ತಾಲೂಕಿನ ಗುಜ್ಜನಡು, ವಿ.ಎಚ್.ಪಾಳ್ಯ, ಎ.ಎ. ಪಾಳ್ಯ ಚಿನ್ನಮ್ಮನಹಳ್ಳಿ ಗ್ರಾಮಸ್ಥರು ಹಾಗೂ ಕೈವಾರಸ್ಥರ ಸಮ್ಮುಖದಲ್ಲಿ ಶನಿವಾರ ಶ್ರೀ ಕ್ಷೇತ್ರ ಗುಜ್ಜನಡು ಶ್ರೀ ವೀರಾಂಜನೇಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿಯ ನೂತನ ದೇವಸ್ಥಾನ ನಿರ್ಮಾಣ ಹಾಗೂ ಜೀರ್ಣೋದ್ದಾರ ಕಾರ್ಯ ವೇಗದ ಸಿದ್ಧತೆ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಗುಜ್ಜನಡು, ವಿ.ಎಚ್.ಪಾಳ್ಯ, ಎ.ಎ. ಪಾಳ್ಯ ಚಿನ್ನಮ್ಮನಹಳ್ಳಿ ಗ್ರಾಮಸ್ಥರು ಹಾಗೂ ಕೈವಾರಸ್ಥರ ಸಮ್ಮುಖದಲ್ಲಿ ಶನಿವಾರ ಶ್ರೀ ಕ್ಷೇತ್ರ ಗುಜ್ಜನಡು ಶ್ರೀ ವೀರಾಂಜನೇಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿಯ ನೂತನ ದೇವಸ್ಥಾನ ನಿರ್ಮಾಣ ಹಾಗೂ ಜೀರ್ಣೋದ್ದಾರ ಕಾರ್ಯ ವೇಗದ ಸಿದ್ಧತೆ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನಲೆಯ ಶ್ರೀ ವೀರಾಂಜನೇಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ ತಾಲೂಕಿನ ಗುಜ್ಜನಡು ಗ್ರಾಮದಲ್ಲಿ ನೆಲೆಯಾಗಿದ್ದು, ಈ ದೇವಸ್ಥಾನಕ್ಕೆ ಸಾವಿರಾರು ಮಂದಿ ಭಕ್ತರಿದ್ದಾರೆ. ಗ್ರಾಮಕ್ಕೆ ಒಳಿತಾಗುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನ ಜೀರ್ಣೋದ್ದಾರ ಹಾಗೂ ಸುಸಜ್ಜಿತ ನೂತನ ದೇವಸ್ಥಾನ, ಸಮುದಾಯಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಒಂದು ವರ್ಷದೊಳಗೆ ಸುಮಾರು 15ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶ್ರೀ ವೀರಾಂಜನೇಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ನಿಯಮನುಸಾರ ಜೆಸಿಬಿ ಹಾಗೂ ಟ್ರಾಕ್ಟರ್‌ಗಳ ಮೂಲಕ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಹಳೇ ಕಟ್ಟಡ ನೆಲಸಮ ಮಾಡಿದ್ದು, ಸ್ವಾಮಿಯ ನೂತನ ವಿಗ್ರಹ ಹಾಗೂ ಶಿಲಾಸ್ತಂಭ ಮತ್ತು ಗರ್ಭಗುಡಿ ಹಾಗೂ ಗೋಪುರ ನಿರ್ಮಾಣಕ್ಕೆ ನಕ್ಷೆ ಸಿದ್ದಪಡಿಸಲಾಗಿದೆ. ಭಕ್ತ ದಾನಿಗಳಿಂದ ಸಂಗ್ರಹವಾದ ಹಣದಲ್ಲಿ ದೇವಸ್ಥಾನ ನಿರ್ಮಾಣದ ಕಾರ್ಯ ಕೈಗೊಂಡಿದ್ದು, ಲಕ್ಷಾಂತರ ರುಗಳ ದೇಣಿಗೆ ನೀಡಲು ದಾನಿಗಳು ಸಜ್ಜಾಗಿದ್ದಾರೆ. ಈಗಾಗಲೇ ಅನೇಕ ಮಂದಿ ಭಕ್ತರು ದೇಣಿಯನ್ನು ಖಾತೆಗೆ ಜಮಾ ಮಾಡುತ್ತಿದ್ದು, ಗ್ರಾಮಸ್ಥರ ತೀರ್ಮಾನದಂತೆ ಇದೇ ತಿಂಗಳು ಜ.21ಕ್ಕೆ ಸ್ವಾಮೀಜಿ ಹಾಗೂ ಗಣ್ಯರನ್ನು ಆಹ್ವಾನಿಸುವ ಮೂಲಕ ವಿಶಾಲವಾದ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಲು ತೀರ್ಮಾನ ಕೈಗೊಂಡರು.ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣದ ರೂಪರೇಷೆ ಸಿದ್ಧತೆ ಸಭೆಯಲ್ಲಿ ದೇವಸ್ಥಾನ ಸಮಿತಿಯ ಹೈಕೋರ್ಟ್ ವಕೀಲರಾದ ಗುಜ್ಜನಡು ಹನುಮಂತರಾಯಪ್ಪ, ಸೋಲಾರ್ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಚಿನ್ನಮ್ಮನಹಳ್ಳಿಯ ಬಲರಾಮ್, ಖ್ಯಾತ ಮಕ್ಕಳ ವೈದ್ಯರಾದ ಡಾ.ಕಿರಣ್, ಮೊಟೆ ಹನುಮಂತರಾಯಪ್ಪ, ಗೊಂಚಿಗಾರ ದಾಸಪ್ಪ, ರಾಮಣ್ಣ, ಎಚ್.ವಿ.ಹನುಮಂತರಾಯಪ್ಪ, ಜಿ.ಆರ್,ಭೀಮಣ್ಣ, ಗೋವಿಂದರಾಜು, ನರಸೇಗೌಡ ಹಾಗೂ ಪ್ರಧಾನ ಅರ್ಚಕ ಸುದರ್ಶನ್ ಸ್ವಾಮಿ, ಸಂದೀಪ್ ಕುಮಾರ್ ಹಾಗೂ ಇತರೆ ಅನೇಕ ಮಂದಿ ಸುತ್ತಮುತ್ತ ಗ್ರಾಮಗಳ ಮುಖಂಡರು ಇದ್ದರು. ವೀರಾಂಜನೇಯ ಹಾಗೂ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ನೂತನ ವಿಗ್ರಹ ನಿರ್ಮಾಣಕ್ಕೆ ಶಿಲ್ಪಿಗೆ ಚೆಕ್ ವಿತರಿಸಲಾಯಿತು.