ವಿದ್ಯಾರ್ಥಿಗಳಿಗೆ ಇತಿಹಾಸದ ಹೊಸ ಮಗ್ಗಲು ತಿಳಿಸಿ: ಡಾ.ವಿಜಯ ಪೂಣಚ್ಚ

| Published : Jul 06 2024, 12:48 AM IST

ವಿದ್ಯಾರ್ಥಿಗಳಿಗೆ ಇತಿಹಾಸದ ಹೊಸ ಮಗ್ಗಲು ತಿಳಿಸಿ: ಡಾ.ವಿಜಯ ಪೂಣಚ್ಚ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವನ ಜೀವ ವಿಕಸನದಿಂದ, ಸಮಾಜ, ಸಾಮ್ರಾಜ್ಯ ನಿರ್ಮಾಣದವರೆಗೂ ಇತಿಹಾಸವು ಹಲವು ಸ್ಥಿತ್ಯಂತರಗಳನ್ನು ಕಂಡಿದೆ.

ಹೊಸಪೇಟೆ: ಇತಿಹಾಸದ ಹೊಸ ಮಗ್ಗಲುಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವುದು ಅವಶ್ಯಕವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಹಂಪಿ ಇತಿಹಾಸ ಮತ್ತು ಪುರಾತತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ಜೀವ ವಿಕಸನದಿಂದ, ಸಮಾಜ, ಸಾಮ್ರಾಜ್ಯ ನಿರ್ಮಾಣದವರೆಗೂ ಇತಿಹಾಸವು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಯಾವುದೇ ಪ್ರದೇಶದ ಇತಿಹಾಸವು ಶಾಶ್ವತವಲ್ಲ. ಅದು ಅಧ್ಯಯನಗಳಿಂದ ಹೊಸ ಅರ್ಥ ಮತ್ತು ವಿವಿಧ ಮಗ್ಗಲುಗಳಿಗೆ ಬದಲಾಗುತ್ತಾ ಹೋಗುತ್ತದೆ. ಇತಿಹಾಸದ ಹೊಸ ಮಗ್ಗಲುಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವುದು ಅವಶ್ಯಕವಾಗಿದೆ ಎಂದರು.

ಇತಿಹಾಸದ ಸಂಶೋಧನೆಯಲ್ಲಿ ಸಿದ್ಧಪಡಿಸಿದ ವಿಷಯಗಳು ತೀರ್ಪುಗಳಂತೆ ಸ್ಥಿರವಾಗಿರದೆ ಸಂಶೋಧನೆಯಿಂದ ಹೊಸ ವಿಷಯಗಳಿಂದ ಮಾರ್ಪಾಡು ಪಡೆಯುತ್ತವೆ. ಇತಿಹಾಸವನ್ನು ಬರವಣೆಗೆಯೂ ಅನೇಕ ಆಕಾರಗಳ ಆಧಾರದಲ್ಲಿ ಸತ್ಯಾಂಶ ಶೋಧನೆಯಾಗಿದೆ. ಇತಿಹಾಸವು ಧಾರ್ಮಿಕ ಚರಿತ್ರೆ, ರಾಜಕೇಂದ್ರಿತ ಚರಿತ್ರೆ, ಸಮುದಾಯ ಕೇಂದ್ರಿತ ಚರಿತ್ರೆ ಹೀಗೆ ಪ್ರಕಾರಗಳನ್ನು ಒಳಗೊಂಡಿದೆ. ಇದನ್ನು ಕಟ್ಟಿಕೊಡುವಲ್ಲಿ ಯುವ ಸಂಶೋಧನಾರ್ಥಿಗಳು ಕೆಲವು ಸೂಕ್ಷ್ಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮುಖ್ಯಸ್ಥ ಡಾ. ವಾಸುದೇವ ಬಡಿಗೇರ ಮಾತನಾಡಿ, ಹಂಪಿ ಪ್ರದೇಶವು ಪ್ರಾಕೃತಿಕ ಮತ್ತು ಸಾಂಸ್ಕೃತಿಕ ವಿಷಯಗಳಿಂದ ವಿಶ್ವ ಪ್ರಸಿದ್ಧ ತಾಣ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡವರು ಹಂಪಿಗೆ ಬಂದರೆ ಜೀವನದಲ್ಲಿ ಮರಳಿ ಅವುಗಳನ್ನು ಪಡೆದುಕೊಳ್ಳುತ್ತಾರೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದರಿಂದ ಹಂಪಿ ಧಾರ್ಮಿಕ ಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದಿದೆ ಎಂದರು.

ಇತಿಹಾಸ ಮತ್ತು ಪುರಾತತ್ವ ವಿಭಾಗ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ಮಾತನಾಡಿ, ವಿಜಯನಗರ ಪೂರ್ವ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಪಾಂಸನ ಶೈಲಿಯಲ್ಲಿರುವುದನ್ನು ಕಾಣುತ್ತೇವೆ. ವಿಜಯನಗರ ಸಾಮ್ರಾಜ್ಯದಲ್ಲೂ ಸಂಗಮ ಮತ್ತು ಸಾಳುವ ಮನೆತನಗಳು ಈ ಪಾಂಸನ ಶೈಲಿಯಲ್ಲಿಯೇ ದೇವಾಲಯಗಳನ್ನು ನಿರ್ಮಿಸಿದ್ದಾರೆ. ತುಳುವ ಮನೆತನದ ಆಡಳಿತಾವಧಿಯಲ್ಲಿ ದ್ರಾವಿಡ ಶೈಲಿ ಪ್ರಬುದ್ಧಮಾನಕ್ಕೆ ಬಂದಿರುವುದನ್ನು ಕಾಣಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವಲ್ಲಿ ವಿರುಪಾಕ್ಷ ಬಜಾರು, ವಿಠಲ ಬಜಾರು, ಕೃಷ್ಣ ಬಜಾರು, ಪಾನ್‌ಸುಪಾರಿ ಬಜಾರು ಸೇರಿದಂತೆ ಏಳು ಪ್ರಮುಖ ಬಜಾರುಗಳು ಮಹತ್ವದ್ದಾಗಿವೆ. ಹಂಪಿ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳು ಆದಿ ಮಾನವನ ನೆಲೆಗಳಾಗಿವೆ ಎಂದರು.

ಜಮಖಂಡಿಯ ಬಿ.ಎಲ್.ಡಿ.ಇ ಮಹಾವಿದ್ಯಾಲಯ ಸ್ನಾತಕೋತ್ತರ ಇತಿಹಾಸ ಮತ್ತು ಪುರತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಎಸ್ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಕಟ್ಟಿಮನಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.