ಇಂದಿನಿಂದ ಹತ್ತು ದಿನ ಇ-ಪೌತಿ ಆಂದೋಲನ: ದಿವ್ಯಪ್ರಭು

| Published : Jul 24 2025, 01:45 AM IST

ಸಾರಾಂಶ

ರಾಜ್ಯ ಕಂದಾಯ ಸಚಿವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶ ವಿಸ್ತರಿಸಲು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಪಹಣಿ ಪತ್ರಿಕೆಗಳಿಗೆ ಆಧಾರ ಜೋಡಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಕಾರ್ಯದಲ್ಲಿ ಈವರೆಗೂ ಶೇ. 87.33 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.

ಧಾರವಾಡ:

ಪಹಣಿಗಳಿಗೆ ಆಧಾರ ಜೋಡಣೆ ಸಂದರ್ಭದಲ್ಲಿ ಜಿಲ್ಲೆಯ ಸಾವಿರಾರು ಖಾತೆಗಳಲ್ಲಿ ವಾರಸುದಾರರ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಉಚಿತವಾಗಿ ಖಾತೆ ಮಾಡುವ ಉದ್ದೇಶದಿಂದ ಇ-ಪೌತಿ ಅಂದೋಲನವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ.

ಜು. 24 ರಿಂದ ಆಗಸ್ಟ್ 2ರ ವರೆಗೆ ಹತ್ತು ದಿನಗಳ ವಿಶೇಷ ಇ-ಪೌತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಕಂದಾಯ ಸಚಿವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶ ವಿಸ್ತರಿಸಲು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಪಹಣಿ ಪತ್ರಿಕೆಗಳಿಗೆ ಆಧಾರ ಜೋಡಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಕಾರ್ಯದಲ್ಲಿ ಈವರೆಗೂ ಶೇ. 87.33 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.

ವಿಶೇಷ ಇ-ಪೌತಿ ಆಂದೋಲನದ ಸಂದರ್ಭದಲ್ಲಿ ಪೌತಿ ಅಂತಾ ಗುರುತಿಸಲಾದ ಪಹಣಿ ಪತ್ರಿಕೆಗಳ ಇ-ಪೌತಿ ಕಾರ್ಯಕ್ಕೆ ಅವಶ್ಯಕ ದಾಖಲೆಗಳೊಂದಿಗೆ ಸಾರ್ವಜನಿಕರು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಉಚಿತವಾಗಿ ಖಾತೆ ಬದಲಾವಣೆ ಮಾಡಿಸಿಕೊಳ್ಳಬಹುದು.

ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ - 0836-2445508, ಧಾರವಾಡ ಉಪವಿಭಾಗಾಧಿಕಾರಿಗಳ ಕಾರ್ಯಾಲಯ - 0836-2233860, ಧಾರವಾಡ ತಹಸೀಲ್ದಾರರ ಕಾರ್ಯಾಲಯ -0836-2233822, ಅಳ್ನಾವರ ತಹಸೀಲ್ದಾರರ ಕಾರ್ಯಾಲಯ - 0836-2385544, ಹುಬ್ಬಳ್ಳಿ ನಗರ - 0836-2358035, ಹುಬ್ಬಳ್ಳಿ ಗ್ರಾಮೀಣ - 0836-2233844, ಕಲಘಟಗಿ - 08370-284535, ಕುಂದಗೋಳ - 08340-290239, ನವಲಗುಂದ - 08380-229240, ಅಣ್ಣಿಗೇರಿ - 8618442759ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.