ಚಿಕ್ಕಮಗಳೂರುಧರ್ಮ ಮತ್ತು ಸಂಸ್ಕೃತಿ ಪುರಾತನ ಪರಂಪರೆ ಉಳಿಸಿ ಬೆಳೆಸುವಲ್ಲಿ ದೇವಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ. ಮನುಷ್ಯನ ಅಂತರಂಗದ ಆತ್ಮಸಾಕ್ಷಿ ಜಾಗೃತಗೊಳಿಸಿ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಅರಿಯಲು ದೇವಾಲಯಗಳು ಪ್ರೇರಣೆ ನೀಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.
ಮಳಲೂರಿನಲ್ಲಿ ನಾಡದೇವತೆ ಶ್ರೀ ಮಳಲೂರಮ್ಮನ ನೂತನ ದೇವಾಲಯ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಧರ್ಮ ಮತ್ತು ಸಂಸ್ಕೃತಿ ಪುರಾತನ ಪರಂಪರೆ ಉಳಿಸಿ ಬೆಳೆಸುವಲ್ಲಿ ದೇವಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ. ಮನುಷ್ಯನ ಅಂತರಂಗದ ಆತ್ಮಸಾಕ್ಷಿ ಜಾಗೃತಗೊಳಿಸಿ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಅರಿಯಲು ದೇವಾಲಯಗಳು ಪ್ರೇರಣೆ ನೀಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರು ತಾಲೂಕಿನ ಮಳಲೂರಿನಲ್ಲಿ ನಾಡದೇವತೆ ಶ್ರೀ ಮಳಲೂರಮ್ಮನ ನೂತನ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿ ಮಳಲೂರಮ್ಮ, ಚಿಕ್ಕಮ್ಮ, ದೊಡ್ಡಮ್ಮ ಹಾಗೂ ಕಂಬಾಳಮ್ಮನವರ ಹೆಸರಿನಲ್ಲಿ ಪೂಜಿಸಲ್ಪಡುವ ದೇವತೆಯನ್ನು ಈ ಭಾಗದ ಜನರು ನಾಡದೇವತೆಯಾಗಿ ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಹರಕೆ ಹೊತ್ತು ಪಾಲಿಸುವ ಸಂಪ್ರದಾಯ ಇಲ್ಲಿ ನಡೆದುಕೊಂಡು ಬಂದಿದೆ ಎಂದರು.‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಂಸ್ಕೃತ ಸೂಕ್ತಿಯಂತೆ ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮವೆಂದರೆ ಧಾರಣೆಗೆ ಯೋಗ್ಯ. ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವುದು. ಯಾರಿಗೂ ಕೆಡುಕು ಬಯಸದೆ ಬದುಕು ವುದು ಹಾಗೂ ಎಲ್ಲ ಜೀವಿಗಳಿಗೂ ಒಳಿತನ್ನು ಬಯಸುವುದೇ ಧರ್ಮದ ಸಾರ ಎಂದು ಹೇಳಿದರು.
ಬಸವಣ್ಣನವರ ವಚನ ಉಲ್ಲೇಖಿಸಿ ಅಂತರಂಗ ಮತ್ತು ಬಹಿರಂಗ ಶುದ್ಧಿ ಕಾಪಾಡಿಕೊಂಡು ಬದುಕಬೇಕು. ಪರನಿಂದನೆ ಮಾಡದೆ, ಸುಳ್ಳು ಹೇಳದೆ, ಇತರರಿಗೆ ನೋವುಂಟು ಮಾಡದೆ, ಒಳ್ಳೆಯ ಕಾರ್ಯ ಮಾಡುತ್ತಾ ಬದುಕುವುದೇ ಧರ್ಮದ ಸರಳ ಅರ್ಥ. ಇಂತಹ ಮೌಲ್ಯವನ್ನು ಜೀವನದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.ದೇವಾಲಯಗಳು ಮನುಷ್ಯನ ಮನಸ್ಸು ಆಕರ್ಷಣೆಗಳ ಕಡೆಗೆ ಸಾಗುವಾಗ ಒಳಗಿನ ಆತ್ಮಸಾಕ್ಷಿಯನ್ನು ಜಾಗೃತ ಗೊಳಿಸುತ್ತವೆ. ಯಾವುದು ಒಳ್ಳೆಯದು, ಕೆಟ್ಟದ್ದು ಎಂಬುದನ್ನು ನೆನಪಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತವೆ. ಹೀಗಾಗಿ ಪುರಾತನ ನಂಬಿಕೆ ಮತ್ತು ಧಾರ್ಮಿಕ ಪರಂಪರೆ ಉಳಿಸಿ ಬೆಳೆಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಮಳಲೂರಮ್ಮನ ನೂತನ ದೇವಾಲಯವನ್ನು ಸುಮಾರು ₹3.5 ಕೋಟಿ ವೆಚ್ಚದಲ್ಲಿ ಸಂಪೂರ್ಣ ಕಲ್ಲಿನಿಂದ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ಭಕ್ತರು ಮತ್ತು ಗ್ರಾಮಸ್ಥರ ಸಹಕಾರದಿಂದ ಈ ಸಂಕಲ್ಪ ಸಾಕಾರಗೊಳ್ಳಲಿ ಎಂದು ಹಾರೈಸಿದ ಅವರು, ಈ ಕಾರ್ಯಕ್ಕೆ ತನು, ಮನ ಮತ್ತು ಧನದ ಮೂಲಕ ಸಹಕಾರ ನೀಡುವುದಾಗಿ ತಿಳಿಸಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ನಾಡಪಟೇಲರಾದ ಪರಮೇಶ್, ಮುಖಂಡರಾದ ಕೃಷ್ಣೇಗೌಡರು, ಶರಣ್, ಚಂದ್ರೇಗೌಡರು, ಕೆ.ಬಿ. ಅನಂತೇಗೌಡ ಸೇರಿದಂತೆ ಮಳಲೂರು ಮತ್ತು ಜಾವಣಿಗೆ ನಾಡಿನ ಗ್ರಾಮಸ್ಥರು ಉಪಸ್ಥಿತರಿದ್ದರು.