ನಿಮ್ಮ ಕುಟುಂಬದ ಸಚಿವ, ಶಾಸಕರ ಸಾಧನೆ ತಿಳಿಸಿ: ರಾಜಶೇಖರ

| Published : Apr 02 2024, 01:04 AM IST

ಸಾರಾಂಶ

ಸಂಸದ ಜಿ.ಎಂ.ಸಿದ್ದೇಶ್ವರ ಅವರ ಸಾಧನೆಗಳನ್ನು ಪ್ರಶ್ನಿಸುವ ಕಾಂಗ್ರೆಸ್ ಅಭ್ಯರ್ಥಿಯು ಮೊದಲು ತಮ್ಮ ಕುಟುಂಬದ ಸಚಿವರು, ಶಾಸಕರ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ರಾಜಶೇಖರ ನಾಗಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಂಸದ ಸಿದ್ದೇಶ್ವರ ಸಾಧನೆ ಪ್ರಶ್ನಿಸಿದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾಗೆ ಬಿಜೆಪಿ ಪ್ರತಿ ಸವಾಲು - ಹೆಣ್ಣುಮಕ್ಕಳು ಅಡುಗೆ ಮನೆಗೇ ಲಾಯಕ್ಕೆಂಬ ಶಾಮನೂರು ಹೇಳಿಕೆಗೆ ಪ್ರತಿಕ್ರಿಯಿಸಲು ತಾಕೀತು- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಂಸದ ಜಿ.ಎಂ.ಸಿದ್ದೇಶ್ವರ ಅವರ ಸಾಧನೆಗಳನ್ನು ಪ್ರಶ್ನಿಸುವ ಕಾಂಗ್ರೆಸ್ ಅಭ್ಯರ್ಥಿಯು ಮೊದಲು ತಮ್ಮ ಕುಟುಂಬದ ಸಚಿವರು, ಶಾಸಕರ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದರು.

ನಗರದ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿ.ಎಂ.ಸಿದ್ದೇಶ್ವರ 4 ಬಾರಿ ಸಂಸದರಾಗಿ ಕೇಂದ್ರದ ಯೋಜನೆ, ಕಾರ್ಯಕ್ರಮಗಳ ಜೊತೆಗೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಂಡಿದ್ದಾರೆ. ಸಿದ್ದೇಶ್ವರ ಅವರ ಸಾಧನೆಗಳ ರಿಪೋರ್ಟ್ ಕಾರ್ಡ್ ಸಹ ಈಚೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಹಾನಗರ ಪಾಲಿಕೆಗೆ ₹100 ಕೋಟಿ ಸಿಎಂ ವಿಶೇಷ ಅನುದಾನದಂತೆ ₹300 ಕೋಟಿ ಅನುದಾನ, ಕೇಂದ್ರದ ಯುಐಡಿಎಸ್ಎಸ್ಎಂಟಿನಡಿ ₹88 ಕೋಟಿ, ಸ್ಮಾರ್ಟ್ ಸಿಟಿ ಯೋಜನೆಯಡಿ ₹1,070 ಕೋಟಿ ಅನುದಾನವನ್ನು ಸಿದ್ದೇಶ್ವರ ತಂದಿದ್ದರು. ಹಾಗಾಗಿಯೇ ದಾವಣಗೆರೆ ಇಂದು ಸುಂದರವಾಗಿ ಕಾಣುತ್ತಿದೆ, ಮತ್ತಷ್ಟು ಸುಂದರವಾಗುತ್ತಿದೆ ಎಂಬುದನ್ನು ಕಾಂಗ್ರೆಸ್ಸಿನವರು ಮರೆಯಬಾರದು ಎಂದು ತಿಳಿಸಿದರು.

ದಾವಣಗೆರೆ ನಗರ, ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು 2 ದಶಕದಿಂದಲೂ ಪ್ರತಿನಿಧಿಸುತ್ತಿರುವ ನಿಮ್ಮ ಮಾವ, ಡಾ.ಶಾಮನೂರು ಶಿವಶಂಕರಪ್ಪ ಅದೇ ಕ್ಷೇತ್ರಕ್ಕೆ, ಜಿಲ್ಲೆಗೆ ನೀಡಿದ ಕೊಡುಗೆ ಏನು? 8 ವರ್ಷಕ್ಕೂ ಅಧಿಕ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾದ ನಿಮ್ಮ ಪತಿ, ಎಸ್‌.ಎಸ್‌. ಮಲ್ಲಿಕಾರ್ಜುನ ಜಿಲ್ಲೆಯ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ? ಅಲ್ಲಿನ ಜನರಿಗೆ ಯಾವ ರೀತಿ ಸ್ಪಂದಿಸಿದ್ದಾರೆ? ಗ್ರಾಮೀಣ ಪ್ರದೇಶದ ಯಾವ ಹಳ್ಳಿಗೆ ಅನುದಾನ ನೀಡಿ ಸ್ಪಂದಿಸಿದ್ದಾರೆ? ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಯಾವ್ಯಾವ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು ಎಂಬುದನ್ನೂ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಜನತೆಗೆ ತಿಳಿಸಬೇಕು ಎಂದರು.

ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ವೇ ಮಾಡಿ, ಅಗತ್ಯ ಜಮೀನು ಗುರುತಿಸಲಾಗಿದೆ. ಭೂ ಸ್ವಾಧೀನಕ್ಕೂ ₹142 ಕೋಟಿ ಅಗತ್ಯವಿದೆ. ಅದನ್ನು ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡಿ. ಪ್ರಧಾನಿ ನರೇಂದ್ರ ಮೋದಿ ಶೇ.33 ಮಹಿಳಾ ಮೀಸಲಾತಿಗೆ ಕ್ರಮ ಕೈಗೊಂಡಿದ್ದಾರೆ. ಆದರೆ, ಶಾಮನೂರು ಶಿವಶಂಕರಪ್ಪನವರು ಬಿಜೆಪಿ ಅಭ್ಯರ್ಥಿ ಬಗ್ಗೆ ಅಡುಗೆ ಮನೆಗೆ ಲಾಯಕ್ಕು ಅಂದಿದ್ದಾರೆ. ನಿಮ್ಮ ಮಾವನವರ ಈ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನೆಂದು ಮೊದಲು ಜನರಿಗೆ ಸ್ಪಷ್ಟಪಡಿಸಿ ಎಂದರು.

ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ, ದೂಡಾ ಮಾಜಿ ಅಧ್ಯಕ್ಷ, ವಕೀಲ ಎ.ವೈ.ಪ್ರಕಾಶ, ಎಚ್.ಎಸ್. ಲಿಂಗರಾಜ, ಮಂಜಾನಾಯ್ಕ, ಧನಂಜಯ ಕಡ್ಲೇಬಾಳು, ಕಿಶೋರಕುಮಾರ, ಬೇತೂರು ಬಸವರಾಜ, ಎಚ್.ಪಿ.ವಿಶ್ವಾಸ ಇತರರು ಇದ್ದರು.

- - - ಬಾಕ್ಸ್ -1

11 ವರ್ಷ ಸಚಿವರಿದ್ದು ಏನು ಮಾಡಿದ್ದಾರೆ?

ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಸುಮಾರು 11 ವರ್ಷ ಕಾಲ ತಂದೆ, ಮಗ ಸೇರಿದಂತೆ ಶಾಮನೂರು ಕುಟುಂಬದವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆದರೂ, ಕೃಷಿ ಕಾಲೇಜು, ತೋಟಗಾರಿಕೆ ಕಾಲೇಜು, ಪ್ರತ್ಯೇಕ ಹಾಲು ಒಕ್ಕೂಟ ತರಲಿಲ್ಲ. ಭದ್ರಾ ನೀರು ನಿರ್ವಹಣೆಯಲ್ಲಿ ಜಿಲ್ಲಾ ಸಚಿವರ ಉದಾಸೀನತೆಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಐಸಿಸಿ ಸಭೆಗೆ ಗೈರಾಗುವ ಮೂಲಕ ಜಿಲ್ಲೆಯ ಜನರು, ರೈತರ ಹಿತ ಕಡೆಗಣಿಸಿದವರು ಕಾಂಗ್ರೆಸ್ಸಿನವರು. ತಮ್ಮ ಸ್ವಾರ್ಥಕ್ಕಾಗಿ ದಾವಣಗೆರೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬರದಂತೆ ನೋಡಿಕೊಂಡಿದ್ದಾರೆ ಎಂದು ಟೀಕಿಸಿದರು.

- - -

ಬಾಕ್ಸ್‌-2 ಬಿಜೆಪಿ ನಾಯಕರು ಪ್ರಚಾರದಲ್ಲಿ ಸಕ್ರಿಯ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ, ಬಂಡಾಯ ಶಮನವಾಗಿದೆ. ಹಿರಿಯರಾದ ಎಸ್.ಎ. ರವೀಂದ್ರನಾಥ ಸೇರಿದಂತೆ ಎಲ್ಲರೂ ಪ್ರಚಾರದಲ್ಲಿ ಸಕ್ರಿಯವಾಗಿದ್ದಾರೆ. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ. ಏ.2ರಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಯಾರೆಲ್ಲಾ ಸ್ಟಾರ್ ಪ್ರಚಾರಕರು ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರ ಪರ ಪ್ರಚಾರಕ್ಕೆ ಬರುವರೆಂಬುದು ಗೊತ್ತಾಗಲಿದೆ ಎಂದರು.

- - -

-1ಕೆಡಿವಿಜಿ5:

ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.