ಕೊಡಸಳ್ಳಿ: ತಾತ್ಕಾಲಿಕ ಸೇತುವೆ, ಬೋಟ್‌ಗಳಲ್ಲಿ ಸಂಚರಿಸಲು ಅವಕಾಶ

| Published : Jul 04 2025, 11:46 PM IST

ಕೊಡಸಳ್ಳಿ: ತಾತ್ಕಾಲಿಕ ಸೇತುವೆ, ಬೋಟ್‌ಗಳಲ್ಲಿ ಸಂಚರಿಸಲು ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಕದ್ರಾದಿಂದ ಕೊಡಸಳ್ಳಿಗೆ ತೆರಳುವ ರಸ್ತೆಯಲ್ಲಿ ಬಾಳೆಮನೆ ಎಂಬಲ್ಲಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರ ನಿರ್ಬಂಧಿಸಲಾಗಿದ್ದು, ಗುಡ್ಡ ಕುಸಿತದ ಕೆಳಭಾಗದಲ್ಲಿ ತಾತ್ಕಾಲಿಕವಾಗಿ ಮರದ ದಿಮ್ಮಿ ಬಳಸಿ ಕಾಲ್ನಿಡಿಗೆಯಲ್ಲಿ ಸಾಗಲು ಅನುಕೂಲ ಕಲ್ಪಿಸಿದ್ದು, ಈ ಸೇತುವೆಯ ಮೇಲೆ ಶುಕ್ರವಾರ ಕೆಪಿಸಿಯ 5 ಸಿಬ್ಬಂದಿ ಹಾಗೂ ವಿದ್ಯಾರ್ಥಿನಿ ಸಂಚರಿಸಿದ್ದಾರೆ.

ಕಾರವಾರ: ಕದ್ರಾದಿಂದ ಕೊಡಸಳ್ಳಿಗೆ ತೆರಳುವ ರಸ್ತೆಯಲ್ಲಿ ಬಾಳೆಮನೆ ಎಂಬಲ್ಲಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರ ನಿರ್ಬಂಧಿಸಲಾಗಿದ್ದು, ಗುಡ್ಡ ಕುಸಿತದ ಕೆಳಭಾಗದಲ್ಲಿ ತಾತ್ಕಾಲಿಕವಾಗಿ ಮರದ ದಿಮ್ಮಿ ಬಳಸಿ ಕಾಲ್ನಿಡಿಗೆಯಲ್ಲಿ ಸಾಗಲು ಅನುಕೂಲ ಕಲ್ಪಿಸಿದ್ದು, ಈ ಸೇತುವೆಯ ಮೇಲೆ ಶುಕ್ರವಾರ ಕೆಪಿಸಿಯ 5 ಸಿಬ್ಬಂದಿ ಹಾಗೂ ವಿದ್ಯಾರ್ಥಿನಿ ಸಂಚರಿಸಿದ್ದಾರೆ.

ಗುಡ್ಡ ಕುಸಿತದ ಸ್ಥಳದಿಂದ ಬಾಳೆಮನೆ, ಸುಳಗೇರಿ ಕಿ.ಮೀ. ದೂರದಲ್ಲಿದೆ. ಈ ಊರಿನ ಜನತೆ ಹಾಗೂ ಕೆಪಿಸಿಯ ಕೊಡಸಳ್ಳಿ ಡ್ಯಾಂ ಅಧಿಕಾರಿ, ಸಿಬ್ಬಂದಿಗೆ ಸಂಚಾರಕ್ಕೆ ಇದೊಂದೆ ಮಾರ್ಗವಾಗಿದ್ದು, ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಕೆಳಭಾಗದಲ್ಲಿ ಕಾಳಿ ನದಿಗೆ ಹೊಂದಿಕೊಂಡಂತೆ ಮರದ ದಿಮ್ಮಿಗಳ ತಾತ್ಕಾಲಿಕ ಸೇತುವೆ ನಿರ್ಮಿಸಿ ಕಾಲ್ನಿಡಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಡ್ಡ ಕುಸಿತ ಸ್ಥಳದಿಂದ ಕೊಡಸಳ್ಳಿ ಡ್ಯಾಂ ಸುಮಾರು 20 ಕಿ.ಮೀ. ದೂರ ಇದೆ. ಕೆಪಿಸಿ ಸಿಬ್ಬಂದಿಗೆ ಬೋಟ್ ಮೂಲಕವೇ ಕರ್ತವ್ಯಕ್ಕೆ ಹಾಜರಾಗಲು ವ್ಯವಸ್ಥೆ ಮಾಡಲಾಗಿದೆ.

ಬಾಳೆಮನೆ ಬಳಿ ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು, ರಸ್ತೆಯ ಮೇಲೆ ಸುಮಾರು 30 ಅಡಿ ಅಗಲ ಹರಡಿರುವ ಮಣ್ಣಿನ ರಾಶಿ ತೆರವು ಮಾಡುವ ತನಕ ತಾತ್ಕಾಲಿಕ ಸೇತುವೆ, ಬೋಟ್‌ಗಳನ್ನು ಸಂಚಾರಕ್ಕೆ ಬಳಸಬೇಕಾಗಿದೆ. ಗುಡ್ಡ ಕುಸಿತದಿಂದ ಸುಳಗೇರಿ, ಬಾಳೆಮನೆ ಹಾಗೂ ಕೊಡಸಳ್ಳಿ ಡ್ಯಾಂ ಉದ್ಯೋಗಿಗಳು ತೊಂದರೆ ಎದುರಿಸುವಂತಾಗಿದೆ.

ಕೊಡಸಳ್ಳಿ ರಸ್ತೆ ಮೇಲೆ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ: ಡಿಸಿಕೊಡಸಳ್ಳಿ ರಸ್ತೆಯಲ್ಲಿ ಗುಡ್ಡ ಕುಸಿತವಾದ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಜಿಎಸ್‌ಐ ತಂಡ ಭೇಟಿ ನೀಡಿದ್ದು, ಗುಡ್ಡ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ರಸ್ತೆಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿದರೆ ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಸದ್ಯ ಮಣ್ಣು ತೆರವುಗೊಳಿಸದಿರಲು ತೀರ್ಮಾನಿಸಲಾಗಿದೆ. ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.ಗುಡ್ಡ ಕುಸಿತ ಪ್ರದೇಶದ ಮುಂದೆ ಮೂರು ಗ್ರಾಮಗಳಿದ್ದು 89 ಜನರು ವಾಸಿಸುತ್ತಿದ್ದಾರೆ. ಆ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅವರ ಅಹವಾಲು ಆಲಿಸಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಸಳ್ಳಿ ಡ್ಯಾಂನಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಪ್ರತಿ ದಿನ ಹೋಗಿ ಬರಬೇಕು. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಅವರ ಸಂಚಾರಕ್ಕೆ ಎರಡು ಬೋಟ್ ವ್ಯವಸ್ಥೆ ಮಾಡಲಾಗುವುದು. ಕದ್ರಾ ಹಿನ್ನೀರಿನ ಮೂಲಕ ಸಿಬ್ಬಂದಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.