ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ತೆಲುಗು ಭಾಷೆಯ ಖ್ಯಾತನಟ ಹಾಗೂ ನಿರ್ಮಾಪಕ ಮಂಚು ಮೋಹನ್ ಬಾಬು ಅವರು ಭಾನುವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಸುಮಾರು150 ಕೋಟಿ ರು.ವೆಚ್ಚದಲ್ಲಿ ‘ಕಣ್ಣಪ್ಪ’ ಚಿತ್ರ ನಿರ್ಮಿಸಲಾಗುತ್ತಿದ್ದು, ಇದರ ಪೂರ್ವಭಾವಿಯಾಗಿ ಪೊಳಲಿಯ ಶ್ರೀ ರಾಜರಾಜೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಹಿತ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮಂಚು ಮೋಹನ್ ಬಾಬು ಅವರ ಪುತ್ರ ಮಂಚು ವಿಷ್ಣು ಈ ಚಲನಚಿತ್ರದ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ತಮ್ಮ ಹೊಸ ಚಿತ್ರ ಯಶಸ್ವಿಯಾಗಲು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮೊದಲ ಭಾರಿ ಕ್ಷೇತ್ರಕ್ಕೆ ಬಂದಿದ್ದೇನೆ ಪೊಳಲಿ ಶ್ರೀರಾಜರಾಜೇಶ್ವರಿ ಅಮ್ಮನವರ ದರ್ಶನ ಅತ್ಯಂತ ಸಂತೃಪ್ತಿ ತಂದಿದೆ ಎಂದು ಮಾಧ್ಯಮದೊಂದಿಗೆ ಸಂತಸ ವ್ಯಕ್ತಪಡಿಸಿದರು.
ದೇವಳದ ಅರ್ಚಕ ಪದ್ಮನಾಭ ಭಟ್ ಅವರು ಪ್ರಾರ್ಥಿಸಿ ಪ್ರಸಾದ ನೀಡಿದರು. ದೇವಳದ ವತಿಯಿಂದ ಶಾಲು ,ಸ್ಮರಣಿಕೆ ನೀಡಿ ಗೌರವಿಸಿದರು.ಪ್ರಧಾನ ಅರ್ಚಕರಾದ ಕೆ. ರಾಮ್ ಭಟ್, ನಾರಾಯಣಭಟ್, ಪರಮೇಶ್ವರ ಭಟ್, ಶ್ರೀ ಕ್ಷೇತ್ರ ಪೊಳಲಿಯ ಅರ್ಚಕರಾದ ಪವಿತ್ರಪಾಣಿ, ಅನುವಂಶಿಕ ಮೊಕ್ತೇಸರ ಮಾಧವ ಭಟ್, ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆ ಗುತ್ತು ಡಾ. ಮಂಜಯ್ಯ ಶೆಟ್ಟಿ, ಭದ್ರಿನಾಥ್ ಕಾಮತ್ ಮತ್ತಿತರರು ಇದ್ದರು.