ಪ್ರತಿ ವರ್ಷ ಎಳ್ಳ ಅಮಾವಾಸ್ಯೆಯಂದು ರಥೋತ್ಸವ ಜರುಗುತ್ತದೆ. ದೇವಾಲಯ ಚಕ್ರವರ್ತಿ ಮಹೇಶ್ವರ ದೇವಾಲಯ ೧೧೧೨ರಲ್ಲಿ ಸ್ಥಾಪನೆಯಾಗಿದೆ
ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಚಕ್ರವರ್ತಿ ಇಟಗಿ ಮಹೇಶ್ವರ (ಮಹಾದೇವ) ರಥೋತ್ಸವ ಇಂದು (ಡಿ.19) ಜರುಗಲಿದೆ.ಜಾತ್ರಾಮಹೋತ್ಸವ ಪ್ರಯುಕ್ತ ಕಳೆದ ನಾಲ್ಕೈದು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ದೇವಸ್ಥಾನಕ್ಕೆ ದೀಪಾಲಂಕಾರ ಮಾಡಲಾಗಿದೆ. ಇಟಗಿ ಮಹಾದೇವ ದೇವಾಲಯದಲ್ಲಿ ಡಿ. 19ರಂದು ನಾನಾ ಪೂಜಾ ಕಾರ್ಯ ಜರುಗಲಿವೆ. ದೇವಾಲಯ ಅರ್ಚಕರಿಂದ ಭಕ್ತಾದಿಗಳಿಗೆ ಪ್ರಸಾದ ನೀಡಲಾಗುವುದು.
ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗುವುದು. ಡಿ. 19ರ ರಾತ್ರಿ ಮಹೇಶ್ವರ ಭಜನಾ ನಾಟ್ಯ ಸಂಘದಿಂದ ಮಾನುಳ್ಳವರ ಮನೆತನ ನಾಟಕ ಹಾಗೂ ಡಿ. 20ರಂದು ಶ್ರೀ ಶಾಂಭವಿ ಭಜನಾ ನಾಟ್ಯ ಸಂಘದಿಂದ ರೈತ ನಕ್ಕರೆ ಜಗವೆಲ್ಲ ಸಕ್ಕರೆ ನಾಟಕ ಪ್ರದರ್ಶನಗೊಳ್ಳಲಿದೆ.ಪ್ರತಿ ವರ್ಷ ಎಳ್ಳ ಅಮಾವಾಸ್ಯೆಯಂದು ರಥೋತ್ಸವ ಜರುಗುತ್ತದೆ. ದೇವಾಲಯ ಚಕ್ರವರ್ತಿ ಮಹೇಶ್ವರ ದೇವಾಲಯ ೧೧೧೨ರಲ್ಲಿ ಸ್ಥಾಪನೆಯಾಗಿದೆ. ಯಜ್ಞಯಾಗಾದಿ ಮಾಡುವ ಅಗ್ಗಿಷ್ಟಿಕೆ ಹೆಸರು ರೂಪಾಂತರವಾಗಿ ಇಟ್ಟಿಗಿ, ಇಟಗಿ ಆಗಿದೆ. ಇಟಗಿ ಮಹಾದೇವ ದೇವಾಲಯವನ್ನು ಕಲ್ಯಾಣಿ ಚಾಲುಕ್ಯರ ೬ನೇ ವಿಕ್ರಮಾದಿತ್ಯನ ಪ್ರಧಾನ ದಂಡ ನಾಯಕ ನಿರ್ಮಿಸಿದ್ದಾನೆ. ಹಿಂದೆ ನಾಲ್ಕುನೂರು ಬ್ರಾಹ್ಮಣರಿದ್ದ ಅಗ್ರಹಾರವಾಗಿತ್ತು ಎಂಬ ಪ್ರತೀತಿ ಇದೆ.
ಕಲೆಗಳಲ್ಲಿ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಕೆತ್ತನೆಗಳಿಂದ ಈ ದೇವಾಲಯ ಕೂಡಿದೆ. ದೇವಾಲಯದ ಹಿಂದೆ ಕಿಲ್ಲೆದಬಾವಿ ಇದ್ದು ಮಹಾದೇವ ದೇವಾಲಯ ತಿರುವು ಆಗಿಸಿದರೆ ಈ ಬಾವಿ ದೇವಾಲಯವನ್ನು ಹಿಡಿಯುತ್ತದೆ. ಈಶ್ವರನ ಪೂಜೆಗೆ ಮಜ್ಜನ ನೀರು ಇಲ್ಲಿಂದ ತರಲಾಗುತ್ತಿತ್ತು. ಈ ಮಹಾದೇವ ದೇವಾಲಯ ನಿರ್ಮಾಣ ಕುರಿತು ವಿವರವಾಗಿ ಸರಸ್ವತಿ ಗುಡಿಯಲ್ಲಿರುವ ಶಾಸನದಲ್ಲಿ ಹೇಳಲಾಗಿದೆ.ಯುಗಾದಿ ದಿನ ಸೂರ್ಯ ರಶ್ಮಿಗಳು ನೇರವಾಗಿ ಗರ್ಭಗುಡಿ ಪ್ರಾಂಗಣಕ್ಕೆ ಬಿದ್ದು ಅವುಗಳ ಪ್ರತಿಬಿಂಬ ಮಹೇಶ್ವರ ದೇವರ ವಿಗ್ರಹದ ಮೇಲಿರುತ್ತವೆ. ಏಷ್ಯಾದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಪುಷ್ಕರಣೆಗೆ ಇಟಗಿ ಪುಷ್ಕರಣೆ ಹೆಸರು ಪಡೆದಿದೆ.
ಕ್ರಿಶ ೧೧೧೨ರಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರೆ ಇದಕ್ಕಿಂತ ೪ ವರ್ಷ ಆನಂತರ ಬೇಲೂರು ಚೆನ್ನಕೇಶವ ದೇವಾಲಯ ನಿರ್ಮಾಣಗೊಂಡಿದೆ. ಇಟಗಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕೆತ್ತಿ ನಿಲ್ಲಿಸಿದ ಶಿಲಾ ಬಾಲಿಕೆಯರನ್ನು ದೊಡ್ಡದಾಗಿ ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಕೆತ್ತಲಾಗಿದೆ. ಮಲ್ಲೋಜ, ದಾಸೋಜ, ಬಮ್ಮೋಜ ಎಂಬ ಶಿಲ್ಪಿಗಳು ಕೆತ್ತಿದ್ದು ಬೇಲೂರಿಗೂ ಹೋಗಿ ಆ ದೇವಾಲಯ ನಿರ್ಮಿಸಿದರೆಂದು ಶಾಸನಗಳಿಂದ ತಿಳಿದು ಬರುತ್ತದೆ.ದೇವಸ್ಥಾನದಲ್ಲಿರುವ ೬೦ ಕಂಬಗಳ ಕೆತ್ತನೆ ಒಂದಕ್ಕೊಂದು ಭಿನ್ನವಾಗಿವೆ. ನೋಡಲು ಒಂದೇ ನೋಟದಂತೆ ಕಂಡರೂ ಒಂದು ಕಂಬ ಇನ್ನೊಂದು ಕಲೆಯನ್ನು ಹೋಲುವುದಿಲ್ಲ. ಇಟಗಿ ಮಹಾದೇವ ದೇವಾಲಯ ಸುಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿಯ ಕಲಾಕೆತ್ತನೆ ಇಡೀ ವಿಶ್ವಕ್ಕೆ ಮಾದರಿ. ಅಲ್ಲದೆ ಮಹಾದೇವ ದೇವಾಲಯಕ್ಕೆ ಭಕ್ತರು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಸರ್ಕಾರ ಮೊದಲು ಇಟಗಿ ಉತ್ಸವ ಆಚರಣೆ ಮಾಡುತ್ತಿತ್ತು. ನಾಗರಿಕ ವೇದಿಕೆಯಿಂದ ಸತತವಾಗಿ ಇಟಗಿ ಉತ್ಸವ ಮಾಡುತ್ತಿದ್ದಾರೆ.
ಇಟಗಿ ಮಹಾದೇವ ದೇವಾಲಯಕ್ಕೆ ತನ್ನದೆ ಆದ ಇತಿಹಾಸ ಇದೆ. ಮಹಾದೇವ ದೇವನ ರಥೋತ್ಸವ ಸಹ ಅಪಾರ ಭಕ್ತವೃಂದದ ಮಧ್ಯ ಜರುಗುತ್ತದೆ. ಇಟಗಿ ದೇವಾಲಯ ಕಲಾ ಕೆತ್ತನೆಯಿಂದ ಕಲಾತ್ಮಕವಾಗಿ ಕೂಡಿದೆ. ಇಟಗಿ ಮಹಾದೇವ ದೇವಾಲಯ ನೋಡುವುದು ಸಹ ಒಂದು ಸೌಭಾಗ್ಯ ಎಂದು ಬಿಜೆಪಿಯ ಜಿಲ್ಲಾ ಮಾಜಿ ಅಧ್ಯಕ್ಷ ನವೀನ ಗುಳಗಣ್ಣವರ ತಿಳಿಸಿದ್ದಾರೆ.