ಕನ್ನಡಪ್ರಭ ವಾರ್ತೆ, ತುಮಕೂರುಪಕ್ಷದ ಕಾರ್ಯಕರ್ತರು ಬಿಜೆಪಿಯ ಇತಿಹಾಸ ತಿಳಿಯಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಪಕ್ಷದ ಧ್ಯೇಯೋದ್ಧೇಶಗಳನ್ನು ಜನರಿಗೆ ಪರಿಚಯಿಸಬೇಕು. ವಿವಿಧ ಆಯಾಮಗಳಲ್ಲಿ ಕೆಲಸ ಮಾಡುತ್ತಾ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಕಾರ್ಯಕರ್ತರಿಗೆ ಸಲಹೆ ಮಾಡಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಸ್ಥಾಪನೆಗೆ ಕಾರಣಕರ್ತರಾದ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಒಂದು ಸ್ಥಾನದಿಂದ ಆರಂಭಗೊಂಡು ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆದಿರುವ ಬಿಜೆಪಿ ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯತೆ, ಸ್ವದೇಶಿ, ದೇಶದ ಅಭಿವೃದ್ಧಿಯ ಎಂಬ ಸಿದ್ಧಾಂತಗಳಲ್ಲಿ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳದೆ ಇಂದಿಗೂ ತನ್ನ ತತ್ವಸಿದ್ಧಾಂತಗಳಿಗೆ ಬಿಜೆಪಿ ಬದ್ಧವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.1951 ರಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ನೆಹರೂ ಸಂಪುಟದಿಂದ ರಾಜೀನಾಮೆ ನೀಡಿ ರಾಷ್ಟ್ರೀಯ ಸ್ವಯಂಸೇವಕರ ಸಂಘದ ಬೆಂಬಲದೊಂದಿಗೆ ಭಾರತೀಯ ಜನಸಂಘ ಸ್ಥಾಪಿಸಿದರು, ಹಿಂದುತ್ವ, ರಾಷ್ಟ್ರೀಯತೆ ಮತ್ತು ಏಕೀಕೃತ ಭಾರತ ಸಿದ್ಧಾಂತವನ್ನು ಸಂಘ ಪ್ರತಿಪಾದಿಸಿತು. ಒಂದು ದೇಶ ಒಂದು ಸಂಸ್ಕೃತಿ ಎಂಬ ಸಿದ್ಧಾಂತದಡಿ ಭಾರತೀಯ ಜನಸಂಘ ಸ್ಥಾಪನೆಯಾಯಿತು. 1977 ರಲ್ಲಿ ಜನತಾ ಪಕ್ಷದೊಂದಿಗೆ ವಿಲೀನಗೊಂಡು ನಂತರ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ಜನಸಂಘದ ಸದಸ್ಯರು ಪ್ರತ್ಯೇಕಗೊಂಡು 1980, ಏಪ್ರಿಲ್ 6 ರಂದು ಇದು ಭಾರತೀಯ ಜನತಾಪಕ್ಷವಾಗಿ ಸ್ಥಾಪನೆಗೊಂಡು, ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಯ ಮೊದಲ ಅಧ್ಯಕ್ಷರಾದರು ಎಂದು ಜ್ಯೋತಿಗಣೇಶ್ ಅವರು ಬಿಜೆಪಿ ಸ್ಥಾಪನೆ ಹಿನ್ನೆಲೆ ವಿವರಿಸಿದರು.1984 ರ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದರೂ ತಳಮಟ್ಟದ ಸಂಘಟನೆ ಮತ್ತು ಸೈದ್ಧಾಂತಿಕ ಸ್ಪಷ್ಟತೆಯತ್ತ ಗಮನಹರಿಸಿತು. 1990 ರಲ್ಲಿ ಅಯೋಧ್ಯೆ ರಾಮಜನ್ಮ ಭೂಮಿ ಆಂದೋಲನ ಆರಂಭಿಸಿದ ನಂತರ ಪಕ್ಷವು ರಾಷ್ಟ್ರವ್ಯಾಪಿ ಜನಪ್ರಿಯತೆ ಗಳಿಸಿತು. 1996 ರಿಂದ 2004 ರವರೆಗೆ ಮೂರು ವರ್ಷಗಳಲ್ಲಿ ವಾಜಪೇಯಿ ನೇತೃತ್ವದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವು. 1914 ರಿಂದ ನರೇಂದ್ರಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸ್ವಂತ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಇಂತಹ ಅನೇಕ ಮಹನೀಯರು ಕಟ್ಟಿ ಬೆಳೆಸಿದ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬಲು ಮುಖಂಡರು, ಕಾರ್ಯಕರ್ತರು ಸಂಸ್ಥಾಪನಾದಿನದಂದು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ ಹೆಬ್ಬಾಕ ಮಾತನಾಡಿ, ಸೈದ್ಧಾಂತಿಕ ನಿಲುವಿನ ಆಧಾರದ ಮೇಲೆ ಬಿಜೆಪಿಯನ್ನು ಕಟ್ಟಿದ ಮಹನೀಯರನ್ನು ಈ ಸಂದರ್ಭದಲ್ಲಿ ನಾವೆಲ್ಲಾ ಸ್ಮರಿಸಬೇಕು. ಬಿಜೆಪಿ ಬೆಳವಣಿಗೆಗೆ ದೇಶಾದ್ಯಂತ ಅನೇಕ ನಾಯಕರು ಶ್ರಮಿಸಿದ್ದಾರೆ. ಜಿಲ್ಲೆಯಲ್ಲೂ ಬಹಳಷ್ಟು ಮುಖಂಡರು ಬಿಜೆಪಿ ಬೆಳವಣಿಗೆಗೆ ಕಾರಣರಾಗಿದ್ದಾರೆ ಅವರೆಲ್ಲಾ ಅಭಿನಂದನೀಯರು ಎಂದರು.ಅವರ ಪರಿಶ್ರಮದ ಫಲವಾಗಿ ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ ಶಾಸಕರು, ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಪಡೆದರು. ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಬೆಂಬಲಿತರು ಚುನಾಯಿತರಾದರು. ಬಿಜೆಪಿಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಪಕ್ಷದ ಮೂಲ ಧ್ಯೇಯೋದ್ಧೇಶಗಳೊಂದಿಗೆ ಎಲ್ಲರೂ ಶ್ರಮಿಸೋಣ ಎಂದು ರವಿಶಂಕರ್ ಹೆಬ್ಬಾಕ ತಿಳಿಸಿದರು.ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ವೈ.ಎಹೆಚ್. ಹುಚ್ಚಯ್ಯ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಹಿರಿಯ ಕಾರ್ಯಕರ್ತೆ ಅಂಬಿಕಾ ಮಹೇಶ್ ಭಾಗವಹಿಸಿದ್ದರು. ಇದಕ್ಕೂ ಮೊದಲು ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ರವಿಶಂಕರ ಹೆಬ್ಬಾಕ, ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ಮುಖಂಡರು ಬಿಜೆಪಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು.ಸಂಸ್ಥಾಪನಾ ದಿನಾಚರಣೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ನಿಕಟಪೂರ್ವ ನಗರ ಅಧ್ಯಕ್ಷ ಟಿರೆಹೆಚ್.ಹನುಮಂತರಾಜು, ಮುಖಂಡರಾದ ಕೆ.ಎ. ಕುಮಾರ, ಪ್ರೀತಮ್ ಜೈನ್, ಗಣೇಶ್‌ಪ್ರಸಾದ, ಸತ್ಯಮಂಗಲ ಜಗದೀಶ, ಬನಶಂಕರಿ ಬಾಬು, ಎನ್. ವೆಂಕಟೇಶಾಚಾರ ಶಿವಕುಮಾರ್, ಜಗದೀಶ್, ಪುರುಷೋತ್ತಮ, ಚೆಂಗಾವಿ ರವಿ, ಗಂಗೇಶ್ ಹದ್ದಿನಕಲ್ಲು, ರೇಖಾ ಶಿವಕುಮಾರ್, ಶ್ರೀನಿವಾಸ್, ರಘು, ಪ್ರವೀಣ್, ಕಿರಣ್, ದರ್ಶನ್ ಮೊದಲಾದವರು ಭಾಗವಹಿಸಿದ್ದರು. ಬಿಜೆಪಿ ಸಂಸ್ಥಾಪನ ದಿನದ ಅಂಗವಾಗಿ ನಗರದ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಿ ಗೌರವ ಸಲ್ಲಿಸಿ ಸಂಭ್ರಮಿಸಿದರು.