ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಕೊಳ್ಳೇಗಾಲ ತಾಲೂಕಿನ ಶ್ರೀ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಹೊಸಮಠ ಹಳೇಮಠ, ದೇವಾಲಯದ ಮುಂಭಾಗ, ಹಿಂಭಾಗ ಸುತ್ತಮುತ್ತಲಿನ ಪರಿಸರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ, ಹೊರವಲಯ ಮತ್ತು ಸಾರ್ವಜನಿಕ ಸ್ಥಳ, ಧಾರ್ಮಿಕ ಸಮಾವೇಶದಲ್ಲಿ ಯಾವುದೇ ಪ್ರಾಣಿಗಳ ಬಲಿ ನಡೆಯದಂತೆ ಹಾಗೂ ಪ್ರಾಣಿ ಅಂಗಾಗಗಳ ನೈವೇದ್ಯ ಸಲ್ಲಿಕೆ/ಪ್ರದರ್ಶನ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಜರುಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಸಂಘ ಹಾಗೂ ಬಸವಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಸರ್ಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೫೯ರ ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ ಹಾಗೂ ೧೯೬೩ ನಿಯಮಗಳು ಮತ್ತು ೧೯೭೫ ರ ತಿದ್ದುಪಡಿ ಕಾಯ್ದೆಯ ಪ್ರಕಾರ ಮತ್ತು ರಾಜ್ಯ ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ/ ವ್ಯಾಪಕ ಕ್ರಮ ಕೈಗೊಳ್ಳಬೇಕು, ಎಂದರು. ಈಗಾಗಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹ ಮತ್ತು ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ, ವಿಧಾನಸೌಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಮತ್ತು ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ ಎಂದರು, ಮನವಿಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ, ಚಾಮರಾಜನಗರ ಜಿಲ್ಲಾಡಳಿ ಮತ್ತು ಪೊಲೀಸ್ ಇಲಾಖೆ ಪ್ರಾಣಿಬಲಿ ತಡೆಗೆ ವ್ಯಾಪಕ ಪ್ರಚಾರ ಮತ್ತು ಬಂದೋಬಸ್ತ್ ಮಾಡಿಕೊಂಡಿದ್ದು ತುಂಬಾ ಅಭಿನಂದನಾರ್ಹ. ಈ ದಿಸೆಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಪ್ರಾಣಿಬಲಿಯು ಅನಾಗರೀಕವು ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕ ಆಗಿದ್ದು ಇದು ಕಾನೂನು ಮತ್ತು ಧರ್ಮ ಹಾಗೂ ದೈವ ವಿರೋಧಿ ಆಗಿದೆ. ಆದ್ದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಭಕ್ತರಲ್ಲಿ ವಿನಂತಿಸಿದರು.ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯವಾಗಬೇಕು, ಜಾತ್ರಾ ಪರಿಸರಗಳು ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗಬಾರದು, ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ ಮತ್ತು ಮದ್ಯ ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು, ಅಹಿಂಸೆ ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ, ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು, ಸದ್ಭಕ್ತಿ, ಸುಜ್ಞಾನ ಮತ್ತು ಸದಾಚಾರಗಳ ತ್ರಿವೇಣಿ ಸಂಗಮವಾಗಬೇಕು ಎಂದರು. ಈ ಹಿನ್ನೆಲೆಯಲ್ಲಿ ಭಕ್ತಾದಿಗಳು, ಸಮಾಜ, ದೇವಾಲಯದ ಆಡಳಿತ ಮಂಡಳಿ ಹಾಗೂ ಸರ್ಕಾರ ಮತ್ತು ಸುದ್ದಿ ಮಾಧ್ಯಮಗಳು ಕಾರ್ಯನಿರ್ವಹಿಸಿ ಜಾತ್ರೆಯನ್ನು ಪ್ರಾಣಿಬಲಿ ಮುಕ್ತ, ರಕ್ತಮುಕ್ತ ಹಾಗೂ ಜೀವಹಿಂಸಾ ಮುಕ್ತ ಜಾತ್ರೆಯನ್ನಾಗಿ ರೂಪಿಸಬೇಕಾಗಿ ಎಂದು ಮನವಿ ಮಾಡಿದರು.
ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆ:ಈ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲು ಇಂದಿನಿಂದ ಒಂದು ವಾರ ಕಾಲ ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾಗೂ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರಾ ಪರಿಸರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಅಹಿಂಸಾ ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು.