್ರ ಟೀಕಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತತ್ವ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಬಿಜೆಪಿಯ ಶಾಸಕರ ಕೊಡುಗೆಗಳನ್ನು ನೋಡುವುದಾದರೆ ದೊಡ್ಡ ಶೂನ್ಯ. ಬಿಜೆಪಿಯು ಕೋಮುವಾದ ಮತೀಯತೆಯ ಮೂಲಕ ಪ್ರಜಾಪ್ರಭುತ್ವದ ಅಭಿವೃದ್ಧಿಯನ್ನು ತಡೆಯುವಂತಹ ಕಾರ್ಯ ಮಾಡುತ್ತಿದೆ ಎಂದರು.

ಕೊಡಗು ಮೈಸೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮಣ್ ಮಾತನಾಡಿ, ಶಾಸಕರು, ಸಂಸದರು ಒಂದೇ ಪಕ್ಷದವರಾಗಿದ್ದರೆ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಏಪ್ರಿಲ್ 3ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಲೋಕಸಭಾ ಚುನಾವಣೆಯು ಸತ್ಯ ಮತ್ತು ಅಸತ್ಯದ ತಳಹದಿಯ ಮೇಲೆ ನೆಲೆನಿಂತಿದೆ. ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಕದನ ಸತ್ಯವನ್ನು ಎದುರಿಸಲಾಗದೆ ಸುಳ್ಳು ಸೋಲಲೇಬೇಕು. ಈ ಹಿಂದೆ ಇದ್ದಂತಹ ಶಾಸಕರ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ ಎಂದರು.

ಕೊಡಗು ಸಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗಿದ್ದ ಪ್ರತೀಕ್ ಪೊನ್ನಣ್ಣ ಮತ್ತು ಮಾತೃ ಪಕ್ಷವನ್ನು ಬಿಟ್ಟು ಇತರ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಕಾರ್ಯಕರ್ತರು ಉದ್ಯಮಿಗಳು ಇಂದು ಶಾಸಕರು ಮತ್ತು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಚಿವ ವೆಂಕಟೇಶ್, ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಡಾ. ಪುಷ್ಪ ಅಮರ್ ನಾಥ್ , ಶಾಸಕ ಎ. ಎಸ್. ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚಯ್ಯ, ಅರುಣ್ ಮಾಚಯ್ಯ ಡಾ. ಶುಶ್ರುತ್ ಗೌಡ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಅಮಿತ್ ಶಾಗೆ ಕ್ರಿಮಿನಲ್ ಹಿನ್ನೆಲೆ: ಇತ್ತೀಚೆಗಷ್ಟೇ ಕೇಂದ್ರ ಸಚಿವ ಅಮಿತ್ ಶಾ ಓರ್ವ ಗೂಂಡಾ, ರೌಡಿ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿರಾಜಪೇಟೆಯಲ್ಲಿ ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಪ್ರಚಾರ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ತಮ್ಮ ಹೇಳಿಕೆ ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಮಿತ್‌ ಶಾ ಅವರನ್ನ ರೌಡಿ ಎಂದು ನಾನೇ ಹುಟ್ಟಿಸಿಕೊಂಡು ಹೇಳಿದಂತಹ ಮಾತಲ್ಲ, ಈ ಹಿಂದೆ ಸಿಬಿಐ ಕೂಡ ಹೇಳಿತ್ತು. ಅಮಿತ್ ಶಾ ಅವರಿಗೆ ಕ್ರಿಮಿನಲ್ ಬ್ಯಾಗ್ರೌಂಡ್‌ ಇದೆ ಅಂತ ಹೇಳಿದೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

2010ರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಗುಜರಾತ್ ಕೋರ್ಟ್‌ಗೆ ಸಿಬಿಐ ಕೊಟ್ಟ ಹೇಳಿಕೆ ಅದು. ಅದೇ ಹೇಳಿಕೆಯನ್ನು ನಾನು ಪುನರುಚ್ಚರಿಸಿದ್ದೇನೆ ಅಷ್ಟೇ. ನನ್ನ ಹೇಳಿಕೆಯಿಂದ ಬಿಜೆಪಿಗೆ ಕೋಪ ಬಂದಿದ್ದರೆ, ಮೊದಲು ಸಿಬಿಐ ಮೇಲೆ ಅವರು ಕೋಪ ಮಾಡಿಕೊಳ್ಳಬೇಕು. ಈಗಾಗಲೇ ನನಗೆ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ. ಅದಕ್ಕೆ ನಾನು ಏನು ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಈ‌ ಹತ್ತು ವರ್ಷಗಳಲ್ಲಿ ದೇಶವನ್ನು ಎಷ್ಟು ಹಾಳು ಮಾಡಲು ಸಾಧ್ಯವೋ ಅಷ್ಟು ಹಾಳುಮಾಡಿದ್ದಾರೆ. ಮೋದಿ ಸರ್ಕಾರದ ಬಂದ ಮೇಲೆ ನಮ್ಮ ದೇಶ 25 ವರ್ಷ ಹಿಂದಕ್ಕೆ ಹೋಗಿದೆ. ಕೇಂದ್ರ ಸರ್ಕಾರ ಈ ಹಿಂದೆ ಜನರಿಗೆ ಏನು ಭರವಸೆ ನೀಡಿತ್ತೋ ಅದನ್ನು ನೆರವೇರಿಸಿಲ್ಲ ಎಂದು ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಬಾಂಡ್‌ ವಿಚಾರದಲ್ಲಿ 12,000 ಕೋಟಿ ರು. ನಲ್ಲಿ 6 ಸಾವಿರ ಕೋಟಿ ರು. ಹಣ ಹೋಗಿರುವುದು ಬಿಜೆಪಿ ಪಕ್ಷಕ್ಕೆ. ನ್ಯಾಯಾಲಯಗಳನ್ನೂ ತಪ್ಪ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಈ ಬಾರಿ 400ಕ್ಕೂ ಹೆಚ್ಚು ಸೀಟ್‌ಗಳನ್ನ ಗೆದ್ದು ಬರುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. 400ಕ್ಕೂ ಹೆಚ್ಚು ಸೀಟ್ ಯಾಕೆ ಬೇಕು ಅಂತ ಅವರ ಪಕ್ಷದ ಅನಂತ್ ಕುಮಾರ್ ಹೆಗಡೆ ಅವರೇ ಸತ್ಯ ಬಿಚ್ಚಿಟ್ಟಿದ್ದಾರೆ. ಆದ್ದರಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ. ದೇಶದಲ್ಲಿ ಸರ್ವಾಧಿಕಾರ ಸರ್ಕಾರ ಆಡಳಿತಕ್ಕೆ ಬರುತ್ತದೆ. ಸಮಾನತೆ ಹೋಗಿ ಅಸಮಾನತೆ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಗಿದು ಹೋಗಿರುವ ಪ್ರಕರಣದಲ್ಲಿ ಐಟಿ ನೋಟಿಸ್ ಕೊಟ್ಟಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿ ಬಗ್ಗೆ ಸಚಿವ ಎಚ್ ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಸಿಬಿಐ, ಐಟಿ, ಇಡಿ ಇವುಗಳು ಸಾಂವಿಧಾನಿಕ ಸಂಸ್ಥೆಗಳು. ಇವು ಪ್ರಜಾಪ್ರಭುತ್ವದ ಬಲವರ್ಧನೆಗೆ ಕೆಲಸ ಮಾಡಬೇಕಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಈ ಸಂಸ್ಥೆಗಳು ರಾಜಕೀಯ ದಾಳವಾಗಿವೆ. ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಹೀಗಾಗಿ ಸಂವಿಧಾನ ಮತ್ತು ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಹೇಳಿದರು.

ಕಳೆದ ಐವತ್ತು ವರ್ಷಗಳಲ್ಲಿ ರಾಜಕೀಯ ಎದುರಾಳಿಗಳನ್ನೇ ಸಂಸ್ಥೆಗಳ ಬಳಸಿ ಅವರ ಕೈ ತಿರುಚಲಾಗುತ್ತಿದೆ. ಅವರ ಕುತ್ತಿಗೆಯನ್ನು ಇಚುಕುವಂತಹ ಕೆಲಸ ಮಾಡಲಾಗುತ್ತಿದೆ. ಎಲ್ಲೋ ಒಂದುಕಡೆ ದೇಶ ಸರ್ವಾಧಿಕಾರಿ ಎಡೆಗೆ ಹೆಜ್ಜೆ ಇಡುತ್ತಿದೆ. ಇದು ಈ ದೇಶದ ದೌರ್ಭಾಗ್ಯ. ಇಡಿ, ಐಟಿಗಳನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಎಚ್ಚರಿಸಿದೆ. ಈ ಸಂಸ್ಥೆಗಳು ಆಳುವ ಜನರ ಕೈಗೊಂಬೆಗಳಾಗಬಾರದು ಎಂದು ಮಹದೇವಪ್ಪ ಹೇಳಿದರು.