ದೇವಾಲಯಗಳು ಐಕ್ಯತೆ, ಸಾಮರಸ್ಯದ ಸಂಕೇತ

| Published : Dec 13 2023, 01:00 AM IST

ಸಾರಾಂಶ

ದೇವಾಲಯಗಳು ಐಕ್ಯತೆ ಹಾಗೂ ಸಾಮರಸ್ಯದ ಸಂಕೇತವಾಗಿವೆ. ಆದರೆ ಅಂಧಶ್ರದ್ಧೆ ಹಾಗೂ ಸ್ವಾರ್ಥ ಸಾಧನೆಗೆ ಇಳಿದ ಜನರಿಂದ ಧರ್ಮಗಳ ಅನುಯಾಯಿಗಳನ್ನು ದ್ವೇಷಿಸುವಷ್ಟರ ಮಟ್ಟಕ್ಕೆ ತಲುಪಿದ್ದು ನಮಗರಿವಿಲ್ಲದಂತೆ ಪ್ರಸ್ತುತ ಸಮಾಜ ವಿಘಟನೆಯತ್ತ ಸಾಗಿದೆ ಎಂದು ಕೂಡಲದ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಶ್ರೀ ಕಳವಳ ವ್ಯಕ್ತಪಡಿಸಿದರು.

ಬ್ಯಾಡಗಿ: ದೇವಾಲಯಗಳು ಐಕ್ಯತೆ ಹಾಗೂ ಸಾಮರಸ್ಯದ ಸಂಕೇತವಾಗಿವೆ. ಆದರೆ ಅಂಧಶ್ರದ್ಧೆ ಹಾಗೂ ಸ್ವಾರ್ಥ ಸಾಧನೆಗೆ ಇಳಿದ ಜನರಿಂದ ಧರ್ಮಗಳ ಅನುಯಾಯಿಗಳನ್ನು ದ್ವೇಷಿಸುವಷ್ಟರ ಮಟ್ಟಕ್ಕೆ ತಲುಪಿದ್ದು ನಮಗರಿವಿಲ್ಲದಂತೆ ಪ್ರಸ್ತುತ ಸಮಾಜ ವಿಘಟನೆಯತ್ತ ಸಾಗಿದೆ ಎಂದು ಕೂಡಲದ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಶ್ರೀ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ನೆಹರುನಗರದ ದಾನಮ್ಮದೇವಿ ದೇವಸ್ಥಾನದ 12ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಚೊಚ್ಚಲ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾರಥೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಪಂಚದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿಭಿನ್ನ ಧರ್ಮಗಳಿವೆ. ಆರ್ಥಿಕವಾಗಿ ನಾವು ಎಷ್ಟೇ ಪ್ರಬಲವಾಗಿದ್ದರೂ ಸಹ ಸಾರ್ಥಕ ಬದುಕಿಗೆ ನಾವು ನಡೆಸುವ ಧಾರ್ಮಿಕಾಚರಣೆಗಳೇ ಅಂತಿಮ ಸತ್ಯವಾಗಿದೆ. ಆದರೆ ವಿದ್ವಾಂಸರ ನಡುವೆ ಭಿನ್ನಮತವಿರುವ ಕಾರಣಕ್ಕೆ ಒಂದು ಧರ್ಮವನ್ನು ಹೀಗೆಯೇ ಎಂದು ನಿರೂಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.

ಒಂದು ನಿರ್ದಿಷ್ಟ ಧರ್ಮದೊಂದಿಗೆ ತನ್ನನ್ನು ತಾನು ಗುರ್ತಿಸಿಕೊಳ್ಳುವ ಮೂಲಕ ನಿರಂತರ ಸಂಪರ್ಕದೊಂದಿಗೆ ಮನುಷ್ಯ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಮೂಲಧರ್ಮಗಳಲ್ಲಿಯೇ ಮೂರ‍್ನಾಲ್ಕು ಪಂಗಡಗಳಾಗಿ ಅವರವರ ಭಾವನೆಗೆ ತಕ್ಕಂತೆ ಧರ್ಮವನ್ನು ತಿರುಚುವ ಕೆಲವಾಗುತ್ತಿದ್ದು, ಇನ್ನೊಂದು ಧರ್ಮದ ಬಗ್ಗೆ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಇಂತಹ ದುರುದ್ದೇಶದ ಧಾರ್ಮಿಕ ಆಚರಣೆಗಳಿಗೆ ಸಮಾಜದ ಜನರು ಒಗ್ಗಟ್ಟಾಗಿ ಕಡಿವಾಣ ಹಾಕಬೇಕಾಗಿದೆ ಎಂದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೇ ಧರ್ಮವಾಗಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಧಾರ್ಮಿಕ ಆಚರಣೆ ಹಾಗೂ ಧರ್ಮೋಪದೇಶಗಳನ್ನು ನಿರಂತರವಾಗಿ ನಡೆಸಬೇಕಾಗುತ್ತದೆ. ಅದರೆ ಇತ್ತೀಚೆಗೆ ಧಾರ್ಮಿಕ ಹಿಂಸಾಚಾರಗಳು ಯಥೇಚ್ಚವಾಗಿ ನಡೆಯುತ್ತಿರುವುದು ದುರಂತದ ಸಂಗತಿ. ಧರ್ಮದ ಆಚರಣೆಗಳನ್ನು ಪ್ರಶ್ನಿಸಿ ನ್ಯಾಯಾಲಯಗಳ ಕದ ತಟ್ಟಲಾಗುತ್ತಿದೆ. ಇಂತಹವುಗಳಿಗೆ ಮನ್ನಣೆ ಸಿಗದಂತೆ ನೋಡಿಕೊಳ್ಳುವುದು ಹೆಚ್ಚು ಸೂಕ್ತವೆಂದರು.

ಮಹಾರಥೋತ್ಸವ ಮತ್ತು ಕಾರ್ತಿಕೋತ್ಸವ: ಪ್ರತಿ ವರ್ಷದಂತೆ ಛಟ್ಟಿ ಅಮಾವಾಸ್ಯೆಯಂದು ಬೆಳಗ್ಗೆ 6 ರಿಂದ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಜಾತ್ರಾ ಮಹೋತ್ಸವದ ನಿಮಿತ್ತ ದೇವಿಯ ಮೂರ್ತಿಗೆ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ನೇರವೇರಿದವು. ಸಂಜೆ ಮಹಿಳೆಯರೇ ತೇರು ಎಳೆಯುವ ಮೂಲಕ ಮಹಾರಥೋತ್ಸವ ನಡೆಸಲಾಯಿತು. ಬಳಿಕ ನಡೆದ ಕಾರ್ತಿಕೋತ್ಸವ ಹೊಸಕಳೆ ತಂದಿತು. ಈ ವೇಳೆ ದೇವಸ್ಥಾನ ಸಮಿತಿಯ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.

ಮನಸೂರೆಗೊಂಡ ವಿಶೇಷ ಅಲಂಕಾರ: ಜಾತ್ರಾ ಮಹೋತ್ಸವದ ಅಂಗವಾಗಿ ಮಂಜುಳ ಸಿದ್ಧಲಿಂಗಪ್ಪ ಕೆಂಬಿ ಅವರು ನೀಡಿದ ಲಕ್ಷಕ್ಕೂ ಹೆಚ್ಚು ಮುತ್ತಿನ ಮಣಿಗಳಿಂದ ದಾನಮ್ಮದೇವಿಗೆ ಮಾಡಿದ್ದ ವಿಶೇಷ ಅಲಂಕಾರ ಜನರ ಮನಸೂರೆಗೊಳ್ಳುವಂತೆ ಮಾಡಿತು.

ಗರ್ಭಿಣಿಯರಿಗೆ ಸೀಮಂತ ಭಾವೈಕ್ಯತೆಗೆ ಸಾಕ್ಷಿ: ಮಹಿಳೆಯರಿಗೆ ಉಡಿ ತುಂಬುವುದು ವಿಶಿಷ್ಟ ಸಂಪ್ರದಾಯಗಳಲ್ಲಿ ಒಂದಾಗಿದೆ ದೇವಸ್ಥಾನದ ಆವರಣದಲ್ಲಿ ಚೊಚ್ಚಲ ಮಹಿಳೆಯರಿಗೆ ಸೀಮಂತ ಕರ‍್ಯಕ್ರಮ ಜರುಗಿತು, ಮುಸ್ಲಿಂ ಮಹಿಳೆಯರೂ ಸಹ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು.