ನಾಗಮಲೆಗೆ ಚಾರಣ ತಾತ್ಕಾಲಿಕ ನಿಷೇಧ

| Published : Feb 21 2024, 02:01 AM IST

ಸಾರಾಂಶ

ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವುದನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧ ಮಾಡಿರುವುದೇ ಹೊರತೂ ಇದು ಶಾಶ್ವತವಲ್ಲ ಎಂದು‌ ವಲಯ ಅರಣ್ಯಾಧಿಕಾರಿ‌‌ ಭಾರತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವುದನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧ ಮಾಡಿರುವುದೇ ಹೊರತೂ ಇದು ಶಾಶ್ವತವಲ್ಲ ಎಂದು‌ ವಲಯ ಅರಣ್ಯಾಧಿಕಾರಿ‌‌ ಭಾರತಿ ತಿಳಿಸಿದರು.

ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ‌ ಇಂಡಿಗನತ್ತ ಗ್ರಾಮದಲ್ಲಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿದ್ದ ಸ್ಥಳೀಯ ಮುಖಂಡರು ಹಾಗೂ ಜೀಪ್ ಚಾಲಕರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಚಾರಣ ಸ್ಥಳಗಳಲ್ಲಿ ಟ್ರಕ್ಕಿಂಗ್ ಹೋಗುವವರ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಈ ದಿಸೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವವರನ್ನು ತಾತ್ಕಾಲಿಕವಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆಯೇ ಹೊರತು ಇದೂ ಶಾಶ್ವತವಲ್ಲ. ಅರಣ್ಯ ಇಲಾಖೆಯ ಜೊತೆ ಸ್ಥಳೀಯರು ಪರಿಸರ ಉಳಿಸುವ ದಿಸೆಯಲ್ಲಿ‌ ಕೈಜೋಡಿಸಿ ನಿಮ್ಮ‌ ಜೀವನಕ್ಕೆ‌‌ ತೊಂದರೆ ಕೊಡುವ ಉದ್ದೇಶ‌‌‌ವಿಲ್ಲ. ಇಲಾಖೆಯಿಂದ ತಮ್ಮ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ‌ ಸ್ಥಳೀಯರು ಸೇರಿದಂತೆ ಜೀಪ್ ಚಾಲಕರು ಮಾತನಾಡಿ‌ ಕಾಡಂಚಿನ ಭಾಗದಲ್ಲಿ‌ ವಾಸಿಸುವ ನಾವು ‌ಕೆಲ ವಿಷಯಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆಯಿಂದ ಸಾಕಷ್ಟು ಭಾರಿ ಮೋಸ ಹೋಗಿದ್ದೇವೆ.ಇಂದು ತಾತ್ಕಾಲಿಕ‌‌‌ ಎಂದು ‌ಹೇಳಿ ಅದೇ ನಿಯಮ ‌ಮುಂದೆ ಎಲ್ಲಿ ಶಾಶ್ವತವಾಗಿ ಬಿಡುತ್ತದೆಯೋ ಎಂಬ ಆತಂಕದಲ್ಲಿದ್ದೇವೆ. ಇಲ್ಲಿನ ಜನತೆ ನಾಗಮಲೆಗೆ ಬರುವ ಭಕ್ತರಿಗೆ ಮಜ್ಜಿಗೆ ಪಾನಕ ಮಾರಾಟ ಮಾಡುವ ಮಹಿಳೆಯರು ಅದರಿಂದ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಜಾನುವಾರುಗಳನ್ನು ಮೇಯಿಸುತ್ತಿದ್ದ ಅವರು ಇಂದು ಜೀಪ್ ಚಾಲಕರಾಗಿ ತಮ್ಮ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ನೋವನ್ನು‌ ಅರಣ್ಯಾಧಿಕಾರಿಗಳ ಮುಂದೆ ಹೇಳಿಕೊಂಡರು.