ಡೋರಿಯಲ್ಲಿ ಹತ್ತು ದಿನಗಳ ಕಾಲ ಗ್ರಾಮ ದೇವಿ ಜಾತ್ರೆ

| Published : May 14 2025, 02:05 AM IST

ಸಾರಾಂಶ

ನವೀಕರಣಗೊಂಡ ಸುಂದರ ದೇವಸ್ಥಾನದ ಆವರಣದಲ್ಲಿ ದೇವಿಯರ ಪ್ರಾಣ ಪ್ರತಿಷ್ಟಾಪನೆ, ಗಣ ಹೋಮ, ನವಗ್ರಹ ಹೋಮ, ಮಹಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ಪ್ರಭಾಕರ ಶಾಸ್ತ್ರೀಜಿ ಗುರೂಜಿ ಮಾಂಗಲ್ಯಧಾರಣೆ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಸಿಕೊಟ್ಟರು.

ಅಳ್ನಾವರ: ಸುತ್ತಲೂ ಬೆಟ್ಟ ಗುಡ್ಡಗಳ ಸಾಲು ಸಾಲು, ಹಸಿರು ಹೊದಿಕೆ ಹೊತ್ತ ಪರಿಸರದ ಸೊಬಗಿನಲ್ಲಿ ಮೆಳೈಸಿದ ಸುಂದರ ಗ್ರಾಮ ಡೋರಿ. ಈ ಪುಟ್ಟ ಗ್ರಾಮದಲ್ಲಿ ಪ್ರಥಮ ಬಾರಿ ನಡೆಯುವ ಹತ್ತು ದಿನಗಳ ಕಾಲದ ಗ್ರಾಮದ ಆರಾಧ್ಯ ದೇವಿಯರಾದ ದ್ಯಾಮವ್ವ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ ಸಿಕ್ಕಿತು.

ನವೀಕರಣಗೊಂಡ ಸುಂದರ ದೇವಸ್ಥಾನದ ಆವರಣದಲ್ಲಿ ದೇವಿಯರ ಪ್ರಾಣ ಪ್ರತಿಷ್ಟಾಪನೆ, ಗಣ ಹೋಮ, ನವಗ್ರಹ ಹೋಮ, ಮಹಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ಪ್ರಭಾಕರ ಶಾಸ್ತ್ರೀಜಿ ಗುರೂಜಿ ಮಾಂಗಲ್ಯಧಾರಣೆ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಸಿಕೊಟ್ಟರು. ನಂತರ ಊರಿನ ಪಂಚರು ದೇವಿಗೆ ಉಡಿ ತುಂಬಿದರು. ಜೋಗುತಿಯರ ಪಡ್ಡಲಗಿ ತುಂಬುವ ಕಾರ್ಯ ನಡೆಯಿತು. ಗ್ರಾಮಸ್ಥರು ತಂಡೋಪ ತಂಡವಾಗಿ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಉಡಿ ತುಂಬಿದರು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆ ವ್ಯವಸ್ಥೆ ಹಿರಿಯರಾದ ವಿಕ್ರಂ ಇನಾಮದಾರ ಕುಟುಂಬದವರು ನೇರವೇರಿಸಿದರು. ತೇರಿನ ಕಳಸಾರೋಹಣ ಭಾನುವಾರ ನಡೆಯಿತು.

ಎಲ್ಲ ದೇವಸ್ಥಾನಗಳ ನವೀಕರಣ ಕಾರ್ಯ ನಡೆದಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮಂಗಳವಾರ, ಬುಧವಾರ, ಗುರುವಾರ ಮೂರು ದಿನ ಹೊನ್ನಾಟ ಇದೆ. ಮೇ 16ರಂದು ಭವ್ಯ ರಥೋತ್ಸವ ನಡೆಯಲಿದೆ. ನಂತರ ದೇವಿಯನ್ನು ಭಕ್ತರ ದರ್ಶನಕ್ಕಾಗಿ ಪಾದಗಟ್ಟೆಯಲ್ಲಿ ಪ್ರತಿಷ್ಟಾಪಿಸಲಾಗುವುದು. ಮೇ 17 ರಿಂದ 21ರ ವರೆಗೆ ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಕೀರ್ತನೆ, ಸಂಗೀತ ರಸ ಮಂಜರಿ ಹಾಸ್ಯ ಸಂಜೆ ಮುಂತಾದ ಕಾರ್ಯಕ್ರಮಗಳಿವೆ. ಮೇ 22 ರಂದು ದೇವಿಯರನ್ನು ಸೀಮೆಗೆ ಕಳುಹಿಸುವ ಕಾರ್ಯವಿದೆ.