ಸಾರಾಂಶ
ಹರಪನಹಳ್ಳಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕ ಸಂಚಾರ ಪೊಲೀಸ್ ಘಟಕ ಆರಂಭಿಸಿರುವುದಾಗಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಹೇಳಿದ್ದಾರೆ.
ಹರಪನಹಳ್ಳಿ: ಹರಪನಹಳ್ಳಿ ಪಟ್ಟಣದಲ್ಲಿ ಟ್ರಾಪಿಕ್ ಸಮಸ್ಯೆ ನಿವಾರಣೆಗೆ ತಾತ್ಕಾಲಿಕ ಸಂಚಾರ ಪೊಲೀಸ್ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಡಿವೈಎಸ್‌ಪಿ ವೆಂಕಟಪ್ಪನಾಯಕ ತಿಳಿಸಿದರು.
ಪಟ್ಟಣದ ಹಳೆಯ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ನೂತನ ತಾತ್ಕಾಲಿಕ ಸಂಚಾರ ಪೊಲೀಸ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಹರಪನಹಳ್ಳಿ ಪಟ್ಟಣದಲ್ಲಿ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ವಿಜಯನಗರ ಜಿಲ್ಲಾ ಎಸ್‌ಪಿಯವರು ಪಟ್ಟಣದಲ್ಲಿ ತಾತ್ಕಾಲಿಕ ಸಂಚಾರಿ ಪೊಲೀಸ್ ಘಟಕ ಸ್ಥಾಪಿಸಲು ಅನುಮತಿ ನೀಡಿದ್ದಾರೆ ಎಂದರು.ಈ ಸಂಚಾರಿ ಘಟಕದಲ್ಲಿ ಪಿಎಸ್‌ಐ ರುದ್ರಪ್ಪ ನೇತೃತ್ವದಲ್ಲಿ ಇಬ್ಬರು ಎಎಸ್‌ಐ, 12 ಸಿಬ್ಬಂದಿ ನಿಯೋಜಿಸಲಾಗಿದೆ. ಈ ಘಟಕವು ಬೆಳಗ್ಗೆ 8ರಿಂದ 1 ಗಂಟೆ, 1ರಿಂದ 4 ಗಂಟೆ ಹಾಗೂ 4ರಿಂದ 8 ಗಂಟೆ ವರೆಗೆ ಸರತಿ (ಪಾಳಿ) ಪ್ರಕಾರ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.ಐ.ಬಿ. ವೃತ್ತ, ಹರಿಹರ ವೃತ್ತ, ಕೊಟ್ಟೂರು ವೃತ್ತ ಮುಂತಾದ ಕಡೆಗಳಲ್ಲಿ ಟ್ರಾಪಿಕ್ ಸಮಸ್ಯೆ ತಲೆದೋರುತ್ತಿದ್ದು, ಈ ಸಮಸ್ಯೆ ನಿವಾರಿಸಲು ಈ ಘಟಕ ಸಹಕಾರಿಯಾಗಲಿದೆ. ಈ ಘಟಕಕ್ಕೆ ಸದ್ಯ ಎರಡು ದ್ವಿಚಕ್ರ ವಾಹನಗಳು ಹಾಗೂ ಕೆಲವೊಂದು ಸಾಮಗ್ರಿಗಳನ್ನು ನೀಡಲಾಗಿದೆ. ಜೀಪು ಸದ್ಯದಲ್ಲಿ ನೀಡಲಾಗುವುದು ಎಂದು ಅವರು ಹೇಳಿದರು.ಇತ್ತೀಚೆಗೆ ಪಟ್ಟಣದ ಆಟೋ ಡ್ರೆವರ್‌ಗಳ ಸಭೆ ನಡೆಸಿ ಟ್ರಾಪಿಕ್ ಬಗ್ಗೆ ಅವರಿಗೆ ಅರಿವು ಮೂಡಿಸಿದ್ದೇವೆ. ಆಟೋದಲ್ಲಿರುವ ಕರ್ಕಶ ಧ್ವನಿವರ್ಧಕಗಳನ್ನು ಎರಡು ದಿನದಲ್ಲಿ ತೆರವುಗೊಳಿಸಲು ಸೂಚಿಸಿದ್ದು, ಅವರು ಸಹ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.ರಾತ್ರಿ ಸಂದರ್ಭದಲ್ಲಿ ಕೇವಲ ಹತ್ತು ಆಟೋಗಳು ಮಾತ್ರ ಕಾರ್ಯನಿರ್ವಹಿಸಲು ಒಮ್ಮತವಾಗಿದೆ ಎಂದು ಹೇಳಿದ ಅವರು, ರಾತ್ರಿ ವೇಳೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಆಟೋ ಚಾಲಕರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್‌ಐ ಶಂಭುಲಿಂಗ ಸಿ. ಹಿರೇಮಠ, ಸಂಚಾರಿ ಘಟಕದ ಪಿಎಸ್‌ಐ ರುದ್ರಪ್ಪ ಹಾಗೂ ಪೋಲಿಸ್ ಸಿಬ್ಬಂಧಿ, ಗೃಹರಕ್ಷಕದಳ ಸಿಬ್ಬಂದಿ ಹಾಜರಿದ್ದರು.